`ಇಲಾಖಾ ಸಮನ್ವಯತೆಯಿಂದ ಅಭಿವೃದ್ಧಿ'

7

`ಇಲಾಖಾ ಸಮನ್ವಯತೆಯಿಂದ ಅಭಿವೃದ್ಧಿ'

Published:
Updated:

ಗುಲ್ಬರ್ಗ: ಜಿಲ್ಲೆಯಲ್ಲಿ ಅಭಿವೃದ್ಧಿ ಹಾಗೂ ಶಾಂತಿ ಸುವ್ಯವಸ್ಥೆ ಉತ್ತಮ ಮಟ್ಟದಲ್ಲಿರಲು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜೊತೆಗೆ ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರ ಇಲಾಖೆಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕು. ಆಗ ಜಿಲ್ಲೆಯು ಖಂಡಿತವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.ವರ್ಗಾವಣೆಗೊಂಡ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ ಮಧುಕರ ಪವಾರ ಅವರಿಗೆ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಬೀಳ್ಕೊಡುಗೆ ಹಾಗೂ ನೂತನ ಪೊಲೀಸ್ ವರಿಷ್ಠಾಧಿಕಾರಿ ಎನ್. ಸತೀಶಕುಮಾರ ಅವರಿಗೆ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರವೀಣ ಮಧುಕರ ಪವಾರ ಜಿಲ್ಲೆಯಲ್ಲಿ 19 ತಿಂಗಳು ಕಾರ್ಯನಿರ್ವಹಿಸಿದ್ದಾರೆ. ಅವರ ಅವಧಿಯಲ್ಲಿ ಅಪರಾಧಗಳನ್ನು ಹತೋಟಿಗೆ ತಂದಿದ್ದಾರೆ. ಪವಾರ ಅವರಿಗೆ ಗುಪ್ತಚರ ವಿಭಾಗದಲ್ಲಿ ಅಪಾರ ಜ್ಞಾನವಿದ್ದು, ಈಗ ಸದ್ಯಕ್ಕೆ ರಾಜ್ಯದ ಗುಪ್ತಚರ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಯಾಗಿರುವುದು ಅವರ ಭವಿಷ್ಯತ್ತಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಹಾರೈಸಿದರು.ಜಿಪಂ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಶುಭಕೋರಿದರು. ಪ್ರವೀಣ ಮಧುಕರ ಪವಾರ ಮಾತನಾಡಿ ಯಾವುದೇ ಪ್ರದೇಶ ಶಾಂತವಾಗಿದೆ ಎಂದು ಹೇಳುವುದು ಬಹಳ ಕಷ್ಟ. ಜಿಲ್ಲೆಯ ಸುಮಾರು 2,000 ಪೊಲೀಸ್ ಸಿಬ್ಬಂದಿ ಪ್ರತಿದಿನ 8 ಗಂಟೆಗಳ ಕಾಲ ಕಾರ್ಯನಿರ್ವಹಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸಿದ್ದಾರೆ. ಅವರಿಗೆ ಹಾಗೂ ಗೃಹರಕ್ಷಕ ದಳ ಸಹ ಒಳ್ಳೆಯ ರೀತಿಯಿಂದ ಕೆಲಸ ನಿರ್ವಹಿಸಿದ್ದಕ್ಕಾಗಿ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.ನೂತನ ಪೊಲೀಸ್ ವರಿಷ್ಠಾಧಿಕಾರಿ ಎನ್. ಸತೀಶಕುಮಾರ ಮಾತನಾಡಿ ಪೊಲೀಸ್ ಇಲಾಖೆಯು ಜಿಲ್ಲಾಧಿಕಾರಿಗಳು ಆದೇಶಿಸಿದ ಕೆಲಸಗಳನ್ನು ಮುತುವರ್ಜಿ ವಹಿಸಿ ಕೈಗೊಳ್ಳುತ್ತದೆ. ಎಲ್ಲ ಇಲಾಖೆಗಳೊಂದಿಗೆ ನಮ್ಮ ಇಲಾಖೆಯೂ ಸಹಕರಿಸುವಂತೆ ನೋಡಿಕೊಳ್ಳಲಾಗುವುದು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಸೇಡಂ ಸಹಾಯಕ ಆಯುಕ್ತ ರವಿ, ಸಹಾಯಕ ಆಯುಕ್ತ ಹರ್ಷಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭೂಷಣ ಭೋಸರೆ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry