ಡೀಸೆಲ್‌ಗೆ ಸರ್ಕಾರಿ ಬಸ್ `ಕ್ಯೂ'!

7
ಪೆಟ್ರೋಲ್ ಬಂಕ್ ಎದುರು ಟ್ರಾಫಿಕ್ ಜಾಮ್

ಡೀಸೆಲ್‌ಗೆ ಸರ್ಕಾರಿ ಬಸ್ `ಕ್ಯೂ'!

Published:
Updated:
ಡೀಸೆಲ್‌ಗೆ ಸರ್ಕಾರಿ ಬಸ್ `ಕ್ಯೂ'!

ಗುಲ್ಬರ್ಗ: ಡೀಸೆಲ್ ಹಾಕಿಸಿಕೊಳ್ಳಲು ಸಾರಿಗೆ ಸಂಸ್ಥೆ ಬಸ್‌ಗಳು ಜೇವರ್ಗಿ ರಸ್ತೆಯ ಜೇವರ್ಗಿ ಕಾಲೊನಿ ಪೆಟ್ರೋಲ್ ಬಂಕ್ ಬಳಿ ಸಾಲುಗಟ್ಟಿ ನಿಂತ ಪರಿಣಾಮ, ಮಂಗಳವಾರ ಮಧ್ಯಾಹ್ನ ಈ ರಸ್ತೆಯಲ್ಲಿ ಸಾಕಷ್ಟು ಸಮಯ `ಟ್ರಾಫಿಕ್ ಜಾಮ್' ಉಂಟಾಯಿತು. ಸರ್ಕಾರಿ ಬಸ್‌ಗಳು ಡೀಸೆಲ್ ಹಾಕಿಸಿಕೊಳ್ಳಲು ಉದ್ದನೆಯ ಸಾಲಿನಲ್ಲಿ ಬಂದು ಕಾಯುತ್ತಿದ್ದುದನ್ನು ನೋಡಿ ಜನತೆ ಚಕಿತಗೊಂಡರು!ಡೀಸೆಲ್‌ನ ಸಗಟು ಖರೀದಿ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಾರಿಗೆ ಸಂಸ್ಥೆಯು ಖಾಸಗಿ ಬಂಕ್‌ಗಳಲ್ಲಿ ಬಸ್‌ಗೆ ಡೀಸೆಲ್ ಹಾಕಿಸಿಕೊಳ್ಳುವಂತೆ ಸಾರಿಗೆ ಸಚಿವ ಆರ್.ಅಶೋಕ ಸೂಚಿಸಿದ್ದಾರೆ. ಹೀಗಾಗಿ ಸಾರಿಗೆ ಬಸ್‌ಗಳಿಗೆ ಖಾಸಗಿ ಬಂಕ್‌ಗಳಿಂದ ಡೀಸೆಲ್ ಹಾಕಿಸಿಕೊಳ್ಳುವ ಪ್ರಕ್ರಿಯೆಗೆ ಸೋಮವಾರದಿಂದ ಚಾಲನೆ ದೊರೆತಿದೆ.ಲೆಕ್ಕಾಚಾರ: ರೈಲ್ವೆ, ಸಾರಿಗೆ ಸಂಸ್ಥೆಗಳಿಗೆ ಸರಬರಾಜು ಆಗುವ ಸಗಟು ಡೀಸೆಲ್ ಬೆಲೆಯಲ್ಲಿ ಕೇಂದ್ರ ಸರ್ಕಾರ ಅಧಿಕ ಹೆಚ್ಚಳ ಮಾಡಿದೆ. ಆದರೆ ಖಾಸಗಿ ಬಂಕ್‌ಗಳಲ್ಲಿ ತಿಂಗಳಿಗೆ ಐವತ್ತು ಪೈಸೆ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಹಾಗಾಗಿ ಸಗಟು ಖರೀದಿಗಿಂತ ಖಾಸಗಿ ಬಂಕ್‌ಗಳಲ್ಲೇ ಡೀಸೆಲ್ ಹಾಕಿಸಿದರೆ ಸಾಕಷ್ಟು ಹಣ ಉಳಿತಾಯವಾಗುವ ಲೆಕ್ಕಾಚಾರ ಸಾರಿಗೆ ಇಲಾಖೆಯದ್ದು! ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಆದೇಶ ಹೊರಡಿಸಲಾಗಿದ್ದು, ಆಯಾ ಡಿಪೋಗಳ ಬಸ್‌ಗೆ ಖಾಸಗಿ ಬಂಕ್‌ನಲ್ಲೇ ಡೀಸೆಲ್ ಹಾಕಿಸಲಾಗುತ್ತಿದೆ.“ಸಗಟು ಪ್ರಮಾಣದಲ್ಲಿ ಖರೀದಿಸಿದರೆ ಡೀಸೆಲ್‌ನ ಬೆಲೆ ಚಿಲ್ಲರೆ ಖರೀದಿಗಿಂತ ಪ್ರತಿ ಲೀಟರ್‌ಗೆ 11.85 ರೂಪಾಯಿಗಳಷ್ಟು ಹೆಚ್ಚಾಗಲಿದೆ. ಆದರೆ ಖಾಸಗಿ ಬಂಕ್‌ಗಳಲ್ಲಿ ಹಾಕಿಸಿದರೆ ತಿಂಗಳಿಗೆ ಬರೀ 50 ಪೈಸೆಯಷ್ಟೇ ಹೊರೆ ಬೀಳಲಿದೆ. ಅಂದರೆ ತಿಂಗಳಿಗೆ 50 ಪೈಸೆಯಂತೆ ಏರಿಕೆಯಾಗುತ್ತ ಹೋಗಿ ಮುಂದಿನ ಎರಡು ವರ್ಷಗಳಲ್ಲಿ ಆಗುವ ಒಟ್ಟು 12 ರೂಪಾಯಿಗಳಷ್ಟು ಅಧಿಕ ದರವನ್ನು ಸಗಟು ಖರೀದಿಯಲ್ಲಿ ಈಗಲೇ ಏಕೆ ಕೊಡಬೇಕು? ಇದರ ಬದಲಿಗೆ ಖಾಸಗಿ ಬಂಕ್‌ಗಳಿಂದ ಡೀಸೆಲ್ ಹಾಕಿಸಿಕೊಂಡರೆ ಅಷ್ಟರ ಮಟ್ಟಿಗೆ ಉಳಿತಾಯವಲ್ಲವೇ?” ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಲೆಕ್ಕಾಚಾರವನ್ನು `ಪ್ರಜಾವಾಣಿ' ಎದುರು ಬಿಡಿಸಿಟ್ಟರು.ಈಶಾನ್ಯ ಸಾರಿಗೆ ನಿಗಮದ ಎಲ್ಲ ಬಸ್‌ಗಳಿಗೆ ದಿನಕ್ಕೆ 2,60,000 ಲೀಟರ್ ಡೀಸೆಲ್ ಬೇಕಾಗುತ್ತದೆ. ಒಂದು ವೇಳೆ ಸಗಟು ದರದಲ್ಲಿ ಡೀಸೆಲ್ ಖರೀದಿ ಮುಂದುವರಿಸಿದ್ದರೆ ನಿಗಮಕ್ಕೆ ಪ್ರತಿ ತಿಂಗಳಿಗೆ 30 ಲಕ್ಷ ರೂಪಾಯಿಗಿಂತಲೂ ಹೆಚ್ಚು ಹೊರೆ ಬೀಳುತ್ತಿತ್ತು. ಆದರೆ ಖಾಸಗಿ ಬಂಕ್‌ಗಳಿಂದ ಖರೀದಿಸುವುದರಿಂದಾಗಿ ದಿನಕ್ಕೆ ಒಂದು ಲಕ್ಷ ರೂಪಾಯಿ ಉಳಿತಾಯವಾಗಲಿದೆ ಎಂದು ನಿಗಮದ ಅಧಿಕಾರಿಗಳು ವಿವರ ನೀಡಿದರು.`ಸಮೀಪದ ಬಂಕ್‌ಗೆ ಹೋಗಿ': ಭಾರತೀಯ ತೈಲ ನಿಗಮ(ಇಂಡಿಯನ್ ಆಯಿಲ್ ಕಾರ್ಪೊರೇಷನ್)ದಿಂದ ಈವರೆಗೆ ಸಗಟು ದರದಲ್ಲಿ ಟ್ಯಾಂಕರ್ ಮೂಲಕ ಡೀಸೆಲ್ ಖರೀದಿ ನಡೆಯುತ್ತಿತ್ತು. ಪ್ರಸ್ತುತ ಸಾರಿಗೆ ಸಚಿವಾಲಯದ ಆದೇಶದ ಮೇರೆಗೆ ಆಯಾ ಬಸ್ ಡಿಪೋಗಳ ಸಮೀಪದಲ್ಲಿರುವ ಬಂಕ್‌ನಲ್ಲಿ ಬಸ್‌ಗಳು ಡೀಸೆಲ್ ಹಾಕಿಸಿಕೊಳ್ಳುವಂತೆ ಸೂಚಿಸಲಾಗಿದೆ.ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲೂ ಈ ಆದೇಶ ಜಾರಿಯಾಗಿದ್ದು, ನಿಗಮದ ವ್ಯಾಪ್ತಿಯ ಎಲ್ಲ ವಿಭಾಗೀಯ ನಿಯಂತ್ರಕರಿಗೆ ಸಮೀಪದ ಪೆಟ್ರೊಲ್ ಬಂಕ್ ಗುರುತಿಸಿ ಅಲ್ಲಿಯೇ ಬಸ್‌ಗಳಿಗೆ ಡೀಸೆಲ್ ಹಾಕಿಸುವಂತೆ ಆದೇಶಿಸಲಾಗಿದೆ.ಗುಲ್ಬರ್ಗ ಡಿಪೋಗಳ ಬಸ್‌ಗಳು ಜೇವರ್ಗಿ ಕಾಲೊನಿಯ ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ಹಾಕಿಸಿಕೊಳ್ಳುತ್ತಿವೆ. ಮಂಗಳವಾರ ಬೆಳಿಗ್ಗೆಯಿಂದಲೇ ಅನೇಕ ಬಸ್‌ಗಳು ಈ ಬಂಕ್ ಮುಂದೆ ಸಾಲುಗಟ್ಟಿ ನಿಂತು, ಡೀಸೆಲ್ ಹಾಕಿಸಿಕೊಂಡವು. ಮಧ್ಯಾಹ್ನದ ಹೊತ್ತಿಗೆ ಬಸ್‌ಗಳ ಸಂಖ್ಯೆ ಹೆಚ್ಚಾಗಿ, ಜೇವರ್ಗಿ ರಸ್ತೆಯಲ್ಲಿ  `ಟ್ರಾಫಿಕ್ ಜಾಮ್' ಉದ್ಭವಿಸಿ, ಆಟೋಚಾಲಕರು, ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡ ಬೇಕಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry