ಸೋಮವಾರ, ಮಾರ್ಚ್ 27, 2023
24 °C

ಭಕ್ತ ಸಾಗರದ ಮಧ್ಯೆ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಕ್ತ ಸಾಗರದ ಮಧ್ಯೆ ರಥೋತ್ಸವ

ಕಾಳಗಿ: ಸುಕ್ಷೇತ್ರ ಕೊಲ್ಲಿಪಾಕದಲ್ಲಿ ಉದ್ಭವಿಸಿ ರೇವಣಗಿರಿ (ರೇವಗ್ಗಿ)ಗೆ ಸಂಚಾರಗೈದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಅಂಗವಾಗಿ ಶುಕ್ರವಾರ ಸಂಜೆ ಇಲ್ಲಿನ ರೇವಗ್ಗಿ ಗುಡ್ಡದಲ್ಲಿ ಅಪಾರ ಸದ್ಭಕ್ತರ ಮಧ್ಯೆ ರೇವಣಸಿದ್ಧೇಶ್ವರ ರಥೋತ್ಸವ ಬಹು ವಿಜೃಂಭಣೆಯಿಂದ ನೆರವೇರಿತು.ಈ ನಿಮಿತ್ತ ಮುನ್ನದಿನ ಗುರುವಾರ ರಟಕಲ್ ವಿರೂಪಾಕ್ಷ ಶಿವಾಚಾರ್ಯರು, ರೇವಣಸಿದ್ಧ ಶರಣರು ಮತ್ತು ಸೇಡಂನ  ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ತಪೋಸ್ಥಾನದ ಮೂಲ ಗದ್ದುಗೆಗೆ ಮಹಾರುದ್ರಾಭಿಷೇಕ ಜರುಗಿತು. ಸಂಜೆ ವಿವಿಧ ಕಲಾ ತಂಡದವರಿಂದ ಸಂಗೀತ, ಶಿವಭಜನೆ ಕಾರ್ಯಕ್ರಮ ನಡೆದವು. ಜಯಂತಿಯ ಶುಕ್ರವಾರದ ಅಮೃತ ಸಿದ್ಧಿಯೋಗದಲ್ಲಿ ರೇವಣಸಿದ್ಧೇಶ್ವರ ಮೂರ್ತಿಗೆ ವಿಶೇಷ ಪೂಜೆ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಕೈಗೊಳ್ಳಲಾಯಿತು. ನಂತರ ವಟುಗಳ ದೀಕ್ಷಾ, ಅಯ್ಯಾಚಾರ ನಡೆದು ರೇವಪ್ಪಯ್ಯ ಮುತ್ತ್ಯಾ ಅವರ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.ಸುಮಂಗಲೆಯರಿಂದ ತೊಟ್ಟಿಲು ಕಾರ್ಯಕ್ರಮ ಜರುಗಿ ಸಂಜೆ ಆಗುತ್ತಿದ್ದಂತೆ ವಿವಿಧ ಹಳ್ಳಿಗಳಿಂದ ನಂದಿಕೋಲು ಆಗಮಿಸಿ ಭವ್ಯ ಮೆರವಣಿಗೆಗೆ ಇಂಬು ನೀಡಿದ್ದವು. ಕುಂಭ, ಕಳಸದ ಪುರವಂತರ ವಾದ್ಯವೃಂದದ ಝೇಂಕಾರದ ನಾದ ರಥದತ್ತ ಬಂದು ತಲುಪಿತು.ಈ ನಡುವೆ ನಾನಾ ಕಡೆಗಳಿಂದ ನೆರೆದಿದ್ದ ಸಹಸ್ರಾರು ಸದ್ಭಕ್ತರ ಜಯಘೋಷ ಮುಗಿಲು ಮುಟ್ಟಿತು.   ಕಾಳಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೆ.ಶರಣಬಸಪ್ಪ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.