ಸ್ಪಷ್ಟ ಮಾರ್ಗಸೂಚಿಗೆ ಎಬಿವಿಪಿ ಆಗ್ರಹ

7

ಸ್ಪಷ್ಟ ಮಾರ್ಗಸೂಚಿಗೆ ಎಬಿವಿಪಿ ಆಗ್ರಹ

Published:
Updated:

ಗುಲ್ಬರ್ಗ: ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಲಾಯಿತು.ರಾಜ್ಯ ಸರ್ಕಾರವು ಮತ್ತಷ್ಟು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಹಸಿರುನಿಶಾನೆ ತೋರಲು ಹೊರಟಿದೆ. ಆದರೆ ಈ ಸಂಬಂಧ ಯಾವುದೇ ಸ್ಪಷ್ಟ ಮಾರ್ಗಸೂಚಿ ಹೊಂದಿಲ್ಲ ಎಂದು ಕಾರ್ಯಕರ್ತರು ಟೀಕಿಸಿದರು. “ಈಗ ಅಸ್ತಿತ್ವದಲ್ಲಿರುವ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮೊದಲಿಗೆ ಮಾರ್ಗಸೂಚಿ ರೂಪಿಸಿ, ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಎಲ್ಲ ವಿದ್ಯಾರ್ಥಿಗಳು ಭರಿಸುವಂಥ ಶುಲ್ಕ ನೀತಿ ರೂಪಿಸಬೇಕು” ಎಂದು ನಗರ ಕಾರ್ಯದರ್ಶಿ ಪ್ರವೀಣ ನಾಯಕ ಒತ್ತಾಯಿಸಿದರು.ಪ್ರಸ್ತುತ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಹಲವು ಖಾಸಗಿ ವಿವಿ ಸ್ಥಾಪನೆ ವಿಧೇಯಕ ಮಂಡನೆಯಾಗಲಿದೆ ಎಂದು ತಿಳಿದುಬಂದಿದೆ. ಆದರೆ ಪೂರ್ವತಯಾರಿ ಹಾಗೂ ಮಾರ್ಗಸೂಚಿ ಇಲ್ಲದೇ ಖಾಸಗಿ ವಿವಿ ಪ್ರಾರಂಭಿಸಲು ಹೊರಟಿರುವ ಸರ್ಕಾರದ ಕ್ರಮ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಾಗಲೇ ಯುಜಿಸಿಯ ಕಪ್ಪುಪಟ್ಟಿಯಲ್ಲಿ ಸೇರಿರುವ ಹಲವು ಡೀಮ್ಡ ವಿಶ್ವವಿದ್ಯಾಲಯಗಳು ಬೇರೆ ಬೇರೆ ಹೆಸರಿನಲ್ಲಿ ಖಾಸಗಿ ವಿವಿ ಸ್ಥಾಪನೆಗೆ ಮುಂದಾಗಿರುವ ಮಾಹಿತಿಯಿದ್ದು ಸರ್ಕಾರ ಈ ವಿಷಯವನ್ನು ಲಘುವಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದರು.“ಖಾಸಗಿ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ತಮ್ಮ ವ್ಯಾಪಾರ ಕೇಂದ್ರವನ್ನು ತೆರೆಯಲು ಯತ್ನಿಸುತ್ತಿವೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ಕಾಪಾಡಲು ಸೀಟು ಹಂಚಿಕೆ, ಶುಲ್ಕ ನಿಗದಿ, ಸಿಬ್ಬಂದಿ ನೇಮಕ, ರೋಸ್ಟರ್ ನಿಯಮಾವಳಿ ಹಾಗೂ ಮೆರಿಟ್ ನಿಯಂತ್ರಣವನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳಬೇಕು” ಎಂದು ಕಾರ್ಯಕರ್ತರು ಆಗ್ರಹಿಸಿದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜು ತಳವಾರ, ಜಿಲ್ಲಾ ಸಹ ಸಂಚಾಲಕ ಭಾಗಣ್ಣ ತಳವಾರ, ಪದಾಧಿಕಾರಿಗಳಾದ ಶರಣು ಕುಮಸಿ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry