ಅಡತಡೆ ಮಧ್ಯೆ ಚಿತ್ರೋತ್ಸವ ಯಶಸ್ವಿ

7

ಅಡತಡೆ ಮಧ್ಯೆ ಚಿತ್ರೋತ್ಸವ ಯಶಸ್ವಿ

Published:
Updated:
ಅಡತಡೆ ಮಧ್ಯೆ ಚಿತ್ರೋತ್ಸವ ಯಶಸ್ವಿ

ಗುಲ್ಬರ್ಗ: ಬೆಂಗಳೂರು ಚಿತ್ರ ಸಂಸ್ಥೆ ಗುಲ್ಬರ್ಗದಲ್ಲಿ ಬುಧವಾರ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವವು ಚುನಾವಣಾ ನೀತಿ ಸಂಹಿತೆ, ಕಾರ್ಮಿಕರ ಮುಷ್ಕರ ಇನ್ನಿತರ ಅಡೆತಡೆಗಳ ನಡುವೆ ಯಶಸ್ವಿಯಾಗಿ ನಡೆಯಿತು.ಬಹುದಿನಗಳಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಪ್ರಯತ್ನಿಸುತ್ತಿರುವ ಆಯೋಜಕರಿಗೆ, ಸ್ಥಳೀಯ ಸಂಸ್ಥೆಗಳ ಚುನಾವಣಾ ನೀತಿ ಸಂಹಿತೆ ಪ್ರಯುಕ್ತ ರಾಜಕೀಯ ಧುರೀಣರು ಆಗಮಿಸುವುದಿಲ್ಲ ಎಂಬ ಭೀತಿ ಕಾಡಲಾರಂಭಿಸಿತ್ತು.

ಇದಾದ ನಂತರ ಕಾರ್ಮಿಕರ ಮುಷ್ಕರದ ಬಂದ್‌ನಿಂದಾಗಿ ಮತ್ತಷ್ಟು ಆತಂಕ ಉಂಟಾಗಿತ್ತು. ಮುಷ್ಕರದ ಪ್ರಯುಕ್ತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ ಬಂದ್ ಪರಿಣಾಮ ಚಿತ್ರೋತ್ಸವದ ಮೇಲೆ ಆಗುತ್ತದೆ ಎಂಬ ಸಂಶಯ ಆಯೋಜಕರನ್ನು ಕಾಡುತ್ತಿದ್ದರೂ ರಂಗಮಂದಿರದಲ್ಲಿ ಜನ ಕಿಕ್ಕಿರಿದು ಜಮಾಯಿಸಿದರು.ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಕೂರ್ಮಾವತಾರ ಚಿತ್ರ ಪ್ರದರ್ಶನ ಅತಿಥಿಗಳ ಆಗಮನ ತಡವಾದ್ದರಿಂದ ರದ್ದಾಗಬಹುದೆಂಬ ಮಾತು ಕೇಳಿಬಂತು. ಈ ನಡುವೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಉದ್ಯಮಿಗಳಾದ  ರಾಘವೇಂದ್ರ ಮೈಲಾಪುರ, ಕೃಷ್ಣಾಜಿ ಕುಲ್ಕರ್ಣಿ, ಬಸವರಾಜ ದಿಗ್ಗಾವಿ, ಭೀಮಾಶಂಕರ ಪಾಟೀಲ, ಉದಯಶಂಕರ ಶೆಟ್ಟಿ, ಸಂಜೀವ ರೆಡ್ಡಿ, ಶಕುಂತಲಾ ಪಾಟೀಲ, ಜಯತೀರ್ಥ ಎಂ.ಡಿ., ಜಸ್ವೀರ್ ಸಿಂಗ್ ಆಗಮಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸಿಂಗ್ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಎ.ಎನ್. ಸುಬ್ಬರಾವ ಅವರ ಜೊತೆ ಕೆಲವು ಚಿತ್ರೋತ್ಸವಗಳಲ್ಲಿ ಭಾಗವಹಿಸಿದ್ದೆ ಎಂದರು. ಸಮಾಜದಲ್ಲಿ ನಡೆಯುವ ಘಟನೆಗಳನ್ನು ಕಥೆ ಕಾಂಬರಿ ಇನ್ನಿತರ ಸಾಹಿತ್ಯಕ ಕೃತಿಗಳ ಮೂಲಕ ಕವಿ ಹಿಡಿದಿಟ್ಟಿರುತ್ತಾನೆ. ಅಂಥ ಒಳ್ಳೆ ಕೃತಿಗಳನ್ನು ಚಲನಚಿತ್ರಗಳನ್ನಾಗಿಸಿ ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮದ ಮೂಲಕ ಜನರ ಮುಂದಿಟ್ಟರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದರು.ಗುಲ್ಬರ್ಗ ಬೆಳೆಯುತ್ತಿರುವ ನಗರ. ವಿಭಾಗೀಯ ಕೇಂದ್ರವಾದ್ದರಿಂದ ಇಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಪ್ರಾಶಸ್ತ್ಯಕೊಟ್ಟು ಪ್ರೋತ್ಸಾಹಿಸಿ ಸಹಕರಿಸಬೇಕು ಎಂದರು.ಅಲ್ಲಿಯವರೆಗೂ ಜನ ಪಂಜಾಬ್ ಬೂಟ್ ಹೌಸ್ ಮಾಲೀಕ ಜಸ್ವೀರ್ ಸಿಂಗ್ ಅವರ ಹಾಡು ಹಾಗೂ ಚಾನಲ್ ಒಂದರ ಹಾಸ್ಯ ಕಲಾವಿದ ಪ್ರಶಾಂತ ಚೌಧರಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.ನಂತರ ಗಿರೀಶ ಕಾಸರವಳ್ಳಿಯರ ಚಿತ್ರಕಥೆ ಸಂಭಾಷಣೆಯನ್ನು ಒಳಗೊಂಡ `ಕೂರ್ಮಾವತಾರ' ತೆರೆ ಮೇಲೆ ಕಾಣುತ್ತಲೇ ಜನ ಸ್ತಬ್ಧರಾಗಿ ವೀಕ್ಷಣೆಯಲ್ಲಿ ತಲ್ಲೆನರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry