ಏಡ್ಸ್ ಮತ್ತಷ್ಟು ಇಳಿಮುಖವಾಗಲಿ:ಮಲ್ಲೆ

7

ಏಡ್ಸ್ ಮತ್ತಷ್ಟು ಇಳಿಮುಖವಾಗಲಿ:ಮಲ್ಲೆ

Published:
Updated:

ಗುಲ್ಬರ್ಗ: ಏಡ್ಸ್ ಹರಡುವ ವಿಧಾನಗಳ ಕುರಿತು ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ಆದರೆ ಲೈಂಗಿಕವಾಗಿ ಹರಡುವ ಪ್ರಮಾಣದಲ್ಲಿ ಮತ್ತಷ್ಟು ಇಳಿಮುಖವಾಗಬೇಕಿದೆ ಎಂದು ಗುಲ್ಬರ್ಗ ರೆಡ್‌ಕ್ರಾಸ್ ಸಂಘಟನೆ ಕಾರ್ಯದರ್ಶಿ ಡಾ. ಮಲ್ಲಾರಾವ ಮಲ್ಲೆ ಹೇಳಿದರು.ಬುಧವಾರ ಇಲ್ಲಿ ಆಯೋಜಿಸಲಾಗಿದ್ದ `ವಿಶ್ವ ಏಡ್ಸ್ ದಿನ- ಸೊನ್ನೆಗೆ ತನ್ನಿ' ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. “ಪ್ರಮುಖವಾಗಿ ನಾಲ್ಕು ವಿಧಾನಗಳಲ್ಲಿ ಈ ರೋಗ ಹರಡುತ್ತದೆ. ಎಚ್‌ಐವಿ ಪೀಡಿತ ಪಾಲಕರಿಂದ ಮಗುವಿಗೆ, ರಕ್ತ ಪಡೆಯುವಾಗ ಅದನ್ನು ಪರೀಕ್ಷಿಸುವುದರಿಂದ ಹಾಗೂ ಒಮ್ಮೆ ಬಳಸಿದ ಸಿರಂಜ್ ಅನ್ನು ಮತ್ತೊಮ್ಮೆ ಬಳಸುವುದನ್ನು ಕೈಬಿಡುವುದು- ಈ ಮೂರು ವಿಧಾನಗಳಲ್ಲಿ ಹರಡಬಹುದಾದ ರೋಗದ ಪ್ರಮಾಣ ಅತಿ ಕಡಿಮೆ ಕಡಿಮೆಯಾಗಿದೆ. ಆದರೆ ಲೈಂಗಿಕವಾಗಿ ಹರಡುವ ಪ್ರಮಾಣದಲ್ಲಿ ಮತ್ತಷ್ಟು ಇಳಿಮುಖವಾಗಬೇಕಿದೆ. ಇದಕ್ಕೆ ಪರಿಹಾರವೆಂದರೆ ಏಕ ಲೈಂಗಿಕ ಸಂಗಾತಿ ಆಯ್ಕೆ ಉತ್ತಮ” ಎಂದು ಅವರು ಅಭಿಪ್ರಾಯಪಟ್ಟರು.ವಿಶ್ವದಾದ್ಯಂತ ಕಂಡುಬಂದಿರುವ ಏಡ್ಸ್ ಅಥವಾ ಎಚ್‌ಐವಿ ಮೊದಲು ಪತ್ತೆಯಾಗಿದ್ದು 1981ರ ಜೂನ್ 5ರಂದು ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ. ಭಾರತದಲ್ಲಿ 1985ರವರೆಗೆ ಎಚ್‌ಐವಿ ಅಥವಾ ಏಡ್ಸ್ ಬಗ್ಗೆ ಯಾವುದೇ ಸುಳಿವು ಕಂಡುಬಂದಿರಲಿಲ್ಲ,. ಆದರೆ 1986ರ ಫೆಬ್ರವರಿಯಲ್ಲಿ ಚೆನ್ನೈಯಲ್ಲಿ ಮೊದಲ ಪ್ರಕರಣ ವರದಿಯಾಯಿತು. ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡಿನಲ್ಲಿ ಈ ರೋಗದ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ. ಉಳಿದ ಪ್ರದೇಶಗಳಲ್ಲಿ ಏಡ್ಸ್ ಪ್ರಮಾಣ ಕಡಿಮೆ ಎಂದೇನೂ ಅಲ್ಲ. ಆದರೆ ಅಲ್ಲಿಗೆ ಹೋಲಿಸಿದರೆ ದಕ್ಷಿಣ ಭಾಗದ ಜನರು ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದಾರೆ.ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾರೆ ಎಂದರು.ಎಂ.ಎಸ್. ದಡವೆ ಉದ್ಘಾಟಿಸಿದರು. ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಂಬರೀಷ ಕೊಳೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಕಪೂರ ಶಾಮರಾವ ನಿರೂಪಿಸಿದರು. ಎ.ಆರ್.ಟಿ. ಕೆಂದ್ರದ ಆಪ್ತ ಸಮಾಲೋಚಕ ಮಲ್ಲಿಕಾರ್ಜುನ ಬಿರಾದರ ಸ್ವಾಗತಿಸಿದರು. ಇದಕ್ಕೂ ಮೊದಲು ಆಯೋಜಿಸಲಾಗಿದ್ದ ಜಾಥಾವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಪೊಲೀಸ್‌ಪಾಟೀಲ್ ತೆಲ್ಕೂರ ಉದ್ಘಾಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry