ಫಲಾನುಭವಿಗಳಿಗೆ ದೂಳಿನ ಮಜ್ಜನ!

7
ಗುಲ್ಬರ್ಗ ತಹಸೀಲ್ದಾರ್ ಕಚೇರಿಗೆ ಬೇಕಿದೆ ಕಾಯಕಲ್ಪ

ಫಲಾನುಭವಿಗಳಿಗೆ ದೂಳಿನ ಮಜ್ಜನ!

Published:
Updated:

ಗುಲ್ಬರ್ಗ: ಮಳೆಗಾಲದಲ್ಲಿ ಕೆಸರುಗದ್ದೆ, ಇನ್ನುಳಿದ ತಿಂಗಳೆಲ್ಲ ದೂಳು ದುಮ್ಮಾನ ನೋಡಬೇಕೆಂದರೆ ಜಿಲ್ಲೆಯ ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸಬೇಕಿಲ್ಲ. ಗುಲ್ಬರ್ಗ ದಕ್ಷಿಣದ ತಹಸೀಲ್ದಾರ್ ಕಚೇರಿ ಆವರಣಕ್ಕೆ ಬಂದರೆ ಸಾಕು! ವಿವಿಧ ಪ್ರಮಾಣಪತ್ರ ಪಡೆಯಲು ಬರುವ ಜನರ ಮೈಮೇಲೆ, ವಾಹನಗಳ ಮೇಲೆ ಎಲ್ಲೆಂದರಲ್ಲಿ ದೂಳಿನ ಗೋಳು ಎದ್ದು ಕಾಣುತ್ತದೆ. ತಾಲ್ಲೂಕಿನ ಕಂದಾಯ ನಿರ್ವಹಿಸುವ ಸರ್ಕಾರಿ ಕಟ್ಟಡದ ಚಿತ್ರಣ ಅವ್ಯವಸ್ಥೆಯ ಆಗರದಂತಿದೆ.ಸೂಪರ್ ಮಾರ್ಕೆಟ್‌ಗೆ ಹೊಂದಿಕೊಂಡಿರುವ ತಹಸೀಲ್ದಾರ್ ಕಚೇರಿಗೆ ಸುಂದರ ತಡೆಗೋಡೆ ಇದೆ. ಆದರೆ ತಡೆಗೋಡೆಗೆ ತದ್ವಿರುದ್ಧ ವಿರೂಪವಾದ ಕಟ್ಟಡಗಳು ಒಳಗಡೆ ಇವೆ. ಹಳೆ ಕಟ್ಟಡವನ್ನು ಇದ್ದಕ್ಕಿದ್ದಂತೆ ಉಳಿಸಿಕೊಂಡು ತಹಸೀಲ್ದಾರ್ ಕಚೇರಿ ಕಾರ್ಯ ಚಟುವಟಿಕೆ ಮುಂದುವರಿಸಲಾಗಿದೆ. ಹಳೆ ಕಟ್ಟಡವನ್ನು ನವೀಕರಣಗೊಳಿಸದ ಕಾರಣ, ಮಹತ್ವದ ದಾಖಲೆಗಳ ಮೇಲೆ ಮಣ್ಣು ಸುರಿಯುವುದು ತೀರಾ ಸಾಮಾನ್ಯವಾದ ದೃಶ್ಯ ಕಂಡುಬರುತ್ತದೆ. ವಿವಿಧ ಪ್ರಮಾಣಪತ್ರಕ್ಕಾಗಿ ಬರುವ ಜನರು ವಿಶ್ರಮಿಸಲು ಸರಿಯಾದ ವ್ಯವಸ್ಥೆ ಇಲ್ಲ. ಅಧಿಕಾರಿಗಳಿಗಾಗಿ ಜನರು ಬಿಸಿಲಲ್ಲೆ ಬವಣೆ ಪಟ್ಟು ಕಾಯುವ ದೃಶ್ಯ ಕಾಣುತ್ತದೆ.ಗುಲ್ಬರ್ಗ ನಗರ, ತಾಜಸುಲ್ತಾನಪುರ, ಫರತಾಬಾದ್, ಅವರಾದ ಹೋಬಳಿಗಳ ಗ್ರಾಮಗಳು ದಕ್ಷಿಣ ತಹಸೀಲ್ದಾರ್ ಕಚೇರಿ ವ್ಯಾಪ್ತಿಯಲ್ಲಿವೆ. ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುವ ಏಕೈಕ ಸರ್ಕಾರಿ ಕಚೇರಿಯೂ ಇದೆ. ಜಾತಿ, ಆದಾಯ, ಮಾಸಾಶನ ಇತ್ಯಾದಿ ಪ್ರಮಾಣಪತ್ರಗಳನ್ನು ಪಡೆಯಲು ಯುವಕರು, ವಯೋವೃದ್ಧರು, ವಿಧವೆಯರು ಇಲ್ಲಿಗೆ ಬರುತ್ತಾರೆ. ಶಾಲಾ ಆರಂಭದ ದಿನಗಳಲ್ಲಂತೂ ಇಲ್ಲಿನ ನೆಮ್ಮದಿ ಕೇಂದ್ರ ತುಂಬಿ ತುಳುಕುತ್ತದೆ. ಸರದಿಯಲ್ಲಿ ನಿಂತುಕೊಳ್ಳುವುದಕ್ಕಿಂತ ಅಲ್ಲಿನ ಅವ್ಯವಸ್ಥಿತ ಪರಿಸರದಿಂದಾಗಿ ಜನರು ರೋಸಿ ಹೋಗುತ್ತಾರೆ.`ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಲು ನರಕಯಾತನೆ ಅನುಭವಿಸಬೇಕು. ಏನು ಪ್ರಮಾಣಪತ್ರ ಬೇಕೆಂದರೂ ನೆಮ್ಮದಿ ಕೇಂದ್ರಕ್ಕೆ ಹೋಗಬೇಕು. ಅಧಿಕಾರಿಗಳು ಊಟಕ್ಕೆ ಹೋದಾಗ, ಸಭೆಗಳಿಗೆ ಹೋದಾಗ ತಹಸೀಲ್ದಾರ್ ಕಚೇರಿಯಲ್ಲಿ ಕುಳಿತುಕೊಳ್ಳಲು ಆಗುವುದೇ ಇಲ್ಲ. ದೂಳು ಒಂದುಕಡೆಯಾದರೆ, ಕಾಯುವುದಕ್ಕೆ ಯಾವುದೇ ಆಸನಗಳ ವ್ಯವಸ್ಥೆ ಇಲ್ಲ. ಕಚೇರಿ ಆವರಣ ದೂಳಿನಲ್ಲಿ ಮುಳುಗುವುದರಿಂದ ಉಸಿರುಗಟ್ಟಿದ ಅನುಭವವಾಗುತ್ತದೆ' ಎನ್ನುತ್ತಾರೆ ಗಂಜ್ ನಿವಾಸಿ ಬಸವರಾಜ ಪಾಟೀಲ.`ಸಕಾಲ ಕಾಯ್ದೆ ಬಂದನಂತರ ಅಧಿಕಾರಿಗಳು ಲಂಚ ಕೇಳುವುದು ಕೂಡಾ ಕಾನೂನು ಆಗಿದೆ. ತಕ್ಷಣವೆ ಪ್ರಮಾಣಪತ್ರ ಬೇಕಿದ್ದರೆ ಅಧಿಕಾರಿಗಳಿಗೆ ಮನವಿ ಮಾಡಿದರೆ ಮೊದಲು ಸಾಕಿತ್ತು. ಈಗ ಮನವಿಗೆ ಕಿವಿಗೊಡದ ಅಧಿಕಾರಿಗಳು, ಸಕಾಲದಲ್ಲಿನ ನಿಗದಿತ ದಿನದ ನಂತರ ಬರುವಂತೆ ಸೂಚಿಸುತ್ತಾರೆ. ಅನಿವಾರ್ಯತೆಗೆ ಒಳಗಾಗುವ ಬಹಳಷ್ಟು ಫಲಾನುಭವಿಗಳು ಅಧಿಕಾರಿಗಳು ಕೇಳಿದಷ್ಟು ಲಂಚ ನೀಡುವ ಪರಿಸ್ಥಿತಿ ಎದುರಾಗಿದೆ' ಎನ್ನುತ್ತಾರೆ ಮಾಸಾಶನ ಬರದೆ ಪರದಾಡುತ್ತಿರುವ ವಿಧವೆ ಶಾಂತಮ್ಮ ಗುತ್ತೇದಾರ.ತಾಲ್ಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸಿ ತಹಸೀಲ್ದಾರ್ ಕಚೇರಿಗಳನ್ನು ಸುಸಜ್ಜಿತಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಆದರೆ ಗುಲ್ಬರ್ಗ ಜಿಲ್ಲೆಯಲ್ಲಿ ದಕ್ಷಿಣ ಹಾಗೂ ಉತ್ತರ ಭಾಗದ ಎರಡು ತಹಸೀಲ್ದಾರ್ ಕಚೇರಿಗಳು ಹಳೆ ಕಟ್ಟಡಗಳಲ್ಲೆ ಉಳಿದಿವೆ.`ಕಚೇರಿ ಆವರಣದಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕಲು ಈಗಾಗಲೇ ಪ್ರಸ್ತಾವ ಸಿದ್ಧಪಡಿಸಿ ಕಳುಹಿಸಿದ್ದೇವೆ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಈ ಬಗ್ಗೆ ಭರವಸೆ ನೀಡಿದ್ದಾರೆ. ಸದ್ಯ ದೂಳು ಬಹಳಷ್ಟಿದೆ. ಸಿಮೆಂಟ್ ಹಾಕುವವರೆಗೂ ಮುರಮ್ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು' ಎನ್ನುತ್ತಾರೆ ಗುಲ್ಬರ್ಗ ದಕ್ಷಿಣ ತಹಸೀಲ್ದಾರ್ ಮಹದೇವಪ್ಪ ಸಾಸನೂರ.ಗುಲ್ಬರ್ಗ ನಗರದ ಜನರಿಗಿಂತ ಗ್ರಾಮೀಣ ಭಾಗದಿಂದ ಬರುವ ಜನರು ತಹಸೀಲ್ದಾರ್ ಕಚೇರಿಯಲ್ಲಿ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಕುಳಿತುಕೊಳ್ಳಲು ಹಾಗೂ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮೀಣ ಜನರು ಹೋಟೆಲ್‌ಗಳ ಮೊರೆ ಹೋಗಬೇಕಿದೆ. ಇನ್ನಾದರೂ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ತಹಸೀಲ್ದಾರ್ ಕಚೇರಿಯ ನವೀಕರಣಕ್ಕೆ ಕ್ರಮ ಜರುಗಿಸಿ ಅನುಕೂಲ ಮಾಡಿಕೊಡಬೇಕೆಂಬ ಆಗ್ರಹ ಸಾರ್ವಜನಿಕರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry