ಕೆಎಸ್‌ಎಪಿಎಸ್ ನೌಕರರ ವಿಭಾಗೀಯ ಸಮಾವೇಶ

7

ಕೆಎಸ್‌ಎಪಿಎಸ್ ನೌಕರರ ವಿಭಾಗೀಯ ಸಮಾವೇಶ

Published:
Updated:

ಗುಲ್ಬರ್ಗ: ಮನುಕುಲಕ್ಕೆ ಮಾರಕವಾದ `ಎಚ್‌ಐವಿ-ಏಡ್ಸ್' ಸೋಂಕು ತಡೆಗಟ್ಟುವ ಮೂಲಕ 15 ವರ್ಷಗಳಿಂದ ಸಮಾಜವನ್ನು ರಕ್ಷಿಸುವ ಕಾರ್ಯ ನಿರ್ವಹಿಸುತ್ತಿರುವ `ನೌಕರರ' ಸೇವೆಯೇ ಅತಂತ್ರದಲ್ಲಿದೆ. ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯ ಗುತ್ತಿಗೆ ನೌಕರರು ಸೇವಾ ಭದ್ರತೆ, ಕಾಯಮಾತಿ, ಭವಿಷ್ಯ ನಿಧಿ, ಭತ್ಯೆಗಳಿಲ್ಲದೇ ಬಳಲುತ್ತಿದ್ದಾರೆ. ಸಮಾನ ಹುದ್ದೆಗೆ- ಸಮಾನ ಸಂಬಳಕ್ಕೆ ಆಗ್ರಹಿಸಿದ್ದಾರೆ. ಈ ಬೇಡಿಕೆಗಳ ಈಡೇರಿಕಗೆ ಒತ್ತಾಯಿಸಿ ಗುಲ್ಬರ್ಗದ ವಿಶ್ವೇಶ್ವರಯ್ಯ ಭವನದಲ್ಲಿ ಡಿ.25ರಂದು ಬೆಳಿಗ್ಗೆ 10.30ಕ್ಕೆ ವಿಭಾಗೀಯ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದಾರೆ.`ಸಂಸ್ಕೃತಿ'ಯ ಹೆಸರಲ್ಲಿ ವೈಭವೀಕರಿಸುವ ಭಾರತ, ವಿಶ್ವ ಎಚ್‌ಐವಿ ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಅದರಲ್ಲೂ ಉತ್ತರ ಕರ್ನಾಟಕ `ಸೂಕ್ಷ್ಮ' ಪ್ರದೇಶವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಎಸ್‌ಎಪಿಎಸ್ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವೆ ಅಭದ್ರವಾಗಿದೆ' ಎಂದು ನೌಕರರ ಸಂಘದ ಸೋಮಶೇಖರ ಮಾಲಿಪಾಟೀಲ್ ಭಾನುವಾರ  ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ಎಚ್‌ಐವಿ ಬಂದರೆ ಸೋಂಕಿತರು ಬಹಿಷ್ಕಾರದ ಭಯದಲ್ಲಿ ಬಹಿರಂಗ ಪಡಿಸುವುದಿಲ್ಲ. ಹೀಗಾಗಿ ಎಚ್‌ಐವಿ  ಆರೋಗ್ಯ ಮತ್ತು ಸಾಮಾಜಿಕ ಪಿಡುಗು ಆಗಿ ಸಮಾಜವನ್ನು ತೆಗೆದುಕೊಳ್ಳುವ ಅಪಾಯವಿದೆ. ಆ ಸಂದರ್ಭದಲ್ಲಿ ಸಮಾಲೋಚನೆ, ಚಿಕಿತ್ಸೆ, ಶುಶ್ರೂಷೆ, ಪ್ರಯೋಗಾಲಯ ಪರೀಕ್ಷೆ, ಸಮುದಾಯ ಜಾಗೃತಿ ಮತ್ತಿತರ ಕಾರ್ಯಕ್ರಮಗಳ ಮೂಲಕ ಎಚ್‌ಐವಿ ಪಸರಿಸುವ ಪ್ರಮಾಣವನ್ನು ಇಳಿಸುವಲ್ಲಿ ಗುತ್ತಿಗೆ ನೌಕರರು ವೃತ್ತಿ ನಿರ್ವಹಿಸಿದ್ದಾರೆ. ಆದರೆ ಅವರ ಬದುಕೇ ಇಂದು ಭದ್ರತೆ ಇಲ್ಲದೇ ಅಪಾಯದಲ್ಲಿದೆ' ಎಂದರು. `ಸೋಂಕಿತರಿಗೆ ಸಾಮಾಜಿಕ ಬದುಕು ಕಲ್ಪಿಸುವ ಹಾಗೂ ಧೈರ್ಯ ತುಂಬುವ ನಿಟ್ಟಿನಲ್ಲಿ ಗುರುತನ್ನು ಬಚ್ಚಿಡಲಾಗುತ್ತಿತ್ತು. ಹೀಗಾಗಿ ಈ ವೃತ್ತಿ ನಿರ್ವಹಿಸುವ ನಮ್ಮ  ಕೆಲಸವೂ ಗೌಪ್ಯವಾಗಿ ಉಳಿಯಿತು. ಹೀಗಾಗಿ ಈಗ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ವೃತ್ತಿ ಶ್ರಮ ಹಾಗೂ ಅಗತ್ಯತೆ ಹೊರಜಗತ್ತಿಗೆ ತಿಳಿಯದಾಗಿದೆ. ಒಂದೂವರೆ ದಶಕದಿಂದ ಕೆಲಸ ಮಾಡುತ್ತಿದ್ದರೂ, ನಮ್ಮನ್ನು ಕಾಯಂಗೊಳಿಸಿಲ್ಲ. ಸೇವಾ ಭದ್ರತೆ ಇಲ್ಲ' ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್ ಹೇಳಿದರು.`ನಾವು ಒಂದು ದಿನ ಕೆಲಸ ನಿಲ್ಲಿಸಿದರೂ `ಎಚ್‌ಐವಿ' ಮತ್ತೆ ವೃದ್ಧಿಸುವ ಅಪಾಯವಿದೆ. ಈ ನಿಟ್ಟಿನಲ್ಲಿ ನಮ್ಮದು ಅರ್ಹನಿಶಿ ಸೇವೆ. ಇದನ್ನು ಸರ್ಕಾರ ಪರಿಗಣಿಸಿ ಕಾಯಮಾತಿ ಮಾಡಬೇಕು. ಈ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದು ಅವರು ಒತ್ತಾಯಿಸಿದರು.ಡಿ.25ರಂದು ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಸಮಾವೇಶ ಉದ್ಘಾಟಿಸುವರು. ಆಪ್ತಸಮಾಲೋಚಕ ವಿಜಯಕುಮಾರ್ ಸೂರನ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿ ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು. ಸುಮಾರು 350ಕ್ಕೂ ಹೆಚ್ಚು ನೌಕರರು ಉಪಸ್ಥಿತರಿರುವರು ಎಂದರು.`ಸಮಾಜ ರಕ್ಷಣೆಗೆ ಅವಶ್ಯವಾದ ಇವರ ಸೇವೆಯನ್ನು ಸರ್ಕಾರ ಕೂಡಲೇ ಕಾಯಮಾತಿ ಮಾಡಬೇಕು' ಎಂದು ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ದೇಸಾಯಿ             ಆಗ್ರಹಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಜಮೀರ್ ಅಹ್ಮದ್, ಮಹ್ಮದ್ ಅಲ್ಲಾವುದ್ದೀನ್, ವಿಜಯಕುಮಾರ್ ಸೂರನ್, ಸಿದ್ದಣ್ಣ, ಶ್ರೀನಿವಾಸ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry