ಮರೆತೆವೆ ನಾವು ಮುಳುಗಡೆಯಾದವರ?

7

ಮರೆತೆವೆ ನಾವು ಮುಳುಗಡೆಯಾದವರ?

Published:
Updated:

ಕಳೆದ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಹಾಗೂ ಅಕ್ಟೋಬರ್ ತಿಂಗಳ ಆರಂಭದಲ್ಲಿ ಉತ್ತರ ಕರ್ನಾಟಕದ 14-15 ಜಿಲ್ಲೆಗಳನ್ನು ಕಾಡಿದ ಮಹಾಪೂರ, ಸಂತ್ರಸ್ತರಾದ ಲಕ್ಷಾಂತರ ಜನರ ಪಡಿಪಾಟಲನ್ನು ಎಲ್ಲರೂ ಮರೆತುದು ಇಂಥ ಒಂದು ಶಾಪ. ಮಾತಾ ಅಮೃತಾನಂದಮಯಿ ಮಠದವರು ಮೊನ್ನೆ ನೂರು ಮನೆಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡದೇ ಇದ್ದರೆ ಸಂತ್ರಸ್ತರ ಪಾಡು ನಮಗೆ ನೆನಪು ಆಗುತ್ತಿತ್ತೋ ಇಲ್ಲವೋ ಹೇಳುವುದು ಕಷ್ಟ. ನೆನಪು ಆಗುತ್ತಿರಲಿಲ್ಲ ಎಂಬುದೇ ನಿಜ.ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಎರಡು ಲಕ್ಷ ಮನೆಗಳು ಬಿದ್ದಿವೆ. 1.78 ಕೋಟಿ ಜನ ಸಂತ್ರಸ್ತರಾಗಿದ್ದಾರೆ. ಈ ಸಂತ್ರಸ್ತರೆಲ್ಲ ಒಂದೋ ಮುರಿದು ಬಿದ್ದ ಮನೆಯಲ್ಲಿಯೇ ವಾಸವಾಗಿದ್ದಾರೆ; ಇಲ್ಲವೇ ಸರ್ಕಾರ ಊರ ಹೊರಗೆ ಒದಗಿಸಿದ ತಾತ್ಕಾಲಿಕ ಟಿನ್ (ತಗಡು) ಶೆಡ್‌ಗಳಲ್ಲಿ ತಂಗಿದ್ದಾರೆ.ಕರ್ನಾಟಕ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಹಾಪೂರಕ್ಕೆ ತುತ್ತಾದಾಗ ಯಡಿಯೂರಪ್ಪ ಮತ್ತು ಅವರ ಸಂಪುಟದ ಸದಸ್ಯರು ಮೈಸೂರಿನ ಸುತ್ತೂರು ಮಠದಲ್ಲಿ ಯೋಗ ಕಲಿಯುತ್ತ ರಿಲ್ಯಾಕ್ಸ್ ಮಾಡುತ್ತಿದ್ದರು. ಯೋಗ ಮುಗಿಸಿ ಬೆಂಗಳೂರಿಗೆ ಬಂದ ಯಡಿಯೂರಪ್ಪನವರಿಗೆ ಏನು ತಿಳಿಯಿತೋ ಏನೋ, ಬುದ್ಧ ಎದ್ದು ಹೊರಟಂತೆ, ಮಧ್ಯರಾತ್ರಿ ಎದ್ದು ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಹೊರಟರು. ವಾಪಸು ಬಂದು ಬೆಂಗಳೂರಿನ ಗಲ್ಲಿ, ಗಲ್ಲಿಗಳಲ್ಲಿ ಜೋಳಿಗೆ ಹಿಡಿದು ನಿಂತರು. ಜನರು ಉದಾರವಾಗಿ ದೇಣಿಗೆ ಕೊಟ್ಟರು. ಮಾಧ್ಯಮಗಳಲ್ಲಿ ಬಂದ ಸಂತ್ರಸ್ತರ ಪಡಿಪಾಟಲಿನ ವರದಿಗಳನ್ನು ನೋಡಿ ಮಠ-ಮಾನ್ಯಗಳು, ಕಾರ್ಪೊರೇಟ್ ಸಂಸ್ಥೆಗಳು ಉದಾರವಾಗಿ ಮನೆ ಕಟ್ಟಿಕೊಡುವ ಭರವಸೆ ಕೊಟ್ಟವು. ಹೀಗೆ ಭರವಸೆ ಕೊಟ್ಟ ಸಂಸ್ಥೆಗಳ ಸಂಖ್ಯೆ 53. ಅವರು ಕಟ್ಟಿ ಕೊಡುತ್ತೇವೆ ಎಂದು ಹೇಳಿದ ಮನೆಗಳ ಸಂಖ್ಯೆ ಸುಮಾರು 74,000.

 


ಇದಾಗಿ ಐದು ತಿಂಗಳು ಕಳೆದು ಹೋಗಿದೆ. ಮುಖ್ಯಮಂತ್ರಿಗಳ ಕಚೇರಿ ಮೂಲಗಳು ಹೇಳಿದ್ದು, ‘ನಮಗೆ ಆರು ತಿಂಗಳು ಸಮಯ ಕೊಡಿ. ನೀವೇ ನೋಡಿ ಹೇಗೆ ಪ್ರಗತಿ ಆಗಿರುತ್ತದೆ. ಆಗಿಲ್ಲದೇ ಇದ್ದರೆ ನಮ್ಮನ್ನು ಹರಾಜು ಹಾಕಿ’ ಎಂದು. ಬಳ್ಳಾರಿ, ರಾಯಚೂರು, ವಿಜಾಪುರಗಳಲ್ಲಿ ಏನಾಗಿದೆ ಎಂದು ಸುಮ್ಮನೆ ವಿಚಾರಿಸಿದೆ. ರಾಯಚೂರು ಜಿಲ್ಲೆ ಡೊಂಗರಾಂಪುರ ಹಳ್ಳಿಯಲ್ಲಿ ಮಾತಾ ಅಮೃತಾನಂದಮಯಿ ಮಠದವರು ಕಟ್ಟಿದ ನೂರು ಮನೆಗಳನ್ನು ಬಿಟ್ಟರೆ ಒಂದೇ ಒಂದು ಮನೆ ನಿರ್ಮಾಣವಾಗಿಲ್ಲ. ಅಲ್ಲಿ, ಇಲ್ಲಿ ಒಂದು ಮಾದರಿ ಮನೆಗಳು ಮಾತ್ರ ನಿರ್ಮಾಣವಾಗಿವೆ. ಕೆಲವು ಕಡೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಕಚ್ಚಾ ರಸ್ತೆ, ಚರಂಡಿ ಕೆಲಸ ಮಾತ್ರ ಆಗಿದೆ. ಇನ್ನೂ ಹಲವು ಕಡೆ ಭೂಮಿ ಸ್ವಾಧೀನ ಪ್ರಕ್ರಿಯೆಯೇ ನಡೆದಿಲ್ಲ. ಮನೆ ಕಟ್ಟುವುದು ದೂರದ ಮಾತೇ ಸರಿ.ಸರ್ಕಾರ ಭರವಸೆ ಕೊಟ್ಟಂತೆ ಆರು ತಿಂಗಳಲ್ಲಿ ಕೊಂಚವಾದರೂ ಪ್ರಗತಿ ಮಾಡಬಹುದಿತ್ತೋ ಏನೋ? ಆದರೆ, ಅಕ್ಟೋಬರ್ ಅಂತ್ಯದಲ್ಲಿಯೇ ಯಡಿಯೂರಪ್ಪ ಸರ್ಕಾರಕ್ಕೆ ಭಿನ್ನಮತದ ಬರಸಿಡಿಲು ಬಂದು ಅಪ್ಪಳಿಸಿತು. ಸೋಜಿಗ ಎಂದರೆ, ಗಣಿಧಣಿಗಳೆಲ್ಲ ಸೇರಿ ಪ್ರವಾಹ ಸಂತ್ರಸ್ತರಿಗೆ 500 ಕೋಟಿ ರೂಪಾಯಿ ವೆಚ್ಚದಲ್ಲಿ 50,000 ಮನೆಗಳನ್ನು ಕಟ್ಟಿಕೊಡುವ ವಿಚಾರದಲ್ಲಿ ಈ ಭಿನ್ನಮತ ಸ್ಫೋಟಿಸಿದ್ದಂತೆ (ಹಾಗೆಂದು ರೆಡ್ಡಿ ಸೋದರರು ಮಾಧ್ಯಮದ ಮುಂದೆ ಹೇಳಿಕೊಂಡರು). ‘ಪ್ರವಾಹ ಸಂತ್ರಸ್ತರಿಗೆ 50,000 ಮನೆಗಳನ್ನು ಕಟ್ಟಿಕೊಡುವುದು ನಮ್ಮ ಉದ್ದೇಶ. ಆದರೆ, ಅದರಿಂದ ನಮಗೆ ಜನಪ್ರಿಯತೆ ಬರುತ್ತದೆ ಎಂದು ಕೆಲವರು (ಯಡಿಯೂರಪ್ಪ) ಇಡೀ ಯೋಜನೆಗೆ ಕಲ್ಲು ಹಾಕುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗ ಮಾಡುತ್ತಿದ್ದಾರೆ’ ಎಂದು ಜನಾರ್ದನ ರೆಡ್ಡಿ ಕಳೆದ ನವೆಂಬರ್‌ನಲ್ಲಿ ಹೇಳಿದ್ದರು.ಅದಿರು ಸಾಗಿಸುವ ಪ್ರತಿ ಲಾರಿಯ ಮೇಲೆ 1,000 ರೂಪಾಯಿ ಶುಲ್ಕ ವಿಧಿಸಿದ್ದು ಭಿನ್ನಮತ ಸ್ಫೋಟಿಸುವುದಕ್ಕೆ ಕಾರಣ ಎಂಬುದು ಎಲ್ಲರಿಗೂ ಗೊತ್ತಿತ್ತು. ‘ಈ ಶುಲ್ಕವನ್ನು ರದ್ದು ಮಾಡಿದರೆ ಗಣಿ ಮಾಲೀಕರಿಂದ ದಾನ ಪಡೆಯಲು ಸಾಧ್ಯವಾಗುತ್ತದೆ. ಅದೇ ಹಣವನ್ನು ಮನೆ ಕಟ್ಟಲು ಬಳಸಬಹುದು’ ಎಂದೂ ರೆಡ್ಡಿ ಸೋದರರ ನಿಕಟ ಮೂಲಗಳು ಹೇಳಿಕೊಂಡಿದ್ದವು. ಅಂತಿಮವಾಗಿ ರೆಡ್ಡಿ ಸೋದರರು ಯಡಿಯೂರಪ್ಪ ಅವರನ್ನು ಹೆಡಮುರಿಗೆ ಕಟ್ಟಿ ಹಾಕಿ ಹೇಗೆ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡರು ಎಂಬುದು ಈಗ ಇತಿಹಾಸ. ಅದಿರು ಲಾರಿಯ ಮೇಲೆ ಹಾಕಿದ್ದ ಶುಲ್ಕವೂ ಮರೆತು ಹೋಯಿತು. ಹಾಗೆಂದು ಉಳಿಸಿದ ಹಣವನ್ನು ಗಣಿ ಧಣಿಗಳು ಮನೆ ಕಟ್ಟಲು ಬಳಸಿದರೇ? ಇಲ್ಲವಲ್ಲ?ಅಕ್ಟೋಬರ್ ತಿಂಗಳಲ್ಲಿ ಭಿನ್ನಮತ ತಾರಕಕ್ಕೆ ಮುಟ್ಟಿದ ಸಮಯದಲ್ಲಿಯೇ ಬಳ್ಳಾರಿ ಜಿಲ್ಲೆ ಶಿರಗುಪ್ಪದಲ್ಲಿ ಕಂದಾಯ ಸಚಿವ ಕರುಣಾಕರರೆಡ್ಡಿಯವರು ಮನೆಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ದರು. ಕಂಸ (ಯಡಿಯೂರಪ್ಪ) ವಧೆಯ ಮಾತು ಕೇಳಿ ಬಂದುದು ಅದೇ ದಿನ. ಆ ಶಿರಗುಪ್ಪದಲ್ಲಿಯೇ ಈಗ ರೆಡ್ಡಿ ಸೋದರರು ‘ನಮ್ಮದು ಈ ಮನೆ’ ಎಂದು ತೋರಿಸಲು ಒಂದೇ ಒಂದು ಮನೆಯನ್ನೂ ಕಟ್ಟಿಲ್ಲ. ಶಿರಗುಪ್ಪದ ಜನರನ್ನು ವಿಚಾರಿಸಿದರೆ, ‘ಅವರು ಶಂಕುಸ್ಥಾಪನೆ ಮಾಡಿದ ದಿನವೂ ಸ್ವಂತ ದುಡ್ಡಿನಲ್ಲಿ ಮನೆ ಕಟ್ಟಿ ಕೊಡುತ್ತೇವೆ ಎಂದು ಹೇಳಿರಲಿಲ್ಲ!’ ಎನ್ನುತ್ತಾರೆ. ಶಿರಗುಪ್ಪದ ಸಮೀಪ ಆರು ಸಾವಿರ ಟಿನ್ ಶೆಡ್‌ಗಳಲ್ಲಿ ಜನರು ಜೀವನ ಮಾಡುತ್ತಿದ್ದಾರೆ. ಬಳ್ಳಾರಿ ಬಿಸಿಲು ಹೇಗಿರುತ್ತದೆ ಗೊತ್ತಲ್ಲ? ಈ ಬೇಸಿಗೆಯಲ್ಲಿ ಟಿನ್ ಶೀಟಿನ ಅಡಿಯಲ್ಲಿ ಜೀವನ ಮಾಡಲು ಆದೀತೇ? ಸಂತ್ರಸ್ತರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದೆ. ಟಿನ್ ಶೆಡ್ಡಿನಲ್ಲಿ ವಾಸಿಸುವಂತಿಲ್ಲ; ವಾಪಸು ಮನೆಗೂ ಹೋಗುವಂತಿಲ್ಲ.ನಿಸರ್ಗದ ಹೊಟ್ಟೆಯನ್ನು ಬಗೆಯುವವರಿಗೆ ಕರುಣೆ ಎಂಬುದು ಇರುವುದಿಲ್ಲ. ಅವರಿಗೆ ಲಾಭ ಹೇಗೆ ಮಾಡಿಕೊಳ್ಳಬೇಕು ಎಂಬುದು ಮಾತ್ರ ಗೊತ್ತಿರುತ್ತದೆ. ಹಿತಾಸಕ್ತಿಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ತಿಳಿದಿರುತ್ತದೆ. ಬಳ್ಳಾರಿ, ರಾಯಚೂರು ಭಾಗದಲ್ಲಿ ಒಂದು ಲಕ್ಷ ಮನೆಗಳನ್ನು ಕಟ್ಟುವ ಗುತ್ತಿಗೆಯನ್ನು ಜಗನ್‌ಮೋಹನ ರೆಡ್ಡಿ (ಆಂಧ್ರದ ದಿ.ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಪುತ್ರ) ಅವರ ಕಡೆಯವರಿಗೆ ಕೊಡಬೇಕು ಎಂದು ರೆಡ್ಡಿ ಸೋದರರು, ಈ ಹಿತಾಸಕ್ತಿಯ ಹಿನ್ನೆಲೆಯಲ್ಲಿಯೇ ತಾಕೀತು ಮಾಡಿದ್ದರು ಎನ್ನಲಾಗುತ್ತಿದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ರೆಡ್ಡಿ ಸೋದರರು, ಯಡಿಯೂರಪ್ಪ ಬೀದಿಗೆ ಬಂದು ಜಗಳ ಶುರು ಮಾಡುತ್ತಿದ್ದಂತೆಯೇ ಸಭ್ಯ ದಾನಿಗಳು ಆಸಕ್ತಿ ಕಳೆದುಕೊಂಡರು. ಪುನರ್ವಸತಿ ಕೆಲಸದಲ್ಲಿ ಸರ್ಕಾರಕ್ಕೇ ಆಸಕ್ತಿ ಇಲ್ಲದಿದ್ದರೆ ಬೇರೆಯವರಿಗೆ ಹೇಗೆ ಆಸಕ್ತಿ ಇರುತ್ತದೆ? ಅದರ ಜತೆಗೆ ಮನೆ ಕಟ್ಟಲು ಭೂಮಿ ಸಿಗದೇ ಇದ್ದುದು, ಸಿಕ್ಕರೂ ಜಮೀನು ಮಾಲೀಕರು ಹೆಚ್ಚು ಬೆಲೆಯನ್ನು ಕೇಳಿದ್ದು, ಅದರಿಂದ ಸರ್ಕಾರದ ಹಣಕಾಸಿನ ಲೆಕ್ಕಾಚಾರ ತಪ್ಪಿದ್ದು, ಗುತ್ತಿಗೆದಾರರು ಲಾಭ ಮಾಡಿಕೊಳ್ಳಲು ಹವಣಿಸಿದ್ದು... ಒಂದೇ ಎರಡೇ...? ಕಲ್ಯಾಣದ ಕೆಲಸಕ್ಕೆ ವಿಘ್ನಗಳು ಬಹಳ.ಈ ಎಲ್ಲ ವಿಘ್ನಗಳನ್ನು ಮೀರಿ ಅಮೃತಾನಂದಮಯಿ ಮಠದವರು ಮನೆ ಕಟ್ಟಿದ್ದಾರೆ. ಗುತ್ತಿಗೆದಾರರಿಗೆ ಅವರು ಕಾದು ಕೂಡ್ರಲಿಲ್ಲ. ತಾವೇ ಹಿಮಾಚಲ ಪ್ರದೇಶದಿಂದ ತಮ್ಮ ಎಂಜಿನಿಯರ್‌ಗಳನ್ನು ಕರೆಸಿ, ಕೆಲಸಗಾರರನ್ನು ಕರೆಸಿ ಮನೆಗಳ ನಿರ್ಮಾಣ ಮುಗಿಸಿದರು. ಇನ್ನೂ 250 ಮನೆಗಳನ್ನು ಅವರು ಕಟ್ಟಬೇಕು. ಉದ್ದೇಶ ಪ್ರಾಮಾಣಿಕವಾಗಿದ್ದರೆ, ಆ ಉದ್ದೇಶದ ಹಿಂದೆ ನೈಜ ಕಾಳಜಿ ಇದ್ದರೆ (ಈ ಕೆಲಸಕ್ಕೆ ಪ್ರತಿಯಾಗಿ ಸರ್ಕಾರದಿಂದ ಬೆಂಗಳೂರಿನಲ್ಲಿ ಆಶ್ರಮದ ಆಸ್ಪತ್ರೆಗೆ 15 ಎಕರೆ ಜಾಗ ಮತ್ತು ಐದು ಕೋಟಿ ರೂಪಾಯಿ ನೆರವು ತೆಗೆದುಕೊಂಡುದರಿಂದ ‘ವ್ಯಾಪಾರದ ಆಯಾಮ’ ಬಂದಿದ್ದರೂ) ಕೆಲಸ ಆಗುವುದು ಕಷ್ಟವಾಗುವುದಿಲ್ಲ. ಆದರೆ, ಸರ್ಕಾರ ನಡೆಸುವವರ ಉದ್ದೇಶಗಳು ಯಾವಾಗಲೂ ನಿಸ್ಪೃಹವಾಗಿರುವುದಿಲ್ಲ. ಅಲ್ಲಿ ಬರೀ ‘ವ್ಯಾಪಾರ’ ಮಾತ್ರ ಇರುತ್ತದೆ. ಅದಕ್ಕೇ ಸಮಸ್ಯೆಗಳು ಅಡ್ಡ ಬರುತ್ತವೆ.ಮರೆವು ಒಂದು ಶಾಪ ಎಂದೆ. ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಸಹಾನುಭೂತಿ ಪ್ರಕಟಿಸಲು ರಾಜ್ಯೋತ್ಸವವನ್ನು ರದ್ದು ಮಾಡಿತು. ಅದೇ ಸರ್ಕಾರ ಮುಂದೆ ನಿಂತು ಕೃಷ್ಣದೇವರಾಯನ ಪಟ್ಟಾಭಿಷೇಕ ಮಹೋತ್ಸವದ 500ನೇ ವರ್ಷವನ್ನು ಅದ್ಧೂರಿಯಾಗಿ ಆಚರಿಸಿತು. ಸರ್ಕಾರದ ಲೆಕ್ಕದ ಪ್ರಕಾರವೇ ಅದಕ್ಕೆ 13 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದಿಟ್ಟುಕೊಳ್ಳೊಣ. ರಾಜ್ಯೋತ್ಸವಕ್ಕೆ ಎಷ್ಟು ಖರ್ಚು ಬರುತ್ತಿತ್ತು? ‘ರಾಜ್ಯೋತ್ಸವ ಒಂದು ಸಂಭ್ರಮ. ಸೂತಕದ ಮನೆಯಲ್ಲಿ ಸಂಭ್ರಮ ಬೇಡ’ ಎನ್ನುವುದಾದರೆ ಬಳ್ಳಾರಿಯಂಥ ಸೂತಕದ ಜಿಲ್ಲೆಯಲ್ಲಿಯೇ ಕೃಷ್ಣದೇವರಾಯನ ಪಟ್ಟಾಭಿಷೇಕ ವರ್ಷಾಚರಣೆ ಮಾಡಿದ್ದು ಸಂಭ್ರಮ ಅಲ್ಲವೇ? ಬಳ್ಳಾರಿ ರೆಡ್ಡಿ ಸೋದರರಿಗೆ ತಮ್ಮದೇ ಜಿಲ್ಲೆಯಲ್ಲಿ ಮನೆ ಕಳೆದುಕೊಂಡ ಸಾವಿರಾರು ಜನರಿಗೆ ತಲೆ ಮೇಲೆ ಒಂದು ಸೂರು ಒದಗಿಸುವುದಕ್ಕಿಂತ ಪಟ್ಟಾಭಿಷೇಕ ವರ್ಷಾಚರಣೆ ಏಕೆ ಮುಖ್ಯ ಅನಿಸಿತು? ಯಡಿಯೂರಪ್ಪ ರಾಜ್ಯೋತ್ಸವ ಕೈ ಬಿಟ್ಟು ಸಾಧಿಸಿದ್ದೇನು? ಗದಗ ಸಾಹಿತ್ಯ ಸಮ್ಮೇಳನವನ್ನು ಸರಳವಾಗಿ ಆಚರಿಸಲು ಹೇಳಿ ಸಾಧಿಸುತ್ತಿರುವುದು ಏನು? ಒಂದಕ್ಕೊಂದು ಸಂಬಂಧವಿಲ್ಲ. ತರ್ಕವೂ ಕಾಣುವುದಿಲ್ಲ.ಕಾಲ ನಿಲ್ಲುವುದಿಲ್ಲ. ಸಮಯ ನಮಗಾಗಿ ಕಾಯುವುದಿಲ್ಲ. ಐದು ತಿಂಗಳು ಆದುದು ಆರು ತಿಂಗಳು ಆಗುತ್ತದೆ. ಬೇಸಿಗೆ ಮುಗಿದು ಮಳೆಗಾಲ ಬರುತ್ತದೆ. ಉತ್ತರ ಕರ್ನಾಟಕದ ಜನರ ದುರ್ದೈವಕ್ಕೆ ಈ ಸಾರಿಯೂ ಮತ್ತೆ ಭಾರಿ ಮಳೆ ಬಂದು ಮುರಿದು ಬಿದ್ದ ಅರ್ಧ ಮನೆ ಪೂರ್ತಿ ಬಿದ್ದರೆ, ಟಿನ್ ಶೆಡ್‌ಗಳು ಗಾಳಿಗೆ ಹಾರಿ ಹೋದರೆ ಹಳ್ಳಿಗರ ಬದುಕು ಬಟಾ ಬಯಲಾಗುತ್ತದೆ. ‘ಮರೆವು ಒಂದು ವರ, ಸಾರ್ವಜನಿಕರ ನೆನಪಿನ ಶಕ್ತಿ ಕಡಿಮೆ’ ಎಂದು ಸರ್ಕಾರ ಸುಮ್ಮನೆ ಕುಳಿತರೆ ಆಗದು. ಸಂತ್ರಸ್ತರಿಗೂ ಅಂಥದೇ ಮರೆವು ಇರಬೇಕಲ್ಲ? ಅದು ಶಾಪ ಆಗಲು ತಡವಾದೀತೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry