ರೈತರಿಗೆ ಮಾಹಿತಿ; ಸಮಸ್ಯೆಗೆ ಪರಿಹಾರ

7

ರೈತರಿಗೆ ಮಾಹಿತಿ; ಸಮಸ್ಯೆಗೆ ಪರಿಹಾರ

Published:
Updated:

ಗುಲ್ಬರ್ಗ: ಆಧುನಿಕ ಬೇಸಾಯ ಕ್ರಮಗಳು, ಪ್ರಾತ್ಯಕ್ಷಿಕೆ ಹಾಗೂ ತಾಕುಗಳ ಭೇಟಿ ಮೂಲಕ ಸ್ಥಳದಲ್ಲೇ ರೈತರಿಗೆ ಮಾಹಿತಿ ಕೊಡುವ ಉದ್ದೇಶದಿಂದ ಇಲ್ಲಿನ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಸಂಯುಕ್ತವಾಗಿ ಇದೇ 8ರಿಂದ 10ರವರೆಗೆ `ಕೃಷಿ ಮೇಳ'ವನ್ನು ಹಮ್ಮಿಕೊಂಡಿವೆ.“ಕೇಂದ್ರದಲ್ಲಿ ನಡೆಯುವ ಸಂಶೋಧನೆಗಳನ್ನು ರೈತರಿಗೆ ಪರಿಚಯಿಸುವ ಸಲುವಾಗಿ ಕಳೆದ ಏಳು ವರ್ಷಗಳಿಂದ ನಡೆಸುತ್ತಿರುವ ಮೇಳದಲ್ಲಿ ವಿವಿಧ ಬೆಳೆಗಳ ಆಧುನಿಕ ಬೇಸಾಯ ಕ್ರಮದ ಮಾಹಿತಿ ಹಾಗೂ ರೈತರ ಸಮಸ್ಯೆಗೆ ಪರಿಹಾರ ನೀಡಲಾಗುತ್ತಿದೆ” ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಬಿ.ಟಿ.ಪೂಜಾರಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆಯುವ ಈ ಮೇಳದಲ್ಲಿ ಕೃಷಿ ವಸ್ತು ಪ್ರದರ್ಶನ, ಕೃಷಿ ಯಂತ್ರೋಪಕರಣ, ಮಣ್ಣು ಪರೀಕ್ಷಾ ಕೇಂದ್ರದ ಬಗ್ಗೆ ಸ್ಥಳದಲ್ಲೇ ಮಾಹಿತಿ ನೀಡಲಾಗುವುದು. ವಿವಿಧ ಇಲಾಖೆಗಳು, ಕೃಷಿ ಪರಿಕರ ತಯಾರಿಕೆ ಸಂಸ್ಥೆಗಳು, ಕೃಷಿ ಯಂತ್ರೋಪಕರಣ ಮಾರಾಟಗಾರರು, ಸ್ವಯಂಸೇವಾ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ಹಣಕಾಸು ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ರೈತರು ಹಾಗೂ ವಿಜ್ಞಾನಿಗಳ ಸಂವಾದವನ್ನೂ ಆಯೋಜಿಸಲಾಗಿದೆ ಎಂದು ವಿವರಿಸಿದರು.8ರಂದು (ಶನಿವಾರ) ಬೆಳಿಗ್ಗೆ 11ಕ್ಕೆ ಮೇಳವನ್ನು ರೇವುನಾಯಕ ಬೆಳಮಗಿ ಉದ್ಘಾಟಿಸುವರು. ವಿವಿಧ ಶಾಸಕರು ಹಾಗೂ ಸಂಸದರು, ರಾಯಚೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಬಿ.ವಿ.ಪಾಟೀಲ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು. ಮೂರು ದಿನಗಳ ಕಾಲ ನಡೆಯುವ ಮೇಳಕ್ಕೆ ಶಾಲೆ- ಕಾಲೇಜು ವಿದ್ಯಾರ್ಥಿಗಳನ್ನೂ ಆಹ್ವಾನಿಸಲಾಗಿದೆ ಎಂದು ಡಾ. ಬಿ.ಟಿ.ಪೂಜಾರಿ ವಿವರಿಸಿದರು. ಡಾ. ಪಿ.ಎಸ್.ಧರ್ಮರಾಜ್, ಡಾ. ಕಾಂತರಾಜು ಇತರರು ಉಪಸ್ಥಿತರಿದ್ದರು.ಹಿನ್ನೆಲೆ: ಗುಲ್ಬರ್ಗ ಜಿಲ್ಲೆಯ ಪ್ರಮುಖ ಬೆಳೆಗಳೆಂದರೆ- ತೊಗರಿ, ಕಡಲೆ ಹಾಗೂ ಜೋಳ. ಈ ಭಾಗದ ರೈತರ ಸಮಸ್ಯೆಗೆ ಸ್ಪಂದಿಸಲು 1974ಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಲಾಯಿತು. ಈ ಕೇಂದ್ರದಿಂದ ಈವರೆಗೆ 10 ತೊಗರಿ ತಳಿ ಹಾಗೂ ಆರು ಕಡಲೆ ತಳಿ ಬಿಡುಗಡೆ ಮಾಡಲಾಗಿದೆ. ಈ ಕೇಂದ್ರ ಅಭಿವೃದ್ಧಿಪಡಿಸಿದ ತೊಗರಿ ಕಾಯಿಕೊರಕದ ಸಮಗ್ರ ಪೀಡೆ ನಿರ್ವಹಣೆ ಕಾರ್ಯಕ್ರಮವಿ ವಿವಿ ವಿಸ್ತರಣಾ ವಿಭಾಗದ ಮೂಲಕ ರೈತರಿಗೆ ಯಶಸ್ವಿಯಾಗಿ ತಲುಪಿದೆ.ಈ ಕೇಂದ್ರವು ಧಾರವಾಡ ಕೃಷಿ ವಿವಿಯಿಂದ `ಅತ್ಯುತ್ತಮ ಸಂಶೋಧನಾ ಕೇಂದ್ರ' ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. 1999-2000ರ ಸಾಲಿನಿಂದ ಕೃಷಿ ವಿಜ್ಞಾನ ಕೇಂದ್ರ ಆರಂಭವಾಗಿದ್ದು, ರೈತರಿಗೆ ತಾಂತ್ರಿಕ ಮಾಹಿತಿ ನೀಡುತ್ತಿದೆ. ಪ್ರತಿ ದಿನ 5,000 ರೈತರಿಗೆ ತಾಂತ್ರಿಕ ಮಾಹಿತಿಯನ್ನು ಮೊಬೈಲ್ ಮೂಲಕ ರವಾನಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry