`ಮಕ್ಕಳ ಹಬ್ಬ ಪ್ರತಿಭೆ ಗುರುತಿಸಲು ವೇದಿಕೆ'

7

`ಮಕ್ಕಳ ಹಬ್ಬ ಪ್ರತಿಭೆ ಗುರುತಿಸಲು ವೇದಿಕೆ'

Published:
Updated:
`ಮಕ್ಕಳ ಹಬ್ಬ ಪ್ರತಿಭೆ ಗುರುತಿಸಲು ವೇದಿಕೆ'

ಗುಲ್ಬರ್ಗ: ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ ಇರುತ್ತದೆ. ಅಂತಹ ಕೌಶಲವನ್ನು ಗುರುತಿಸಿ ಪ್ರತಿಭೆ ಅನಾವರಣಕ್ಕಾಗಿ `ಮಕ್ಕಳ ಹಬ್ಬ' ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಹೇಳಿದರು.ನಗರದ ಕನ್ನಡ ಭವನದಲ್ಲಿ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ `ಮಕ್ಕಳ ಹಬ್ಬ'ವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳು ತಮ್ಮ ಮುಂದಿನ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಲು ಪಾಲಕರು ಅದಕ್ಕೆ ಪೂರಕವಾಗಿ ಉತ್ತಮ ಶಿಕ್ಷಣ ನೀಡಿ ಪ್ರೋತ್ಸಾಹಿಸಬೇಕು. ಉನ್ನತ ಮಟ್ಟದ ಸಾಧನೆ ಮಾಡಿ, ತಂದೆ ತಾಯಿಗಳ ಶ್ರಮಕ್ಕೆ ಮಕ್ಕಳು ಪ್ರತಿಫಲ ಒದಗಿಸಿ ಕೊಡಬೇಕು. ಇದಕ್ಕೆ ಸೂಕ್ತ ಪ್ರೇರಣೆ ಅಗತ್ಯ ಎಂದರು.ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ ಓದುವುದಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿ, ಪ್ರತಿಭೆಯನ್ನು ಗುರುತಿಸಿಕೊಳ್ಳಲು ಅವಕಾಶ ಒದಗಿದಾಗ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರತ್ನಾ ಬಿ. ಕಲಂದಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಧೈರ್ಯ, ಸಾಮರ್ಥ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಇಂತಹ ವೇದಿಕೆಗಳು ಸಹಕಾರಿಯಾಗಲಿವೆ ಎಂದರು. ವಿದ್ಯಾರ್ಥಿಗಳ ಕುರಿತು ಪಾಲಕರೊಂದಿಗೆ ಸಂವಾದ ನಡೆಸಲಾಗುವುದು. ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ, ಅವರಿಗೆ ಅವಕಾಶ ನೀಡಲು `ಮಕ್ಕಳ ಹಬ್ಬ'ವನ್ನು ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಮುಖ್ಯ ಅತಿಥಿಯಾಗಿದ್ದರು. ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸದ್ದಾಂ ಹುಸೇನ್ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ ನಿರೂಪಿಸಿದರು.  ಯುವರಾಜ ಘಾಡಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry