ಕುರಿಕೋಟಾ: ವಿದ್ಯಾರ್ಥಿಗಳ ಪರದಾಟ

7
ನಾಮಕಾವಾಸ್ತೆಯಾದ ಬಸ್‌ಪಾಸ್; ಗುಲ್ಬರ್ಗ ತಲುಪಲು ಹರಸಾಹಸ

ಕುರಿಕೋಟಾ: ವಿದ್ಯಾರ್ಥಿಗಳ ಪರದಾಟ

Published:
Updated:

ಗುಲ್ಬರ್ಗ: ಗುಲ್ಬರ್ಗ- ಬೀದರ್ ಮಾರ್ಗದಲ್ಲಿ ಕುರಿಕೋಟಾ ಸೇತುವೆ ದುರಸ್ತಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಬಸ್‌ಪಾಸ್ ಮೂಲಕ ಗುಲ್ಬರ್ಗಕ್ಕೆ ಬಂದು ಹೋಗುವ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸದ್ಯ ವಿದ್ಯಾರ್ಥಿಗಳು ಜೇಬಿನಿಂದ ಸಂಚಾರ ವೆಚ್ಚ ಭರಿಸುತ್ತಿದ್ದು, ಈ ಸಂಕಷ್ಟಕ್ಕೆ ಕೊನೆಯೆ ಇಲ್ಲ ಎನ್ನುವಂತಾಗಿದೆ.ಹುಮನಾಬಾದ, ಹಳ್ಳಿಖೇಡ, ಡೋಂಗರಗಾಂವ, ಕಮಲಾಪುರ, ಮಹಾಗಾಂವ ಕ್ರಾಸ್ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ವಿಧ್ಯಾಭ್ಯಾಸಕ್ಕಾಗಿ ಗುಲ್ಬರ್ಗಕ್ಕೆ ಬಂದು ಹೋಗುತ್ತಾರೆ. ಆರು ತಿಂಗಳಿಂದ ಬಸ್‌ಪಾಸ್ ಇದ್ದು ಇಲ್ಲದಂತಾಗಿದೆ. ಬಡ ವಿದ್ಯಾರ್ಥಿಗಳ ಕಷ್ಟವನ್ನು ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ  ಗಂಭೀರವಾಗಿ ಪರಿಗಣಿಸುತ್ತಿಲ್ಲ.ಕುರಿಕೋಟಾ ಸೇತುವೆ ದುರಸ್ತಿ ಕಾರ್ಯಕ್ಕೆ ಸರ್ಕಾರವು 6.38 ಕೋಟಿ ಮಂಜೂರು ಮಾಡಿದ್ದರೂ, ಗುತ್ತಿಗೆದಾರರು ಮಾತ್ರ ಕಾಮಗಾರಿಯನ್ನು ಪೂರ್ಣಗೊಳಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಚಿವ ಸಂಪುಟ ಪೂರ್ವ ಹಾಗೂ ಅನಂತರ ಕಾಮಗಾರಿ ಪ್ರಗತಿಯನ್ನು ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಒಂದೇ ಒಂದು ಕಂಕರ ಕಲೆಸುವ ಯಂತ್ರವನ್ನು ಇಟ್ಟುಕೊಂಡು ಒಂದೊಂದೇ ಕಮಾನುಗಳನ್ನು ದುರಸ್ತಿ ಮಾಡುತ್ತಿದ್ದಾರೆ.ಒಂದು ಕಮಾನು ದುರಸ್ತಿ ಕಾರ್ಯಕ್ಕೆ ಐದು ತಿಂಗಳಾಯಿತು. ಇನ್ನುಳಿದ ಐದು ಕಮಾನುಗಳ ದುರಸ್ತಿ ಮಾಡಲು ಇನ್ನೆಷ್ಟು ತಿಂಗಳು ಕಾಯಬೇಕು ಎನ್ನುವುದು ವಿದ್ಯಾರ್ಥಿಗಳಿಗೆ ಚಿಂತೆ ಎದುರಾಗಿದೆ.ಇಷ್ಟೊಂದು ಹಣ ಬಿಡುಗಡೆ ಮಾಡಿದ್ದರೂ ಕೆಲಸ ಪೂರ್ಣಗೊಳಿಸಿ ಸೇತುವೆಮೇಲೆ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಸರ್ಕಾರ, ಜಿಲ್ಲಾಡಳಿತ, ಚುನಾಯಿತ ಜನಪ್ರತಿನಿಧಿಗಳು ತಾಕೀತು ಮಾಡದೆ ಇರುವುದು ವಿದ್ಯಾರ್ಥಿಗಳಷ್ಟೇ ಅಲ್ಲ, ಪಾಲಕರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಮೂರು ತಿಂಗಳಲ್ಲಿ ದುರಸ್ತಿ ಕೆಲಸ ಪೂರ್ಣಗೊಳಿಸುವುದಾಗಿ ಸಚಿವರು ಸಂಸದರು ನೀಡಿದ ಭರವಸೆ ಮಾತಿನಲ್ಲೇ ಉಳಿದಿದೆ.

ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯ ಮುಂತಾದೆಡೆ ವ್ಯಾಸಂಗ ಮಾಡುವ ಅನೇಕ ವಿದ್ಯಾರ್ಥಿಗಳು ವಾರ್ಷಿಕ ನಿಗದಿತ ಹಣತುಂಬಿ ಬಸ್‌ಪಾಸ್ ಹೊಂದಿದ್ದಾರೆ.ಜಿಲ್ಲಾ ಕೇಂದ್ರ ಹಾಗೂ ಗ್ರಾಮಗಳ ಮಧ್ಯೆ ಪ್ರತಿದಿನ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಸಂಚರಿಸುತ್ತಿದ್ದವರು `ಸೇತುವೆ ಸಮಸ್ಯೆ'ಯಿಂದ ಬಸ್‌ಪಾಸ್ ಹೆಸರಿಗಷ್ಟೆ ಎನ್ನುವಂತಾಗಿದೆ. ಮನೆಯಿಂದ ಎರಡು ಗಂಟೆ ಮೊದಲೇ ಹೊರಟರೂ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ ಎನ್ನುವ ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ಮುಂತಾದ ವಿವಿಧ ವೃತ್ತಿಪರ  ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗೋಳು ತೋಡಿಕೊಳ್ಳುತ್ತಿದ್ದಾರೆ.ಕಮಲಾಪುರದಲ್ಲಿ ಬಸ್ ಹತ್ತಿ ಕುರಿಕೋಟಾ ಸೇತುವೆ ಒಂದು ಭಾಗದಲ್ಲಿ ಇಳಿದರೆ, ಸೇತುವೆ ದಾಟಿ ಬಂದರೆ ಇನ್ನೊಂದು ದಡದಲ್ಲಿ  ಗುಲ್ಬರ್ಗಕ್ಕೆ ಹೋಗಲು ಬಸ್ ಇರುವುದಿಲ್ಲ. ಬಸ್ ಇದ್ದರೂ ಭರ್ತಿಯಾಗುವವರೆಗೆ ಕಾಯಬೇಕು.`ನವೆಂಬರ್ 20ರಂದು ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ತರಾತುರಿಯ ನಿರ್ಧಾರದಿಂದ ರಾಜಕೀಯ ಮುಖಂಡರು ಸಂಚರಿಸುವ ಕಾರು, ಜೀಪುಗಳಿಗಷ್ಟೇ ಅನುಕೂಲವಾಗಿದೆ, ಬಸ್‌ಗಳಲ್ಲಿ ಸಂಚರಿಸುವ ಬಡ ಜನರು, ವಿದ್ಯಾರ್ಥಿಗಳ ತೊಂದರೆ ನಿವಾರಣೆ ಆಗಿಲ್ಲ' ಎಂದು ಆರೋಪಿಸುತ್ತಾರೆ ಸಂಶೋಧನಾ ವಿದಾರ್ಥಿ ಸಜೀವಕುಮಾರ ಪಂಗರಗಿ.ಕ್ರೂಸರ್‌ಗಳು ಓಡಾಡುತ್ತಿವೆ. ಆದರೆ ಇವುಗಳಲ್ಲಿ ಸಂಚರಿಸಿದರೆ ಯಾವಾಗ ಇಹಲೋಕ ತ್ಯಜಿಸುತ್ತೇವೋ ಗೊತ್ತಾಗುವುದಿಲ್ಲ ಎಂಬ ಭಯ ಜನರಲ್ಲಿದೆ. ಕ್ರೂಸರ್ ಪ್ರಯಾಣವೆಚ್ಚವು ದುಬಾರಿಯಾಗಿ ಎಲ್ಲರಿಗೂ ಹೊರೆಯಾಗಿದೆ. ವಿದ್ಯಾರ್ಥಿಗಳ ಪರೀಕ್ಷಾ ದಿನಗಳು ಸಮೀಪಿಸುತ್ತಿವೆ.  ಗುತ್ತಿಗೆದಾರರು ಹೆಚ್ಚಿನ ಯಂತ್ರ ಹಾಗೂ ಮಾನವ ಸಂಪನ್ಮೂಲ ಬಳಸಿಕೊಂಡು ಉಳಿದ ಎಲ್ಲ ಕಮಾನುಗಳನ್ನು ಒಮ್ಮೆಲೆ ದುರಸ್ತಿ ಮಾಡಿ ಬಸ್ ಸಂಚಾರಕ್ಕೆ ಅವಕಾಶ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.

ದುರಸ್ತಿಗೆ ಇನ್ನು ನಾಲ್ಕು ತಿಂಗಳು....

ಸೇತುವೆಯ ಆರು ಕಮಾನುಗಳಲ್ಲಿ ಒಂದರ ದುರಸ್ತಿ ಕಾರ್ಯ ಮುಗಿದಿದೆ. ಇನ್ನು ಎರಡು ಕಮಾನುಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಇದನ್ನು ಈ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಇನ್ನುಳಿದ ಮೂರು ಕಮಾನುಗಳ ದುರಸ್ತಿಗೆ ಮಾರ್ಚ್‌ವರೆಗೆ ಕಾಲಾವಕಾಶ ಬೇಕಾಗುತ್ತದೆ. ಆ ಬಳಿಕ ಭಾರಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.  ಮೂರು ತಿಂಗಳು ಕಾಲಾವಕಾಶ ಬೇಕೇಬೇಕು ಅಲ್ಲಿಯವರೆಗೂ ಬಸ್ ಸಂಚಾರ ಅವಕಾಶ ಇಲ್ಲ.

- ದೇವಿದಾಸ ಚವ್ಹಾಣ, ಹೆದ್ದಾರಿ ಎಂಜಿನಿಯರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry