ನೀರಿಗಾಗಿ ಹೆದ್ದಾರಿ ಬಂದ್

7
ಬನ್ನೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ

ನೀರಿಗಾಗಿ ಹೆದ್ದಾರಿ ಬಂದ್

Published:
Updated:
ನೀರಿಗಾಗಿ ಹೆದ್ದಾರಿ ಬಂದ್

ಕಮಲಾಪುರ: ಗುಲ್ಬರ್ಗ ತಾಲ್ಲೂಕಿನ ಅವರಾದ(ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬನ್ನೂರ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಆಗ್ರಹಿಸಿ, ಗ್ರಾಮಸ್ಥರು ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿನ ಅವರಾದ(ಬಿ) ಕ್ರಾಸ್ ಬಳಿ ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಒಂದೂವರೆ ಗಂಟೆಗಳ ಕಾಲ ನಡೆದರೂ ಯಾವ ಅಧಿಕಾರಿಯು ಸ್ಪಂದಿಸಲಿಲ್ಲ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ದೂರವಾಣಿಯಲ್ಲಿ ವಿಷಯ ತಿಳಿಸಿದರು ಸರಿಯಾದ ಪ್ರತಿಕ್ರಿಯೆ ಲಭಿಸದ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿ ತಡೆ ನಡೆಸಿ `ರಸ್ತೆ ಬಂದ್' ಮಾಡಿದರು.ಆಗ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗ್ರಾಮಸ್ಥರಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯಾಗುವವರೆಗೂ ಪ್ರತಿದಿನ 5 ಟ್ಯಾಂಕರ್‌ಗಳಿಂದ ನೀರು ಒದಗಿಸುವುದಾಗಿ ಲಿಖಿತವಾಗಿ ಭರವಸೆ ನೀಡಿದರು.ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಪ್ರತಿಭಟಿಸಿದಾಗ ತಾಲ್ಲೂಕು ಪಂಚಾಯಿತಿ ಅಧಿಕಾರಿ ಆಗಮಿಸಿ ಟ್ಯಾಂಕರ್ ಮೂಲಕ ಪ್ರತಿದಿನ 5 ಟ್ಯಾಂಕರ್ ನೀರು ಪೂರೈಸುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಈಡೇರಿಸದ ಅದೇ ಅಧಿಕಾರಿ ಬುಧವಾರ ಮತ್ತೆ ಬಂದು ದಿನಕ್ಕೆ 5 ಟ್ಯಾಂಕರ್ ನೀರು ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎರಡನೇ ಬಾರಿ ಲಿಖಿತ ಭರವಸೆ ನೀಡಿದ್ದಾರೆ!`ಪಂಚಾಯಿತಿಗೆ ಕೇಳಿದರೆ ಬನ್ನೂರ ಗ್ರಾಮದ ಸಮಸ್ಯೆ ಬಗೆಹರಿಸುವುದು ತಮ್ಮಿಂದಾಗದು ಎಂದು ಹೇಳುತ್ತಾರೆ. ಗ್ರಾಮದ ಜನಪ್ರತಿನಿಧಿ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಅಥವಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಗಣೇಶ ಬೆಳಮಗಿ ಇಲ್ಲಿನ  ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ' ಎಂದು ಗ್ರಾಮಸ್ಥರು ದೂರುತ್ತಾರೆ. `ಗಣೇಶ ಬೆಳಮಗಿ ಚುನಾವಣೆಯಿಂದ ಆಯ್ಕೆಯಾದಂದಿನಿಂದ ಇಲ್ಲಿಯವರೆಗೆ ಗ್ರಾಮದ ಹತ್ತಿರ ಸುಳಿದಿಲ್ಲ' ಎಂದು ಅವರಾದ (ಬಿ) ಕಾಂಗ್ರೆಸ್ ಮುಖಂಡ ಶಿವರಾಜ ಇಚಗೇರಿ ಆಕ್ರೋಶ ವ್ಯಕ್ತಪಡಿಸಿದರು.ಟ್ಯಾಂಕರ್ ಮೂಲಕ ನೀರು ಕಳುಹಿಸುವುದರಲ್ಲಿ ಏರುಪೇರಾದರೆ ಮತ್ತೆ  ಹೆದ್ದಾರಿ ಬಂದ್ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಬಸವರಾಜ ಬಿರಾದಾರ ಬನ್ನೂರ, ಅವರಾದ ತಾಲ್ಲೂಕು ಪಂಚಾಯಿತಿ ಸದಸ್ಯ ಧನವಂತ, ಕಾಂಗ್ರೆಸ್ ಮುಖಂಡ ಶಿವರಾಜ ಇಚಗೇರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಚಣಗೌಡ, ಗ್ರಾಮ ಪಂಚಾಯಿತಿ ಸದಸ್ಯ ಭೀಮಣ್ಣ ಪೂಜಾರಿ, ಶರಣಬಸಪ್ಪ, ಶಕೀಲ ಸಾಬ, ಬಾಬುರಾವ ಡೀಲರ್, ಶಶಿಕಾಂತ ಕಟ್ಟಿಮನಿ, ಸಯದ್‌ಖಾನ ಮಾನಖಾರಿ ಮತ್ತಿತರರು ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry