ಕ್ರೀಡಾ ಚಟುವಟಿಕೆಗೆ ಪರೀಕ್ಷೆ ಕಾವು!

7
ಇಂದಿನಿಂದ 32ನೇ ಅಂತರ ಮಹಾವಿದ್ಯಾಲಯ ಕ್ರೀಡಾಕೂಟ

ಕ್ರೀಡಾ ಚಟುವಟಿಕೆಗೆ ಪರೀಕ್ಷೆ ಕಾವು!

Published:
Updated:

ಗುಲ್ಬರ್ಗ: ಒಂದು ಕಡೆ ಕೊರೆಯುವ ಚಳಿಯ ಆಗಮನ, ಇನ್ನೊಂದು ಕಡೆ ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗೆ ಆವರಣದ ಹೊರ ಕ್ರೀಡಾಂಗಣವೂ 32ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟಕ್ಕೆ  ಅಕ್ಷರಸಃ ಮದುವಣಗಿತ್ತಿಯಂತೆ  ಸಿದ್ಧಗೊಂಡಿದೆ. ನಿತ್ಯ ನಿರಾಭರಣ ಸುಂದರಿಯಂತೆ  ಕಾಣುತ್ತಿದ್ದ ಕ್ರೀಡಾಂಗಣದ ಟ್ರ್ಯಾಕ್‌ಗೆ ಬಣ್ಣದ ಪಟ್ಟಿ ಬಳಿದು ಶೃಂಗರಿಸಲಾಗಿದೆ. ಸಂಘಟಕರು ಸಂತಸದಿಂದ ಹುಮ್ಮಸ್ಸಿನಿಂದ ತೆಲಾಡುತ್ತಿದ್ದಾರೆ.ರಾಜ್ಯ ಹಾಗೂ ರಾಷ್ಟ್ರ ಮಟ್ಟದ ದಿಗ್ಗಜ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿದೆ. ಎಲ್ಲವೂ ಸರಿ, ಸದ್ಯ ಕಾಲ ಮಾತ್ರ ಭಿನ್ನ. ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷಾ ಜ್ವರ ಕಾಡುತ್ತಿದೆ. ಇನ್ನೂ ಕೇಲವು ಪದವಿ ವಿಭಾಗದ ಪರೀಕ್ಷೆಗಳು ಮುಗಿಯುವ ಹಂತದಲ್ಲಿರುವ ಸಮಯದಲ್ಲಿ ಇಂಥ ಕ್ರೀಡಾ ಚಟುವಟಿಕೆ  ಹಮ್ಮಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ.  ಕ್ರೀಡಾಪಟುಗಳ ಪಾಲ್ಗೊಳ್ಳುವ ಸಂಖ್ಯೆಯ ಪ್ರಮಾಣ ಎಲ್ಲಿ  ಇಳಿಮುಖವಾಗಿಬಿಡುತ್ತೆ ಎಂಬ ಆತಂಕವೂ ಸಂಘಟಕರನ್ನು ಕಾಡುತ್ತಿದೆ.ಹೌದು ಇಂದಿನಿಂದ ಡಿ.22ವರೆಗೆ ನಡೆಯುವ 32ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದ್ದು, ವಿಶ್ವವಿದ್ಯಾಲಯ ವ್ಯಾಪ್ತಿಯ ಮಹಾವಿದ್ಯಾಲಯದ ಕ್ರೀಡಾಪಟುಗಳಿಗೆ ಓದಿನ ಜತೆಗೆ ಕ್ರೀಡಾ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳೆಯಲ್ಲಿಯೇ ಕ್ರೀಡಾಕೂಟವನ್ನು ಹಮ್ಮಿಕೊಳ್ಳುವ ಎಡವಟ್ಟುವನ್ನು ವಿಶ್ವವಿದ್ಯಾಲಯ ಮಾಡುತ್ತಿರುವುದು  ಕ್ರೀಡಾಪಟುಗಳಲ್ಲಿ ಅಸಮಾಧಾನವನ್ನು ಮೂಡಿಸಿದೆ. ಇತ್ತ ಜೀವನವನ್ನು ರೂಪಿಸುವ ಓದಿ, ಪರೀಕ್ಷೆ ಬರೆಯಬೇಕೆ ಅಥವಾ  ನೆಚ್ಚಿನ ಕ್ರೀಡಾ ಚಟುವಟಿಕೆಯಲ್ಲಿ  ಪಾಲ್ಗೊಳ್ಳಬೇಕೆ ಎಂಬ ಗೊಂದಲಮಯ ವಾತಾವರಣ ಪ್ರತಿ ವರ್ಷವೂ ವಿದ್ಯಾರ್ಥಿಗಳನ್ನು ಕಾಡುತ್ತದೆ. ಕಳೆದ ವರ್ಷದ ಕ್ರೀಡಾಕೂಟದ ಸಂದರ್ಭದಲ್ಲಿಯೇ ವಿವಿಧ ಜಿಲ್ಲೆಗಳಿಂದ ಕ್ರೀಡಾಕೂಟಕ್ಕೆ ಬಂದಿದ್ದ ವಿದ್ಯಾರ್ಥಿಗಳು, ಕ್ರೀಡಾಪಟುಗಳು ವಿಶ್ವವಿದ್ಯಾಲಯದ ವಿರುದ್ಧ ಅಸಮಾಧಾನದ ಮಾತುಗಳನ್ನು ಹೊರಹಾಕಿದ್ದರೂ. ವಿಶ್ವವಿದ್ಯಾಲಯ ಮತ್ತೇ ಈ ಭಾರಿ ಇಂಥ ತಪ್ಪು ನಿರ್ಣಯ ತೆಗೆದುಕೊಂಡಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.ಬೀದರ್, ಯಾದಗಿರಿ, ರಾಯಚೂರು, ಗುಲ್ಬರ್ಗ ಜಿಲ್ಲೆಗಳೂ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಳ್ಗೊಳ್ಳಲಿದ್ದು. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷಾ ಸಮಯವಿದ್ಧರೂ ಸುಮಾರು 400ರಿಂದ 500 ಕ್ರೀಡಾಪಟುಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭರವಸೆ ಇದೆ ಎಂಬ ವಿಶ್ವಾಸವನ್ನು  ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ.ಆರ್. ಭೈರಡ್ಡಿ  ವ್ಯಕ್ತಪಡಿಸಿದರು.ವಿವಿಧ ಜಿಲ್ಲೆಗಳಿಂದ ಬರುವ ಕ್ರೀಡಾಪಟುಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಕ್ರೀಡಾಪಟುಗಳಿಗೆ ವಿಶ್ವವಿದ್ಯಾಲಯದ ಮಹಿಳಾ ವಸತಿ ನಿಲಯದಲ್ಲಿ ಹಾಗೂ ಪುರುಷ ಕ್ರೀಡಾಪಟುಗಳಿಗೆ ವಿಶ್ವವಿದ್ಯಾಲಯದ ಬಾಲಕರ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 100ಕ್ಕೂ ಹೆಚ್ಚು ಕ್ರೀಡಾಧಿಕಾರಿಗಳು ಆಗಮಿಸಲಿದ್ದು, ಅವರಿಗೆ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.1500ರಿಂದ 10,000 ಮೀಟರ್ ಓಟ್, ಶಾಟಪಟ್, ಜಾವಲಿನ್ ಥ್ರೋ, ಎತ್ತರ ಜಿಗಿತ, ಉದ್ದ ಜಿಗಿತ, ಚಕ್ರ ಎಸೆತ, ತ್ರಿವಿಧ ಜಿಗಿತ, 4ಗಿ100ಮೀಟರ್ ರೀಲೆ, 4ಗಿ400 ರೀಲೆ ಸೇರಿಂದತೆ ವಿವಿಧ ಆಟಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.ವೇಗದ ರಾಣಿ,  ಪುರುಷ ಚಾಂಪಿಯನ್ ಷಿಪ್, ಮಹಿಳಾ ವಿಭಾಗದ ಚಾಂಪಿಯನ್‌ಷಿಪ್ ಹಾಗೂ ಸಮಗ್ರ ಚಾಂಪಿಯನ್‌ಷಿಪ್  ವಿಜೇತ ಕಾಲೇಜುಗಳ ಕ್ರೀಡಾಪಟುಗಳಿಗೆ ಕ್ರಮವಾಗಿ ವಿಜಯಸಿಂಗ್ ಟ್ರೋಪಿ, ಪ್ರಿಯದರ್ಶಿನಿ ಟ್ರೋಪಿ, ಖರ್ಗೆ ಚಾಲೆಂಜ್ ಟ್ರೋಪಿ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ಕ್ರೀಡಾಪಟುಗಳ ಆರೋಗ್ಯ ದೃಷ್ಟಿಯಿಂದ ಇಬ್ಬರು ತಜ್ಞ ವೈದ್ಯರು ಹಾಗೂ ಆರೋಗ್ಯ ಘಟಕವನ್ನು ವ್ಯವಸ್ಥೆ ಮಾಡಲಾಗಿದ್ದು, ಕ್ರೀಡಾಕೂಟದ ಯಶಸ್ವಿಗೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಭೈರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.ಅಂತರರಾಷ್ಟ್ರೀಯ ಮ್ಯಾರಾಥಾನ್ ಕ್ರೀಡಾಪಟು ವೀರಯ್ಯ ಹಿರೇಮಠ ಡಿ.20ರಂದು ಮಧ್ಯಾಹ್ನ 2ಕ್ಕೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಅತಿಥಿಯಾಗಿ ಸಿಂಡಿಕೇಟ್ ಸದಸ್ಯರಾದ  ಪ್ರೊ. ಆರ್.ಬಿ. ಮಾಲಿಪಾಟೀಲ, ಶಾಂತಲಿಂಗ ಸಾವಳಗಿ ಪಾಲ್ಗೊಳ್ಳಲಿದ್ದಾರೆ. ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ.22ರಂದು ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಕರ್ನಾಟಕ ಮಲಕಂಬ ಅಸೋಸಿಯೇಶನ್ ಅಧ್ಯಕ್ಷ ಎಸ್.ಎನ್. ಪಾಟೀಲ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಪ್ರೊ.ಬಿ.ಎನ್. ಕನ್ನಳ್ಳಿ, ಗುಲ್ಬರ್ಗ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ರಾಘವೇಂದ್ರ ಕುಲಕರ್ಣಿ, ಎಸ್.ಜಿ. ಭಾರತಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕುಲಸಚಿವ ಪ್ರೊ. ಎಸ್.ಎಲ್. ಹಿರೇಮಠ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry