ಭಾನುವಾರ, ಡಿಸೆಂಬರ್ 8, 2019
25 °C

ಪರಪ್ಪನ ಅಗ್ರಹಾರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ!

Published:
Updated:
ಪರಪ್ಪನ ಅಗ್ರಹಾರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ!

ಇದು ಸೇರಿಗೆ ಸವ್ವಾಸೇರಿನ ಕಥೆ. ಸಂಸತ್ತಿನ ಅಧಿವೇಶನವನ್ನು ಮಣ್ಣಗೂಡಿಸಿದ ಬಿಜೆಪಿಗೆ ಬುದ್ಧಿ ಕಲಿಸಲು ಕಾಂಗ್ರೆಸ್ಸಿಗೆ ಹೆಚ್ಚು ಹೊತ್ತೇನೂ ಬೇಕಾಗಲಿಲ್ಲ. ರಾಜ್ಯದ ವಿಧಾನ ಮಂಡಲ ಅಧಿವೇಶನ ಸೇರುತ್ತದೆ ಎಂದು ಪ್ರಕಟವಾದಾಗಲೇ ಮುಯ್ಯಿ ತೀರಿಸಿಕೊಳ್ಳಲು ಕಾಂಗ್ರೆಸ್ ಸನ್ನದ್ಧವಾಗಿತ್ತು. ಹಾಗೆಯೇ ಆಯಿತು. ಕನಿಷ್ಠ ಪಕ್ಷ ರಾಜ್ಯಪಾಲರ ಭಾಷಣವನ್ನಾದರೂ ವಿರೋಧ ಪಕ್ಷಗಳು ತಾಳ್ಮೆಯಿಂದ ಕೇಳುತ್ತವೆ ಎಂಬ ನಿರೀಕ್ಷೆಯೂ ಹುಸಿಯಾಯಿತು. ಕಾಂಗ್ರೆಸ್ಸಿನವರು ಗಲಾಟೆ ಮಾಡುವುದನ್ನೇ ಕಾಯುತ್ತಿದ್ದಂತಿದ್ದ ರಾಜ್ಯಪಾಲರೂ ಸರ್ಕಾರವನ್ನು ದಿಙ್ಮೂಢಗೊಳಿಸಿ ತಮ್ಮ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿ ಹೊರಟು ಹೋದರು.ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದೊಡ್ಡ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿಯೇನೂ ಭದ್ರ ನೆಲೆಯ ಮೇಲೆ ನಿಂತಿಲ್ಲ.ಕರ್ನಾಟಕದ ಸರ್ಕಾರದ ಮೇಲೆಯೂ ಅದೇ ಗೂಬೆ ಇದೆ. ಹಗರಣದ ಪ್ರಮಾಣ ಹೆಚ್ಚೂ ಕಡಿಮೆ ಇರಬಹುದು ಅಷ್ಟೇ. ಅಲ್ಲಿ ಅದು ದೊಡ್ಡದಾದರೆ ರಾಜ್ಯಮಟ್ಟದಲ್ಲಿ ಇದು ದೊಡ್ಡದು. ಸಂಸತ್ತಿನ ಅಧಿವೇಶನವನ್ನು 20 ದಿನಗಳ ಕಾಲ ನಡೆಯದಂತೆ ಮಾಡಿ ಬಿಜೆಪಿಯಾಗಲೀ ಅಥವಾ ಇತರ ವಿರೋಧ ಪಕ್ಷಗಳಾಗಲೀ ದೊಡ್ಡ ಸಾಧನೆಯನ್ನೇನೂ ಮಾಡಲಿಲ್ಲ. ‘ಈ ದೇಶದಲ್ಲಿ ಭ್ರಷ್ಟಾಚಾರ ಒಂದು ವಿಷಯವೇ ಅಲ್ಲ’ ಎಂದು ಇಂದಿರಾ ಗಾಂಧಿ ಎಂದೋ ಹೇಳಿದ್ದರು. ಈಗ ಅದು ಇನ್ನಷ್ಟು ದೃಢವಾಗಿ ಗೊತ್ತಾಗುತ್ತಿದೆ. ಏಕೆಂದರೆ ಯಾವ ಭ್ರಷ್ಟ ರಾಜಕಾರಣಿಗೂ ಶಿಕ್ಷೆ ವಿಧಿಸಿ ಜೈಲಿಗೆ ಕಳುಹಿಸಿದ ಘಟನೆ ಜನಮಾನಸದಲ್ಲಿ ಉಳಿದಿಲ್ಲ. ಎಲ್ಲಿಯೋ ಅಲ್ಲೊಂದು ಇಲ್ಲೊಂದು ಪ್ರಕರಣ ಆಗಿರಬಹುದು. ಅದೂ ಕಳ್ಳತನ ಮಾಡಿ ಸಿಕ್ಕಿಬಿದ್ದ ರಾಜಕಾರಣಿಗೆ ಮಾತ್ರ ಇಂಥ ಶಿಕ್ಷೆಯಾಗಿದೆ.ನಿತ್ಯ ಲೂಟಿ ಹೊಡೆಯುವವರು ಸಾರ್ವಜನಿಕರ ಕಣ್ಣ ಮುಂದೆ ಐಷಾರಾಮಿ ಜೀವನ ಮಾಡಿಕೊಂಡೇ ಹಾಯಾಗಿಯೇ ಇದ್ದಾರೆ. ಜನರಿಗೂ ಇದು ವಿಶೇಷ ಎಂದು ಅನಿಸಿದಂತೆಯೂ ಕಾಣುವುದಿಲ್ಲ.ಎರಡು ಜಿ ತರಂಗಾಂತರ ಹಂಚಿಕೆ ಹಗರಣವನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ)ಗೆ ಬದಲಾಗಿ ಜಂಟಿ ಸದನ ಸಮಿತಿ  (ಜೆಪಿಸಿ)ಗೆ ಒಪ್ಪಿಸಬೇಕು ಎಂದು ಬಿಜೆಪಿ ಏಕೆ ಕೇಳುತ್ತಿದೆ? ಅದರ ನಡುವಿನ ವ್ಯತ್ಯಾಸವೇನು ಎಂಬುದು ಎಷ್ಟು ಜನರಿಗೆ ಗೊತ್ತಿದೆ ಎಂದು ಹೇಳುವುದು ಕಷ್ಟ. ಇಂಥ ತಾಂತ್ರಿಕ ಅಂಶಗಳ ಮೇಲೆ 20 ದಿನಗಳ ಅಧಿವೇಶನ ಹಾಳು ಮಾಡಿ ಬಿಜೆಪಿ ಸಾಧಿಸಿದ್ದು ಏನು ಎಂಬುದೂ ಅರ್ಥವಾಗುವುದಿಲ್ಲ. ಏಕೆಂದರೆ  ಬೊಫೋರ್ಸ್ ಹಗರಣದಲ್ಲಿ ನಮ್ಮವರೇ ಆದ ಬಿ.ಶಂಕರಾನಂದ ಅವರ ಅಧ್ಯಕ್ಷತೆಯ ಜೆಪಿಸಿ ಇಡೀ ಹಗರಣವನ್ನೇ ಮುಚ್ಚಿ ಹಾಕಿತು; ರಾಜೀವ ಗಾಂಧಿಯವರನ್ನು ಖುಲಾಸೆ ಮಾಡಿತು. ಈಗ ದಿನಕಳೆದಂತೆ ಇಡೀ ಹಗರಣವನ್ನು ವಿರೋಧ ಪಕ್ಷಗಳೇ ಮರೆತಂತೆ ಕಾಣುತ್ತದೆ. ರಾಜ್ಯ ವಿಧಾನಸಭೆಯಲ್ಲಿ ಆದುದೂ ಅಷ್ಟೇ. ರಾಜ್ಯ ಸರ್ಕಾರದ ಭ್ರಷ್ಟ ಹಗರಣಗಳ ಬಗ್ಗೆ ನಿಲುವಳಿ ಸೂಚನೆ ಮೂಲಕವೇ ಚರ್ಚೆ ಆಗಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದು ಸಾಧಿಸಿದ್ದು ಏನು? ಸರ್ಕಾರ ಚರ್ಚೆಗೆ ಸಿದ್ಧವಿತ್ತು. ರಾಜ್ಯಪಾಲರ ಭಾಷಣದ ಮೇಲೆ, ಬಜೆಟ್ ಮೇಲೆ ಸೂರ್ಯನ ಕೆಳಗಿರುವ, ಭೂಮಿಯ ಮೇಲೆ ಇರುವ ಯಾವ ವಿಷಯದ ಚರ್ಚೆಗೂ ಅವಕಾಶವಿರುತ್ತದೆ. ವಿರೋಧ ಪಕ್ಷಗಳು ಅದನ್ನು ಬಳಸಿಕೊಂಡು ಸರ್ಕಾರವನ್ನು, ಅದರ ದುಷ್ಕೃತ್ಯಗಳನ್ನು ಹರಾಜು ಹಾಕಬಹುದಿತ್ತು ಅಲ್ಲವೇ?ಕಾಂಗ್ರೆಸ್ಸಿನಲ್ಲಿ, ಜೆ.ಡಿ (ಎಸ್)ನಲ್ಲಿ ಬೇಕಾದಷ್ಟು ಮಂದಿ ವಾಗ್ಮಿಗಳು ಇದ್ದಾರೆ. ಸದನವನ್ನು ಅವರು ಏಕೆ ಬಳಸಿಕೊಳ್ಳಲಿಲ್ಲ? ಸರ್ಕಾರಕ್ಕೂ ಅದೇ ಬೇಕಿತ್ತು ಅಲ್ಲವೇ? ‘ಚರ್ಚೆಗೆ ನಾವೇನೋ ಸಿದ್ಧ ಆದರೆ ಅವರ ಬಳಿ ಸರಕೇ ಇಲ್ಲ’ ಎಂದು ಈಗ ಆಡಳಿತ ಪಕ್ಷದವರು ಹೇಳಿದರೆ ವಿರೋಧ ಪಕ್ಷದವರ ಸಮಜಾಯಿಷಿ ಏನು? ನಿಲುವಳಿ ಸೂಚನೆ ಮಂಡಿಸಿ, ಚರ್ಚೆ ಮಾಡಿ, ತೀರ್ಮಾನವನ್ನು ಮತಕ್ಕೆ ಹಾಕಿ ಸರ್ಕಾರವನ್ನು ಉರುಳಿಸಬೇಕು ಎಂಬುದು ಅವರ ಉದ್ದೇಶವಾಗಿತ್ತೇ? ಸರ್ಕಾರವನ್ನು ಉರುಳಿಸುವಷ್ಟು ಬಲ ಈಗ ವಿರೋಧ ಪಕ್ಷದಲ್ಲಿ ಇಲ್ಲವಲ್ಲ? ಮಾತಿನ ಮನೆಯನ್ನು ರಣಾಂಗಣ ಮಾಡಿ ಜನರಿಗೆ ಅವರು ಏನು ಸಂದೇಶ ಕೊಡಲು ಹೊರಟಿದ್ದಾರೆ? ರಾಜ್ಯಪಾಲರ ಭಾಷಣಕ್ಕೇ ಅಡ್ಡಿ ಮಾಡಿದ್ದಕ್ಕೆ, ಯಾವ ಚರ್ಚೆಯನ್ನೂ ಮಾಡದೇ ಸದನ ಮುಂದೆ ಹೋಗುವಂತೆ ಮಾಡಿದ್ದಕ್ಕೆ ಕಾಂಗ್ರೆಸ್ಸಿನಲ್ಲಿಯೇ ಸಹಮತ ಇದೆಯೇ? ಇಲ್ಲ ಎನಿಸುತ್ತದೆ. ಹಲವರು ಹಿರಿಯ ಸದಸ್ಯರು ಸದನ ನಡೆಯುತ್ತಿರುವ ರೀತಿ ಸರಿಯಿಲ್ಲ ಎಂದು ಗೊತ್ತಿದ್ದೂ ಅಸಹಾಯಕರಾಗಿದ್ದಾರೆ.ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು. ಒಂದು ಪಕ್ಷದ ಅಧ್ಯಕ್ಷರು. ಮೇಲಾಗಿ ಲೋಕಸಭೆಯ ಸದಸ್ಯರು.ಅಧಿವೇಶನ ಸೇರುವುದಕ್ಕಿಂತ ಮುಂಚೆಯೇ, ‘ಸದನ ನಡೆಯಲು ಬಿಡುವುದಿಲ್ಲ’ ಎಂದು ಅವರು ಹೇಳಬೇಕಿತ್ತೇ? ಅವರು ಹಾಗೆ ಹೇಳಿ ತಮ್ಮ ಸದಸ್ಯರಿಗೆ ಏನು ಸಂದೇಶ ಕೊಟ್ಟರು? ಜಾಗಟೆ, ಗಂಟೆಗಳು ಸದನದಲ್ಲಿ ಸದ್ದು ಮಾಡಬೇಕೇ ಅಥವಾ ರೇವಣ್ಣ ಅವರ ಬಳಿ ಸರ್ಕಾರ ವಿರುದ್ಧ ಸೂಟ್‌ಕೇಸ್‌ಗಟ್ಟಲೆ ಇರುವ ದಾಖಲೆಗಳು ಮಾತನಾಡಬೇಕೇ? ಕುಮಾರಸ್ವಾಮಿ ಅವರಿಗೂ ಚರ್ಚೆ ಬೇಡವಾಗಿತ್ತೇ? ಸಂಸತ್ತು ಅಥವಾ ವಿಧಾನ ಮಂಡಲದ ಸದನಗಳು ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುತ್ತವೆ ಎಂಬುದನ್ನು ಈ ಎಲ್ಲ ನಾಯಕರು ಏಕೆ ಮರೆತರು? ಸಂಸತ್ತಿನಲ್ಲಿ ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳಿಗೆ ಭ್ರಷ್ಟಾಚಾರವೇ ಚರ್ಚೆಯ ದೊಡ್ಡ ವಸ್ತು ಎನಿಸಿತು. ಅದು ಚರ್ಚೆಗೆ ರೋಚಕ ವಿಷಯವೂ ಆಗಿರಬಹುದು. ಆದರೆ, ಬಡವರನ್ನು ಮಾತ್ರವಲ್ಲ ಮಧ್ಯಮ ವರ್ಗದವರ ನಿತ್ಯ ಜೀವನವನ್ನೇ ಬೆಲೆ ಏರಿಕೆಯ ಪೆಡಂಭೂತ ಹಿಂಡಿ ಹಿಪ್ಪಿ ಮಾಡಿದೆ. ಶರದ್ ಪವಾರ್ ಅವರನ್ನು ಗುರಿಯಾಗಿ ಇಟ್ಟುಕೊಂಡು ಈರುಳ್ಳಿಯ ರಾಕೆಟ್ ಬಿಟ್ಟಿದ್ದರೇ ಸಾಕಿತ್ತು ಅದು ನೇರವಾಗಿ ಪ್ರಧಾನಿಯ ಹೃದಯಕ್ಕೇ ತಾಗುತ್ತಿತ್ತು. ಅದು ವಿರೋಧ ಪಕ್ಷಗಳಿಗೆ ಮುಖ್ಯ ಅನಿಸಲಿಲ್ಲ.ಜನರು ಸಹಜವಾಗಿಯೇ ಸಂಸತ್ತಿನ ಕಲಾಪದಲ್ಲಿ ಆಸಕ್ತಿ ಕಳೆದುಕೊಂಡರು. ಹಾಗಾದರೆ ಹಲವಾರು ಕೋಟಿ ಖರ್ಚು ಮಾಡಿ ಅಧಿವೇಶನ ನಡೆಸಿ ಬಂದ ಲಾಭ ಏನು?

ಸಂಸತ್ತು ದೇಶದ ಪ್ರಜಾಸತ್ತೆಯನ್ನು ಬಲಿಷ್ಠಗೊಳಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸುವ ಒಂದು ಸಂಸ್ಥೆ. ಅದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೇಂದ್ರ ಸಂಸ್ಥೆಯಾಗಿ ಜನರ ಆಶಯಗಳನ್ನು ಪ್ರತಿನಿಧಿಸುತ್ತದೆ. ಇಂಥ ದೊಡ್ಡ ದೇಶದ ವಿವಿಧ ಸಮುದಾಯಗಳ ಆಶೋತ್ತರಗಳ ಈಡೇರಿಸುವ, ಕಾನೂನು ರಚಿಸುವ, ಸರ್ಕಾರ ಜನರಿಗೆ ಉತ್ತರದಾಯಿ ಆಗಿದೆಯೇ ಇಲ್ಲವೇ ಎಂಬುದನ್ನು ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿಯೂ ಸಂಸತ್ತಿನ ಮೇಲೆ ಇದೆ. ಸಂಸತ್ತು, ರಾಜ್ಯಗಳ ವಿಧಾನಮಂಡಲದ ಸದನಗಳಿಗೆ ಮಾದರಿಯನ್ನೂ ಮಾರ್ಗದರ್ಶನವನ್ನೂ ಒದಗಿಸಬೇಕಾಗುತ್ತದೆ. ಈಗ ಆಗಿರುವುದು ಏನು? ಅಲ್ಲಿಯೇ ಗಲಾಟೆ ನಡೆದರೆ ಕೆಳಹಂತದಲ್ಲಿ ಏನು ಮಾದರಿ ಹಾಕಿಕೊಟ್ಟಂತೆ ಆಯಿತು? ಸಂಸತ್ ಅಧಿವೇಶನ ಹಾಳುಗೆಡವಿದ ಬಿಜೆಪಿ ಗುವಾಹಟಿಯಲ್ಲಿ ರ್ಯಾಲಿ ಮಾಡಿ ಸರ್ಕಾರದ ವಿರುದ್ಧ ದೊಡ್ಡದಾಗಿ ಟೀಕೆ ಮಾಡಿತು. ರಾಜ್ಯ ವಿಧಾನಸಭೆಯಲ್ಲಿ ಗಂಟೆ ಜಾಗಟೆ ಬಾರಿಸಿದ ಜೆ.ಡಿ (ಎಸ್)ಸದಸ್ಯರು ವಿಧಾನಸೌಧದ ಮುಂಭಾಗದಲ್ಲಿ ಭಿತ್ತಿಫಲಕ ಹಿಡಿದು ಪ್ರತಿಭಟನೆ ಮಾಡಿದರು. ಸದನದ ಒಳಗಡೆ ಮಾಡಬೇಕಾದ ಕೆಲಸವನ್ನು ಹೊರಗಡೆ ಮಾಡುವ ಹಟ ಏಕೆ? ಇದು ಯಾರ ದೌರ್ಬಲ್ಯ? ಬಿಜೆಪಿಯವರು, ಕಾಂಗ್ರೆಸ್ಸಿನವರು, ಜೆ.ಡಿ (ಎಸ್)ನವರು ಎಲ್ಲ ಸೇರಿಕೊಂಡು ಸಂಸದೀಯ ವ್ಯವಸ್ಥೆಯನ್ನೇ ನಿರರ್ಥಕ ಮಾಡಲು ಹೊರಟಿದ್ದಾರೆಯೇ?... ಇಲ್ಲ ಎಂದು ಜನರು ಹೇಗೆ ಅಂದುಕೊಳ್ಳಬೇಕು?ಚರ್ಚೆಗೆ ನಿಂತರೆ ನಮ್ಮ ಹಗರಣಗಳೂ ಹೊರಗೆ ಬರಬಹುದು ಎಂದು ವಿರೋಧಿಗಳಿಗೆ ಭಯವಿತ್ತೇ? ಆಡಳಿತ ಪಕ್ಷದವರು ತಮ್ಮ ಮಕ್ಕಳಿಗೆ, ಬೇಕಾದವರಿಗೆ ಬಿಡಿಎ ನಿವೇಶನ ಕೊಟ್ಟಿದ್ದಾರೆ. ಭೂಮಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಈಗ ವಿರೋಧ ಪಕ್ಷದಲ್ಲಿ ಇರುವವರು ಆಡಳಿತ ಪಕ್ಷದಲ್ಲಿ ಇದ್ದಾಗ ಅದನ್ನೇ ಮಾಡಿದ್ದಾರೆ. ಮಾಡಿಲ್ಲವೇ? ಬಿಜೆಪಿಯವರು ಈಗ ಅಧಿಕಾರಕ್ಕೆ ಬಂದಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆಯೋ ಇಲ್ಲವೋ ಎಂಬ ಆತುರದಲ್ಲಿ ದುಡ್ಡು ಮಾಡುತ್ತಿದ್ದಾರೆ. ಅನೇಕ ವರ್ಷ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ಸಿನವರು ನಿಧಾನವಾಗಿಯಾದರೂ ಅದನ್ನೇ ಮಾಡಿದ್ದಾರೆ! ಎಲ್ಲರೂ ಗಾಜಿನ ಮನೆಯಲ್ಲಿಯೇ ಇದ್ದಾರೆ. ಹಾಗಾದರೆ, ಈ ಸಾರಿಯ ಅಧಿವೇಶನ ಪರಸ್ಪರರ ತಪ್ಪನ್ನು ಮುಚ್ಚಿ ಹಾಕುವುದನ್ನು ಬಿಟ್ಟು ಮತ್ತೇನನ್ನು ಮಾಡಿದಂತೆ ಆಯಿತು? ಅಥವಾ ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳೆಲ್ಲ ಸೇರಿಕೊಂಡು ‘ಸತ್ಯ ಹರಿಶ್ಚಂದ್ರ’ನ ನಾಟಕ ಆಡಿದಂತಾಯಿತೇ ?ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ತನಗೆ ಬೇಕಾದ ಮಸೂದೆಗಳನ್ನು ಗದ್ದಲದ ನಡುವೆಯೇ ಅಂಗೀಕಾರ ಮಾಡಿಕೊಂಡಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅದನ್ನೇ ಮಾಡಿತು. ಎರಡೂ ಸರ್ಕಾರಗಳ ಆರ್ಥಿಕ ಅಶಿಸ್ತನ್ನು ಬಯಲು ಮಾಡಬಹುದಾಗಿದ್ದ ಮಸೂದೆಗಳೂ ಇದರಲ್ಲಿ ಸೇರಿಕೊಂಡಿದ್ದುವು. ಬಯಲು ಮಾಡುವ ಆ ಕೆಲಸ ಮಾಡಬೇಕಿದ್ದ ವಿರೋಧ ಪಕ್ಷಗಳ ಕರ್ತವ್ಯದಲ್ಲಿ ಚ್ಯುತಿಯಾದಂತೆ ಆಗಲಿಲ್ಲವೇ? ಸಂಸತ್ತಿನ ಕೆಲಸವೇ ಮುಖ್ಯವಾಗಿ ಶಾಸನ ರಚನೆ ಮಾಡುವುದು. ವಿಧಾನ ಮಂಡಲದ ಮುಖ್ಯ ಕೆಲಸವೂ ಅದೇ. ಈಗ ಆ ಕೆಲಸ ಆಗುತ್ತಿದೆಯೇ? ಅದು ಕಡೆಯ ಕೆಲಸ ಎನಿಸಿ ಎಷ್ಟು ವರ್ಷಗಳಾದುವು? ಈಗ ಸಂಸತ್ತಿಗೆ, ವಿಧಾನ ಮಂಡಲಕ್ಕೆ ಸಂಸದರು, ಶಾಸಕರು ಆಯ್ಕೆಯಾಗಿ ಬರುತ್ತಿದ್ದಾರೆಯೇ? ಅಥವಾ ಬರೀ ಕ್ಷೇತ್ರ ಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದಾರೆಯೇ? ಸಂಸದರಿಗೆ, ಶಾಸಕರಿಗೆ ಒಂದು ಕನಿಷ್ಠ ಶೈಕ್ಷಣಿಕ ಹಿನ್ನೆಲೆ, ಸಂಸದೀಯ ವ್ಯವಸ್ಥೆಯ ತಿಳಿವಳಿಕೆ ಇಲ್ಲದೇ ಇರುವುದು ಈಗಿನ ದುರ್ದೆಸೆಗೆ ಕಾರಣವಾಗುತ್ತಿದೆಯೇ?

ಸರ್ಕಾರ ಮತ್ತು ವಿರೋಧ ಪಕ್ಷಗಳು ಜಂಟಿಯಾಗಿ ನಿರ್ವಹಿಸಬೇಕಾದ ಹೊಣೆ ಎಂದರೆ ಸದನಗಳ ಕಲಾಪ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು. ಅದಕ್ಕಾಗಿಯೇ ಕಲಾಪ ಸಲಹಾ ಸಮಿತಿ ಎಂಬ ಒಂದು ವ್ಯವಸ್ಥೆಯೂ ಇದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಪ್ರಮುಖರು ಸೇರಿಕೊಂಡು ಈ ಸಾರಿಯ ಅಧಿವೇಶನದಲ್ಲಿ ಏನು ಚರ್ಚೆ ಮಾಡಬೇಕು ಎಂದು ಈ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತಾರೆ. ಗಲಾಟೆಯೇ ಈಗ ಮುಖ್ಯ ಅಜೆಂಡಾ ಆಗಿರುವಾಗ ಕಲಾಪ ಸಲಹಾ ಸಮಿತಿಗೆ ಅರ್ಥವೇ ಇಲ್ಲದಂತೆ ಆಗಿದೆ.ಪ್ರಜಾಸತ್ತೆಯಲ್ಲಿ ವಿರೋಧ ಪಕ್ಷಗಳ ಮಾತಿಗೆ ಬೆಲೆಯಿದೆ. ಆದರೆ, ಅಂತಿಮವಾಗಿ ಸರ್ಕಾರದ್ದೇ ಕೊನೆಯ ಮಾತು. (In Democracy opposition has a say but government has its way) ಈ ತಿಳಿವಳಿಕೆಯೇ ಈಗ ಇಲ್ಲದಂತಾಗಿದೆ. ಆಡಳಿತ ಪಕ್ಷದವರು ಮತ್ತು ವಿರೋಧ ಪಕ್ಷದವರು ಆಜನ್ಮ ಶತ್ರುಗಳಂತೆ ನಡೆದುಕೊಳ್ಳುತ್ತಿದ್ದಾರೆ. ಪರಸ್ಪರರ ನಡುವೆ ಸರ್ಕಾರದ ಆಚೆಗೆ ಮನುಷ್ಯ ಸಂಬಂಧವೇ ಇಲ್ಲದಂತೆ ಆಗಿದೆ. ಮುಖ್ಯಮಂತ್ರಿಯಾದವರು ವಿರೋಧ ಪಕ್ಷದ ನಾಯಕರ ಜತೆಗೆ ಸೌಹಾರ್ದ ಸಂಬಂಧ ಹೊಂದಿರಬೇಕಾಗುತ್ತದೆ. ವರ್ಷಗಳು ಕಳೆದಂತೆ ಆ ಸಂಬಂಧದ ಕೊಂಡಿ ಕಳಚಿ ಹೋಗಿದೆ. ಎಲ್ಲರೂ ಸಾವಿರ ವರ್ಷಗಳ ಕಾಲ ಬದುಕುವವರಂತೆ ದ್ವೇಷ ಸಾಧಿಸುತ್ತಿದ್ದಾರೆ. ಕೆಲವರು ಸಾವಿರ ವರ್ಷ ಬದುಕುವವರಂತೆ ದುಡ್ಡನ್ನೂ ಮಾಡುತ್ತಿದ್ದಾರೆ. ಅಮಾಯಕ ಸಾರ್ವಜನಿಕರಾರೂ ತಾವು ಕನಿಷ್ಠ ನೂರು ವರ್ಷವೂ ಬದುಕುತ್ತೇವೆ ಎಂದು ಅಂದುಕೊಂಡಿಲ್ಲ. ಅದಕ್ಕೇ ಅವರ ಕಷ್ಟಗಳೂ ಹೆಚ್ಚಿವೆ.ಆದರೆ, ಅವರನ್ನು ಕೇಳುವವರು ಯಾರು?

ಪ್ರತಿಕ್ರಿಯಿಸಿ (+)