`ದಾಂಪತ್ಯಕ್ಕೆ ಕಾಲಿರಿಸಿದ 83 ಜೋಡಿ'

7

`ದಾಂಪತ್ಯಕ್ಕೆ ಕಾಲಿರಿಸಿದ 83 ಜೋಡಿ'

Published:
Updated:
`ದಾಂಪತ್ಯಕ್ಕೆ ಕಾಲಿರಿಸಿದ 83 ಜೋಡಿ'

ಚಿಂಚೋಳಿ: ರಾಜಕಾರಣಿ ಸುನೀಲ ವಲ್ಯ್‌ಪುರ ಅವರ 47ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗ ಹಮ್ಮಿಕೊಂಡ ಆದರ್ಶ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 83 ಜೋಡಿಗಳು ಮಂಗಳವಾರ ನವ ಜೀವನಕ್ಕೆ ಕಾಲಿರಿಸಿದವು.ಪದ್ಮಾನಾಭ ಚಾರ್ಯ ಅಗ್ನಿಹೋತ್ರಿ ಅವರ ಮಾರ್ಗದರ್ಶನದಲ್ಲಿ ಶುಭ ಮುಹೂರ್ತದಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಮಾಂಗಲ್ಯ ಧಾರಣ ಕಾರ್ಯಕ್ರಮ ನಡೆಯಿತು.ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಿಂದ ಕಳೆಗುಂದಿದ ಬಳಗದ ಕಾರ್ಯಕರ್ತರು, ಮಂಗಳವಾರ ಮಧ್ಯಾಹ್ನದ ವೇಳೆಗೆ ಎಲ್ಲವೂ ಸುಸೂತ್ರವಾಗಿ ನಡೆದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟರು.ಬೃಹತ್ ಪೆಂಡಾಲ್‌ನಲ್ಲಿ ಬಹುದೊಡ್ಡ ವೇದಿಕೆ ನಿರ್ಮಿಸಲಾಗಿತ್ತು. ಅತಿಥಿ ಗಣ್ಯರು, ಸ್ವಾಮೀಜಿ ಹಾಗೂ ರಾಜಕಾರಣಿಗಳಿಗೆ ಮೀಸಲಾಗಿದ್ದ ವೇದಿಕೆಯಲ್ಲಿ, ಬೆಳಿಗ್ಗೆ ಆ ಜಾಗದಲ್ಲಿ ವಧು ವರರು ಕುಳಿತರು. ವಧು ವರರ ಹಿಂದೆ ಅತಿಥಿ ಗಣ್ಯರು ಮತ್ತು ಸ್ವಾಮೀಜಿಗಳು ಆಸೀನರಾಗಿದ್ದರು. ಅವರ ಎದುರು ರಸಮಂಜರಿ ಕಾರ್ಯಕ್ರಮದ ಕಲಾವಿದರು ಗಾನ ಸುಧೆ ಹರಿಸುತ್ತಿದ್ದರು.ವೇದಿಕೆಯ ಹಿಂದೆ ಕಟ್ಟಲು ತಂದಿದ್ದ ಬ್ಯಾನರ್, ನೀತಿ ಸಂಹಿತೆಗೆ ಹೆದರಿ ಕೈಬಿಡಲಾಯಿತು. ಇದಲ್ಲದೇ ಪಟ್ಟಣದ ವಿವಿಧೆಡೆ ಹಾಕಿದ್ದ ಫ್ಲೆಕ್ಸ್, ಕಟೌಟ್ ರಾತ್ರಿಯೇ ತೆರವುಗೊಳಿಸಿದ ಘಟನೆಯೂ ನಡೆಯಿತು. ನೀತಿ ಉಲ್ಲಂಘನೆಯಾಗದಂತೆ ತಹಶೀಲ್ದಾರ ಜಗನ್ನಾಥರೆಡ್ಡಿ ಅವರು ಮುತುವರ್ಜಿ ವಹಿಸಿದ್ದರು.ಸಾಮೂಹಿಕ ವಿವಾಹದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 2 ಜೋಡಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಮದ್ ರಫಿ ಶಕಾಲೆ ನೇತೃತ್ವದ ಅಧಿಕಾರಿಗಳ ತಂಡ ವಾಪಸ್ ಕಳುಹಿಸಿದರೆ, ಮರು ಮದುವೆಗೆ ಯತ್ನಿಸಿದ ಒಬ್ಬನಿಗೆ `ಗೂಸಾ' ಕೊಟ್ಟ ಘಟನೆಯೂ ನಡೆಯಿತು.ಚುನಾವಣಾ ನೀತಿ ಸಂಹಿತೆ ಪಾಲನೆಯ ನೋಡಲ್ ಅಧಿಕಾರಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಡಿ. ಕಾರ್ಯಕ್ರಮದ ದೃಶ್ಯ ಹಾಗೂ ಭಾಷಣದ ಧ್ವನಿ ಮುದ್ರಿಕೆ ಮಾಡಿಕೊಂಡರು. ಅದನ್ನು  ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು.ಅದನ್ನು ವೀಕ್ಷಿಸಿದ ನಂತರ ಜಿಲ್ಲಾಧಿಕಾರಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಮಂಜುನಾಥ ಪ್ರಜಾವಾಣಿಗೆ ತಿಳಿಸಿದರು.ಸೋಮವಾರ ರಾತ್ರಿ ಉನ್ನತಾಧಿಕಾರಿಗಳಿಂದ ಮೌಖಿಕ ಅನುಮತಿ ಪಡೆದು ಸರಳವಾಗಿ ರಾಜಕೀಯದ ಸೊಂಕಿಲ್ಲದೇ ಕಾರ್ಯಕ್ರಮ ನಡೆದಿದ್ದು ಕಂಡುಬಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry