ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಸಂಗಾತಿ

7
*`ಅನಾವರಣ' ಅಂಕಣಕಾರ ಅಮಿನ್‌ಮಟ್ಟು ಅಭಿವ್ಯಕ್ತಿ* ಉಪನ್ಯಾಸ-ಸಂವಾದ ಕಾರ್ಯಕ್ರಮ

ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಸಂಗಾತಿ

Published:
Updated:

ಗುಲ್ಬರ್ಗ: ಆರೋಗ್ಯಪೂರ್ಣ ಪ್ರಜಾಪ್ರಭುತ್ವದ ರಕ್ಷಣೆಗೆ ಮಾಧ್ಯಮ ತನ್ನ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು `ಪ್ರಜಾವಾಣಿ' ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು ಅಭಿಪ್ರಾಯ ಪಟ್ಟರು. `ಪ್ರಜಾಪ್ರಭುತ್ವದಲ್ಲಿ ಸಮೂಹ ಮಾಧ್ಯಮಗಳ ಪಾತ್ರ' ಕುರಿತು ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ನಡೆದ `ಉಪನ್ಯಾಸ-            ಸಂವಾದ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮುದಾಯ ಸಂಘಟನೆ, ಪ್ರಜ್ಞಾ ಕಾನೂನು ಸಲಹಾ ಸಮಿತಿ, ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಉಪನ್ಯಾಸ ಆಯೋಜಿಸಿತ್ತು.ಪ್ರಜಾಪ್ರಭುತ್ವ ಮತ್ತು ಮಾಧ್ಯಮ ಸಂಗಾತಿಗಳು.

ಪರಸ್ಪರ ಆರೋಗ್ಯವು ಪೂರಕ ಎಂದ ಅವರು, ರೂ. 20ಕ್ಕೂ ಕಡಿಮೆ ಆದಾಯದ ಶೇ 83 ಜನ, ಗಂಟೆಗೆ 2 ರೈತರ ಆತ್ಮಹತ್ಯೆ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 126ನೇ ಸ್ಥಾನ, ನೂರರಲ್ಲಿ ತೊಂಬತ್ತು ಮಕ್ಕಳು ಕಾಲೇಜು ಪ್ರವೇಶಿಸದ ಸ್ಥಿತಿ, ದಲಿತ ದೌರ್ಜನ್ಯ, ಅನ್ನ- ಸೂರು- ಚಿಕಿತ್ಸೆಗೂ ತತ್ವಾರ, ಆತ್ಮಗೌರವದಿಂದ ಬದುಕಲೂ ಆಗದ ಸ್ಥಿತಿಯ ದೇಶದಲ್ಲಿ `ಪ್ರಜಾಪ್ರಭುತ್ವ' ಎಲ್ಲಿದೆ? ಎಂಬ ಪ್ರಶ್ನೆ ಮೂಡುತ್ತದೆ ಎಂದು ವಿಶ್ಲೇಷಿಸಿದರು.ನಂಬಿಕೆ, ಕಾರ್ಯಾಂಗದ ಮೇಲೆ ಇರಲಿಲ್ಲ. 300 ಕೋಟ್ಯಧಿಪತಿ ಹಾಗೂ 150 ಹೀನ ಅಪರಾಧಿ ಸದಸ್ಯರ ಲೋಕಸಭೆಯ ಶಾಸಕಾಂಗದ ಮೇಲೂ ಉಳಿದಿಲ್ಲ. ನ್ಯಾಯಾಂಗದ ಅಂಗಣದಲ್ಲಿದ್ದ ಭ್ರಷ್ಟಾಚಾರ ಗರ್ಭಗುಡಿ ತಲುಪಿದೆ. ಆಗ ವೃತ್ತಿ ಹೋಗಿ ಉದ್ಯಮ ಆಗಿರುವ ಮಾಧ್ಯಮ ಮಾತ್ರ `ಪ್ರಾಮಾಣಿಕ' ಆಗಿರಲು ಸಾಧ್ಯವೇ? ಎಂದು ಪ್ರಶ್ನಿಸಿದರು.ಪತ್ರಿಕೆ-ಟಿವಿ ಏಕವ್ಯಕ್ತಿ ಪ್ರದರ್ಶನ ಅಲ್ಲ. ಅಲ್ಲಿ ಬಹುಪಾತ್ರ ಇರಬೇಕು. ಪತ್ರಕರ್ತ ಪತ್ರಿಕೆಗಿಂತ ದೊಡ್ಡವನಲ್ಲ. ತಾಂತ್ರಿಕ, ಆರ್ಥಿಕ ಸ್ಥಿತಿ ಬದಲಾದರೂ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಪತ್ರಕರ್ತನಿಗೆ ಶೀಲವೇ ಪ್ರಾಮಾಣಿಕತೆ. ವಿಶ್ವಾರ್ಹತೆ ಕಳೆದುಕೊಂಡ ಪತ್ರಿಕೆ-ಪತ್ರಕರ್ತ ರದ್ದಿಗೆ ಸಮ ಎಂದ ಅವರು, ಲೋಕಾಯುಕ್ತ ವರದಿಯಲ್ಲಿ ಪತ್ರಕರ್ತರ `ಸಂಕ್ಷಿಪ್ತ' ಹೆಸರುಗಳಿವೆ. ಜಾಹೀರಾತು ಮತ್ತು ಸಂಪಾದಕೀಯ ಮಧ್ಯದ ಅಂತರ ಮಾಸುತ್ತಿದೆ.

ಹಣಕಾಸು ಪತ್ರಿಕೋದ್ಯಮ, ಕಾಸಿಗಾಗಿ ಸುದ್ದಿ ಸದ್ದುಮಾಡುತ್ತಿದೆ ಎಂದರು. ಪತ್ರಕರ್ತರಿಗೆ ಜ್ಞಾನಕ್ಕಿಂತ ಸಂಪರ್ಕವೇ ಅರ್ಹತೆ ಆಗುತ್ತಿದೆ. ಲೇಖನ ಬರೆಯದ, ಪತ್ರಿಕಾರಂಗದ ಬೆಳವಣಿಗೆ ಗಮನಿಸದ ಪ್ರಾಧ್ಯಾಪಕರ ಬೋಧನೆಯಿಂದ ಎಂಥ ಪತ್ರಕರ್ತರು ಸೃಜಿಸಲು ಸಾಧ್ಯ? ಎಂದ ಅವರು,  ತುರ್ತು ಪರಿಸ್ಥಿತಿಯ ನೇರ ಯುದ್ಧಕ್ಕಿಂತ ಇಂದಿನ ರಾಜಕೀಯ ಪಾತ್ರಧಾರಿಗಳನ್ನು ನಿಯಂತ್ರಿಸುವ ಸೂತ್ರಧಾರಿಗಳ ಕುತಂತ್ರ  ವಿನಾಶಕಾರಿ. ಅವರು ಮಿತ್ರರಂತೆ ಕಾಣುವ ಶತ್ರುಗಳು ಎಂದು ಎಚ್ಚರಿಸಿದರು.ಇಂಗ್ಲಿಷ್‌ಗಿಂತ, ಭಾಷಾ ಪತ್ರಿಕೋದ್ಯಮದ ಪ್ರಭಾವವೇ ಹೆಚ್ಚು. ಹೀಗಾಗಿ ಇಲ್ಲಿಗೆ ರಾಜಕೀಯ ಕಾಲಿಟ್ಟಿದೆ.  ಮಾಧ್ಯಮಗಳಲ್ಲಿ ಉದ್ಯಮಿಗಳ ಹಿಡಿತಕ್ಕಿಂತ `ಅಭಿಪ್ರಾಯ ಉತ್ಪಾದಿಸುವ' ರಾಜಕಾರಣಿಗಳ ಒಡೆತನವು ಅಪಾಯಕಾರಿ ಎಂದರು.       

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾಗುವುದು ಪತ್ರಿಕೆ. ಅದರ ರಕ್ಷಣೆಗೆ ಜಾಗೃತ ಸಮಾಜದ ಅವಶ್ಯಕತೆ ಇದೆ.

ಆದರೆ ರಾಜ್ಯ ರಾಜಕೀಯದ ಹೊಲಸು `ಆಪರೇಷನ್ ಕಮಲ'ದ ಅಭ್ಯರ್ಥಿಗಳನ್ನು ಜನತೆ ಗೆಲ್ಲಿಸಿದ ಖೇದಕರ ನಿದರ್ಶನಗಳು, ವಿಶೇಷ ಆರ್ಥಿಕ ವಲಯ (ಎಸ್‌ಇಝಡ್) ಹಾಗೂ ಕೋಮುವಾದಿ ರಾಜಕೀಯ ಪ್ರತಿಭಟಿಸಿದ ಪತ್ರಕರ್ತ ನವೀನ್ ಸೂರಿಂಜೆ ಅನ್ನು ಜೈಲಿಗೆ ಹಾಕಿದ ಘಟನೆ ಮುಂದಿದೆ. ಇನ್ನೊಂದೆಡೆ ಅರಬ್ ರಾಷ್ಟ್ರಗಳ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಸಾಮಾಜಿಕ ಜಾಲ ತಾಣಗಳು ಪ್ರಮುಖ ಪಾತ್ರ ನಿರ್ವಹಿಸಿದ ನಿದರ್ಶನಗಳೂ ನಮ್ಮ ಮುಂದಿವೆ ಎಂದು ವಾಸ್ತವಗಳನ್ನು     ಮುಂದಿಟ್ಟರು. ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ಬಳಿಕ ನಡೆದ ಸುದೀರ್ಘ ಸಂವಾದದಲ್ಲಿ ಪ್ರಶ್ನೆಗಳಿಗೆ        ಅಮಿನ್‌ಮಟ್ಟು ಉತ್ತರಿಸಿದರು.ಎಚ್‌ಕೆಸಿಸಿಐ ಅಧ್ಯಕ್ಷ  ಉಮಾಕಾಂತ ನಿಗ್ಗುಡಗಿ, ಗೌರವ ಕಾರ್ಯದರ್ಶಿ ಬಸವರಾಜ ಹಡಗಿಲ,  ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಸಮುದಾಯದ ವಿಠ್ಠಲ ಭಂಡಾರಿ, ಅಶೋಕ ಶೆಟಕಾರ, ಡಾ.ಶರಣಪ್ಪ ಸೈದಾಪುರ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry