ರಸ್ತೆ ಧೂಳಿಗೆ ಕಂಗಾಲಾದ ಪ್ರಯಾಣಿಕರು
ಚಿತ್ತಾಪುರ: ನಿತ್ಯ ಧೂಳು ತುಂಬಿದ ರಸ್ತೆಯಲ್ಲಿ ಪ್ರಯಾಣ ಮಾಡುವ ಜನತೆ ಧೂಳಿನ ಕಾಟಕ್ಕೆ ಕಂಗೆಟ್ಟು ಹೋಗಿದ್ದಾರೆ. ಮನೆಯಿಂದ ಹೋದವರು ಮನೆಗೆ ಬರುವವರೆಗೆ ಮೈತುಂಬಾ, ಬಟ್ಟೆ ತುಂಬಾ ಧೂಳು ಆವರಿಸಿಕೊಂಡಿರುತ್ತದೆ. ಈ ಕಾಟದಿಂದ ಯಾವಾಗ ಮುಕ್ತಿ ಸಿಗುತ್ತದೆ. ಧೂಳಿ ನಿಂದ ಮಾನಸಿಕವಾಗಿ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತ ಮಾಡಿದ್ದಾರೆ.
ಇಲ್ಲಿಂದ ಗುಲ್ಬರ್ಗಕ್ಕೆ ಸಂಪರ್ಕ ಕಲ್ಪಿಸುವ ವಾಗ್ದರಿ ರಿಬ್ಬನಪಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಮೊದಲಿದ್ದ ರಸ್ತೆ ಅಗೆದು ಮುರುಮ್ ಹಾಕಿದ್ದರಿಂದ ವಾಹನಗಳ ಸಂಚಾರಕ್ಕೆ ರಸ್ತೆಯುದ್ದಕ್ಕೂ ಧೂಳು ಮೇಲೆದ್ದು ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತ್ತಾಗಿದೆ.
ತೆಂಗಳಿ ಕ್ರಾಸ್ದಿಂದ ಗುಲ್ಬರ್ಗವರೆಗೂ ಧೂಳಿನಲ್ಲಿ ಪ್ರಯಾಣಿಸಬೇಕಾಗಿದೆ. ಬೇಸಿಗೆ ಕಾಲವಾಗಿದ್ದರಿಂದ ವಾಹನಗಳ ಓಡಾಟದ ರಭಸಕ್ಕೆ ವಿಪರೀತ ಧೂಳು ಏಳುತ್ತಿದೆ. ರಸ್ತೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಮುರುಮ್ ರಸ್ತೆಯ ಮೇಲೆ ನೀರು ಸಿಂಪರಣೆ ಮಾಡಬೇಕು. ಜನರು ಅನುಭವಿಸುತ್ತಿರುವ ತೊಂದರೆ ಬಗ್ಗೆ ಸಂಬಂಧಿತ ಇಲಾಖೆ ಅಧಿಕಾರಿ ಗಮನಿಸಬೇಕು ಎಂದು ಜನರು ಮನವಿ ಮಾಡಿದ್ದಾರೆ.
ದಿನಾಲೂ ಗುಲ್ಬರ್ಗದಿಂದ ಬರುವ ಸರ್ಕಾರಿ ನೌಕರರು ಬಸ್ಸಿನ ಮೂಲಕ ಬಂದು ಇಲ್ಲಿನ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಕೆಳಗಿಳಿದು ಮೈತುಂಬಾ ಆವರಿಸಿಕೊಂಡಿರುವ ಧೂಳು ಜಾಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ಮಹಿಳಾ ಸಿಬ್ಬಂದಿ, ಶಿಕ್ಷಕಿಯರು ಧೂಳಿನ ಕಾಟ ತಪ್ಪಿಸಿಕೊಳ್ಳಲು ಮುಖಕ್ಕೆ, ತಲೆಗೆ ಬಟ್ಟೆ ಕಟ್ಟಿಕೊಂಡು ಮುಸುಕುಧಾರಿಯಾಗಿ ಬರುವುದು ಅನಿವಾರ್ಯವಾಗಿದೆ ಎನ್ನುವ ಮಾತು ಗಳು ಕೇಳಿ ಬಂದಿವೆ.
ಈ ಮೊದಲು ಹದಗೆಟ್ಟ ರಸ್ತೆ ಸಂಚಾರಕ್ಕೆ ಜನರು ಬೇಸತ್ತು ಹೋಗಿ ್ದದರು. ಈಗ ಹೆದ್ದಾರಿ ನಿರ್ಮಾಣದಿಂದ ಸಂತೋಷವಾಗಿದೆ. ಕೆಲವೆಡೆ ಉತ್ತಮ ಗುಣಮಟ್ಟದ ಡಾಂಬರ್ ರಸ್ತೆ ನಿರ್ಮಾಣ ಆಗಿದೆ. ಕಾಮಗಾರಿ ಪೂರ್ಣವಾಗುವವರೆಗೆ ತೊಂದರೆ ಯಾದರೂ ಸರಿ. ಕೆಲವು ತಿಂಗಳುಗಳಲ್ಲಿ ಈ ಸಮಸ್ಯೆ ಶಾಶ್ವತವಾಗಿ ದೂರ ವಾಗುತ್ತದೆ ಎಂದು ಸಾರ್ವಜನಿಕ ಪ್ರಯಾಣಿಕರು ಹರ್ಷ ವ್ಯಕ್ತ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.