ಬಾಲ ಯೇಸು ಆಗಮನ: ಸಂಭ್ರಮ

7

ಬಾಲ ಯೇಸು ಆಗಮನ: ಸಂಭ್ರಮ

Published:
Updated:

ಗುಲ್ಬರ್ಗ: ಮೇರಿ ಮಾತೆಯ ಮೂಲಕ ಯೇಸು ಧರೆಗವತರಿಸಿದ ಸಂಭ್ರಮವೇ `ಕ್ರಿಸ್ಮಸ್'. ಎಲ್ಲೆಡೆ ಆಚರಣೆಯು ಸಡಗರ. ಕ್ರೈಸ್ತ ಬಾಂಧವರ ಮನೆಗಳು ಕ್ರಿಸ್ಮಸ್ ಮರ, ನಕ್ಷತ್ರ ಹಾಗೂ ಗೋದಲಿಯಿಂದ ಅಲಂಕೃತಗೊಂಡರೆ, ಪ್ರಾರ್ಥನೆ, ಆರಾಧನೆ, ಸಿಹಿ, ವಿಶಿಷ್ಟ ಭೋಜನ, ಶುಭ ಕಾಮನೆಗಳ ಅದ್ದೂರಿ.ಬಾಲಕ್ತಿಸ್ತರ ಆಗಮನದ ಸಾಕ್ಷಾತ್ಕಾರಕ್ಕೆ ಚರ್ಚ್-ಮನೆಗಳು ದೀಪಾಲಂಕಾರ, ಹೂವು, ಎಲೆ, ಬಣ್ಣ ಬಣ್ಣದ ಕಾಗದ, ಚಾದರಗಳಿಂದ ರಂಗುಗೊಂಡಿವೆ. ಡಿ.24ರ ರಾತ್ರಿ ಚಂದ್ರಮನು ಬಾನಂಗಳದಲ್ಲಿ ಮೂಡುತ್ತಲೇ ಚರ್ಚ್‌ನತ್ತ ಬಾಂಧವರ ಸಮೂಹವೇ ಹರಿದು ಬಂತು.  ಧರ್ಮಗುರುಗಳು, ಅನುಯಾಯಿಗಳೆಲ್ಲ ಸೇರಿ ಮೇರಿ ಪುತ್ರನಾಮಗನದ ಆರಾಧನೆಗೆ ಸಾಕ್ಷಿಯಾದರು.ಡಿ.24 ರಾತ್ರಿ ಕ್ರಿಸ್ತರ ಬರುವಿಕೆಗೆ ನಡೆಸುವ ವಿಧಿ ವಿಧಾನಗಳನ್ನು `ಜಾಗರಣಾ ಆಚರಣೆ' ಎನ್ನುತ್ತಾರೆ.  ಮಧ್ಯರಾತ್ರಿ 12ರ ಹೊತ್ತಿಗೆ ಜೆರುಸಲೇಂ ನಗರದ ಸಮೀಪದ ಬೆತ್ಲಾಹ್ಯಾಂನಲ್ಲಿ ಕ್ರಿಸ್ತ ಜನಿಸಿದರು. ಆ ಕ್ಷಣವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು.ನಗರದ ಸಂತ ಮೇರಿಸ್ ಚರ್ಚ್‌ನಲ್ಲಿ ಕ್ರೈಸ್ತ ಧರ್ಮಪ್ರಾಂತ್ಯಾಧ್ಯಕ್ಷ (ಬಿಷಪ್) ಪೂಜ್ಯ ರಾಬರ್ಟ್ ಮಿರಾಂಡ ಸಾನಿಧ್ಯದಲ್ಲಿ ಕರ್ತನ ಭೋಜನದ ಮಹಾಪ್ರಾರ್ಥನೆ ನೆರವೇರಿತು. ಬಳಿಕ ಬೈಬಲ್ ಅಧ್ಯಾಯಗಳ ಪಠಣ ನಡೆಯಿತು. ಬಾಲ ಏಸು ಭುವಿಗೆ ಬಂದ ವೃತ್ತಾಂತವನ್ನು ಕನ್ನಡ, ಇಂಗ್ಲಿಷ್, ಹಿಂದಿ ಹಾಡುಗಳಲ್ಲಿ ವರ್ಣಿಸುವ ಮೂಲಕ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್ಮಸ್ ಹಾಡುಗಳ ನಿನಾದ ಕೇಳಿಬಂತು. ಅಲಂಕಾರದಲ್ಲಿ ಚರ್ಚ್ ದೇವಲೋಕದಂತೆ ಕಂಗೊಳಿಸಿತು. ಕೆರೋಲ್ ಆರಾಧನೆಯೂ ನಡೆಯಿತು. ಯೇಸುವಿನ ಶಿಶುಮೂರ್ತಿಗೆ ಎಲ್ಲರೂ ವಂದಿಸಿದರು. ಮೇರಿಯ ಮಡಿಲಲ್ಲಿ ಏಸು ಜನನವನ್ನು ಸ್ಮರಿಸುವ ಗೋದಲಿಯನ್ನು ಧರ್ಮಗುರುಗಳು ಪವಿತ್ರೀಕರಿಸಿದರು. ಕೇಕ್, ಸಿಹಿ ತಿಂಡಿಗಳನ್ನು ಹಂಚಿ ಸಂಭ್ರಮಿಸಿದರು. ಪರಸ್ಪರ ಶುಭಹಾರೈಸಿಕೊಂಡರು.ಸಂತ ನಿಕೋಲಸ್ ಸ್ಮರಣಾರ್ಥವಾದ ಕೆಂಪು ಬಟ್ಟೆ, ಗಡ್ಡ ತೊಟ್ಟ ಸಂತ ಕ್ಲಾಸ್ ಪಾತ್ರಧಾರಿಯು ಬಂದು ಸರ್ವರಿಗೂ ಸಿಹಿ ಹಂಚಿದರು.  

ಮನೆ ಮನೆಯಲ್ಲೂ ಆಚರಣೆ: ಡಿ.21ರಿಂದ ಪ್ರತಿ ಮನೆಗೆ ಹೋಗಿ ಪ್ರಾರ್ಥನೆ ನಡೆಸುವ ಪರಿಪಾಠ ಆರಂಭಗೊಂಡಿದೆ. ಲೋಕ ಕಲ್ಯಾಣಕ್ಕೆ ಪ್ರಾರ್ಥನೆ ಸಲ್ಲಿಸಿದ್ದೇವೆ. ಶಾಂತಿದೂತನಿಂದ ಜಗತ್ತಿಗೆ ಲೇಸಾಗಲಿ ಎಂಬುದು ನಮ್ಮ ಪ್ರಾರ್ಥನೆಯ ಅರಿಕೆ. ಇನ್ನು ಕ್ರಿಸ್ತ ಜಯಂತಿ ದಿನಕ್ಕೆ (ಡಿ.25) ಪ್ರತಿ ಮನೆಗಳು ಅಲಂಕೃತಗೊಂಡಿದ್ದರೆ, ಮನೆ ಮಂದಿ ಹೊಸ ಬಟ್ಟೆಗಳಲ್ಲಿ ಸಂಭ್ರಮಿಸಿದರು.ಅದರ ಜೊತೆ ಡೊನಟ್ಸ್, ರೋಸ್ ಕುಕ್, ಎಗ್ ಸ್ಪೆಷಲ್, ಖರ್ಜಿಕಾಯಿ ಮತ್ತಿತರ ತಿನಿಸುಗಳು, ಬಿರಿಯಾನಿ, ತಂದೂರಿ, ಶೇರ್ವಾ, ಡ್ರೈ ಮತ್ತಿತರ ಚಿಕನ್-ಮಟನ್‌ನ ತರಹೇವಾರಿ ಆಹಾರಗಳಿಂದ ಕೂಡಿದ ಭೋಜನವನ್ನು ಸವಿಯುತ್ತೇವೆ ಎಂದು ಆಚರಣೆಯ ಬಗ್ಗೆ ಕ್ರೈಸ್ತ ಧರ್ಮದ ಮೆಥೋಡಿಸ್ಟ್ ಪಂಥಾನುಯಾಯಿ ಮಾಥ್ಯೂ ಅಚ್ಚೋಳಿ ವಿವರಿಸಿದರು.

ಗುಲ್ಬರ್ಗದ ಕ್ಯಾಥೋಲಿಕ್ ಚರ್ಚ್, ಮೆಥೋಡಿಸ್ಟ್ ಚರ್ಚ್, ಹಿಂದೂಸ್ತಾನಿ ಚರ್ಚ್, ನ್ಯೂ ಗೋಸ್ಪೆಲ್ ಚರ್ಚ್ ಸೇರಿದಂತೆ ಎಲ್ಲೆಡೆ  ಕ್ರಿಸ್ಮಸ್ ಆಚರಣೆ ನಡೆಯಿತು. ಸಂತಸ ನೆಲೆಯೂರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry