ಕಟ್ಟಡ ಲೆಕ್ಕಕ್ಕಿದೆ... ಆಟಕ್ಕೆ ಇಲ್ಲ!

7
ನಾಲ್ಕು ವರ್ಷವಾದರೂ ಬಳಕೆ ಇಲ್ಲ

ಕಟ್ಟಡ ಲೆಕ್ಕಕ್ಕಿದೆ... ಆಟಕ್ಕೆ ಇಲ್ಲ!

Published:
Updated:
ಕಟ್ಟಡ ಲೆಕ್ಕಕ್ಕಿದೆ... ಆಟಕ್ಕೆ ಇಲ್ಲ!

ಗುಲ್ಬರ್ಗ: ಶಾಲೆಗಳಲ್ಲಿ ಕೊಠಡಿಗಳಿಲ್ಲದೇ ಬಯಲಿನಲ್ಲಿ ತರಗತಿಗಳನ್ನು ನಡೆಸುವ ಅನೇಕ ಉದಾಹರಣೆಗಳಿವೆ. ಇಂಥದರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅನುದಾನದಡಿ ಕಮಲಾಪುರದಲ್ಲಿ ಸುಮಾರು ರೂ 6 ಲಕ್ಷ ವೆಚ್ಚದಲ್ಲಿ ಕಟ್ಟಿಸಿದ ಎರಡು ಕೊಠಡಿಗಳು ಉಪಯೋಗವಾಗದೆ ಅವ್ಯವಸ್ಥೆಯ ಸ್ಮಾರಕವಾಗಿ ನಿಂತಿವೆ.`ಈ ಕಟ್ಟಡದೊಳಗೆ ಹೋಗಲು ದಾರಿಯೇ ಇಲ್ಲ. ಸುತ್ತಲೂ ಮುಳ್ಳು ಕಂಟಿ, ಇದನ್ನ ಕೇವಲ ದುಡ್ಡು ನುಂಗಿ ಹಾಕಲು ಕಟ್ಟಿಸಿದ್ದಾರೆ' ಎಂದು ಜನ ಶಾಪ ಹಾಕುತ್ತಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆ 2005-06 ರಲ್ಲಿ ಅನುದಾನ ಬಿಡುಗಡೆ ಮಾಡಿತ್ತು. 2009-2010ರಲ್ಲಿ  ಕಾಮಗಾರಿ ಪೂರ್ಣಗೊಂಡು ಕಟ್ಟಡ ಬಳಕೆಗೆ ಸಿದ್ಧವಾಗಿದೆ. ಆದರೆ ಅಂದಿನಿಂದ ಇಂದಿನವರೆಗೂ ಈ ಕಟ್ಟಡ ಯಾವುದೇ ರೀತಿ ಉಪಯೋಗಕ್ಕೆ ಬಂದಿಲ್ಲ.ಇದಕ್ಕೆ ಮುಖ್ಯ ಕಾರಣ ಕಟ್ಟಡ ನಿರ್ಮಿಸಿದ ಸ್ಥಳ, ಇಂಥ ಸ್ಥಳದಲ್ಲಿ ಕಟ್ಟಡಕ್ಕೆ ಅನುಮತಿ ಕೊಟ್ಟಿದ್ದಾದರೂ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ.  ಎದುರಿಗೆ ಕಟ್ಟಡಗಳಿವೆ. ಹಿಂದುಗಡೆ ಗುಡ್ಡ, ಎಡ ಬಲಕ್ಕೂ ಕಟ್ಟಡಗಳಿವೆ. ಅದರೊಳಗೆ ಹೋಗಲು ದಾರಿಯೇ ಇಲ್ಲ. ಹೀಗಾಗಿ ಇದನ್ನು ಯಾವುದಕ್ಕೂ ಬಳಸುತ್ತಿಲ್ಲ. ಈಗ ಇದು ಹಂದಿಗಳ ಆವಾಸ ಸ್ಥಾನ ಹಾಗೂ ಜನರಿಗೆ ಹೈಟೆಕ್ ಶೌಚಾಲಯವಾಗಿ ಬಿಟ್ಟಿದೆ. ಕೆಲವೇ ದಿನಗಳಲ್ಲಿ ಕಿಟಿಕಿ ಬಾಗಿಲುಗಳೆಲ್ಲ ಕಿತ್ತುಹೋಗುವ ಸಂಭವವಿದೆ.ಅಲ್ಲಿಯೇ ಇರುವ ಶಾಲೆಗಳಿಗೆ ಶೌಚಾಲಯಗಳಿಲ್ಲ. ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಹಳೆಯದಾಗಿ ತಳಪಾಯ ಕುಸಿದಿರುವುದರಿಂದ ಮಳೆಗಾಲದಲ್ಲಿ ನೀರೆಲ್ಲ ಕೋಣೆಯೊಳಗೆ ನುಗ್ಗುತ್ತದೆ. ಇದರಿಂದಾಗಿ ತರಗತಿಗಳನ್ನು ಹೊರಗೆ ನಡೆಸಲಾಗುತ್ತದೆ. ಇದು ಸಾರ್ವಜನಿಕ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಗೊತ್ತೇ ಇದೆ. ಇಷ್ಟೆಲ್ಲ ಸಮಸ್ಯೆಗಳು ಬೇರೆಡೆಗಿದ್ದರೂ ಅಲ್ಲಿಯೇ ಕಟ್ಟಡ ಕಟ್ಟಿರುವುದು ಎಷ್ಟು ಸರಿ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

 

ಸರ್ಕಾರದ ವಿವಿಧ ಯೋಜನೆಗಳಲ್ಲಿ ಬರುವ ಹಣದ ಸದುಪಯೋಗ ಮಾಡಿಕೊಳ್ಳುವುದನ್ನು ಬಿಟ್ಟು ಈ ರೀತಿ ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ. ಶಾಲೆ ಮುಖ್ಯಗುರು ಹಾಗೂ ಶಿಕ್ಷಣ ಇಲಾಖೆ ಈ ರೀತಿ ಹಣ ಪೋಲು ಮಾಡುವುದು ಸರಿಯಲ್ಲ. ಕಟ್ಟಡವನ್ನು ಯಾವುದಾದರೂ ಕೆಲಸಕ್ಕಾಗಿ ಬಳಸಿಕೊಳ್ಳಬೇಕು

--ಮೈನೋದ್ದಿನ್ ಗುಳಿ, ಕಮಲಾಪುರ ಗ್ರಾಪಂ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry