ಬವಣೆಗಳಲ್ಲಿ ಬಡವಾದ ಮಹಾದೇವನಗರ!

7

ಬವಣೆಗಳಲ್ಲಿ ಬಡವಾದ ಮಹಾದೇವನಗರ!

Published:
Updated:
ಬವಣೆಗಳಲ್ಲಿ ಬಡವಾದ ಮಹಾದೇವನಗರ!

ಗುಲ್ಬರ್ಗ: ಮಹಾನಗರವಾಗಿ ಬೆಳೆದಿರುವ ಗುಲ್ಬರ್ಗದಲ್ಲಿ ಇನ್ನೂ ಅನೇಕ ಬಡಾವಣೆಗಳು ಮೂಲ ಸೌಕರ್ಯಗಳಿಂದ ವಂಚಿತಗೊಂಡಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಗುವ ಕನಿಷ್ಠ ಅನುಕೂಲವನ್ನು ಮಾಡಿಕೊಡದೆ, ಪಾಲಿಕೆ ವ್ಯಾಪ್ತಿಗೆ ಸೇರಿದ ಪ್ರದೇಶ ಎನ್ನುವ ಹಣೆಪಟ್ಟಿ ಅಂಟಿಸಿ ತೆರಿಗೆ ವಸೂಲಿಯನ್ನು ಮಾತ್ರ ಎಡಬಿಡದೆ ಮಾಡಲಾಗುತ್ತಿದೆ.



ಶಹಾಬಜಾರ್‌ಗೆ ಹೊಂದಿಕೊಂಡಿರುವ 18ನೇ ವಾರ್ಡ್ ಮಹಾದೇವನಗರದ ಜನರು ನಗರದಲ್ಲಿದ್ದರೂ ಗ್ರಾಮಕ್ಕಿಂತಲೂ ಕನಿಷ್ಠ ಸೌಲಭ್ಯದಲ್ಲಿ ಬದುಕು ಸಾಗಿಸುತ್ತಿರುವುದು ಬಡಾವಣೆಯ ಸಮಸ್ಯೆಗಳಿಗೆ ಸಾಕ್ಷಿಯಂತಿದೆ.



ಶಹಾಬಜಾರ್ ನಾಕಾದಿಂದ ಶೇಖ್‌ರೋಜಾ, ಮಹಾದೇವನಗರ, ದುಬೈ ಕಾಲನಿ, ವಡ್ಡರ ಗಲ್ಲಿಗಳ ಕಡೆಗೆ ಸಂಚರಿಸಿದರೆ ಗುಲ್ಬರ್ಗ ಮಹಾನಗರವಾಗಿ ಬೆಳೆದಿದೆಯೇ ಎನ್ನುವ ಅನುಮಾನ ಕಾಡದೆ ಇರದು. ಗುಲ್ಬರ್ಗದ ಮೂಲ ಪ್ರದೇಶಗಳಿಗೆ ಇನ್ನೂ ರಸ್ತೆ, ಕುಡಿಯುವ ನೀರು, ಚರಂಡಿ ನಿರ್ಮಾಣ, ಶೌಚಾಲಯ ಇತ್ಯಾದಿ ಸೌಲಭ್ಯಗಳನ್ನು ಪಾಲಿಕೆಯು ಸಮರ್ಪಕವಾಗಿ ನೀಡಿಲ್ಲ. ಪಾಲಿಕೆ ಅಸ್ತಿತ್ವಕ್ಕೆ ಬಂದು ದಶಕಗಳಾದರೂ ಈ ಪ್ರದೇಶದಲ್ಲಿ ಇನ್ನೂ ನಿಜಾಮನ ಕಾಲದ ರಸ್ತೆಗಳೆ ಇವೆ!



ಖಾಲಿ ಪ್ರದೇಶವೆಲ್ಲ ಗಿಡಗಂಟಿಯಿಂದ ತುಂಬಿಕೊಂಡು ಜನ ಸಂಚಾರದ ರಸ್ತೆಯಲ್ಲೆಲ್ಲ ಹರಡಿಕೊಂಡಿವೆ. ವಿದ್ಯುತ್ ಕಂಬಗಳಿಗೆ ಅಂಟಿಕೊಂಡು ಬೆಳೆಯುತ್ತಿರುವ ಗಿಡಗಂಟಿಗಳು ಅಪಾಯವನ್ನು ಆಹ್ವಾನಿಸುತ್ತಿವೆ. `ಗಬ್ಬೆದ್ದ ಚರಂಡಿಯಿಂದ ಹೂಳು ಎತ್ತುವ ಕೆಲಸವನ್ನು ಮಾತ್ರ ಪಾಲಿಕೆ ಆಗಾಗ ಮಾಡುವುದನ್ನು ಬಿಟ್ಟರೆ, ಈ ಪ್ರದೇಶದಲ್ಲಿನ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುವುದೇ ಇಲ್ಲ. ರಸ್ತೆಗಳ ಕಸ ಗೂಡಿಸುವುದು ದೂರದ ಮಾತು' ಎನ್ನುತ್ತಾರೆ ಮಹಾದೇವ ನಗರ ನಿವಾಸಿ ಶಾಂತಪ್ಪ ನರೋಣಾ.



ರಸ್ತೆ ಅಂಚಿನ ವಿದ್ಯುತ್ ಕಂಬಗಳಿಗೆ ಗಿಡಗಂಟಿಗಳು ಅಂಟಿಕೊಂಡು ಬೆಳೆಯುತ್ತಿರುವ ಅಪಾಯದ ಬಗ್ಗೆ ಪಾಲಿಕೆ ಗಮನ ಸೆಳೆಯುವ ಕೆಲಸವನ್ನು ಅಲ್ಲಿನ ನಿವಾಸಿಗಳು ಮಾಡಿದ್ದಾರೆ. ಆದರೆ ಜೆಸ್ಕಾಂ ಮೇಲೆ ಜವಾಬ್ದಾರಿ ಹಾಕುತ್ತಿರುವ ಪಾಲಿಕೆ ಅಧಿಕಾರಿಗಳು ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ.



ನಗರದಲ್ಲಿನ ಎಲ್ಲ ಸಮಸ್ಯೆಗಳು ಪಾಲಿಕೆಗೆ ಬರುತ್ತವೆ ಎನ್ನುವುದು ಜೆಸ್ಕಾಂ ಅಧಿಕಾರಿಗಳು ಸಮಜಾಯಿಸಿ ನೀಡಿದ್ದಾರೆ. ಇದರಿಂದ ಬೇಸತ್ತಿರುವ ನಿವಾಸಿಗಳು ಇದೀಗ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

`ನಗರದ ಸಾರ್ವಜನಿಕ ಬೀದಿಗಳ ವಿದ್ಯುತ್ ದೀಪಗಳ ನಿರ್ವಹಣೆಯನ್ನು ಪಾಲಿಕೆ ಮಾಡುತ್ತದೆ. ಇದಕ್ಕಾಗಿ ಖಾಸಗಿಯವರಿಗೆ ಪ್ರತಿವರ್ಷ ಗುತ್ತಿಗೆ ನೀಡುತ್ತದೆ.



ಸಮಸ್ಯೆಯತ್ತ ಗಮನ ಹರಿಸಬೇಕಿದ್ದ ಪಾಲಿಕೆ ಅಧಿಕಾರಿಗಳು ಯಾರ ಮಾತು ಕೇಳುತ್ತಿಲ್ಲ. ಈ ವಾರ್ಡಿನ ಪಾಲಿಕೆ ಸದಸ್ಯರು ಕೆಲಸ ಮಾಡುವುದಿಲ್ಲ. ಜನರು ಯಾರ ಹತ್ತಿರ ಸಮಸ್ಯೆ ಹೇಳಿಕೊಳ್ಳಬೇಕೆಂದು ಗೊತ್ತಾಗದಂತಾಗಿದೆ' ಎಂದು ಅಸಹಾಯಕತೆ ವ್ಯಕ್ತಪಡಿತ್ತಾರೆ ಗವಿಸಿದ್ದಪ್ಪ ಪಾಟೀಲ.



ಸದ್ಯ ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿದ್ದು, 18ನೇ ವಾರ್ಡ್‌ನಿಂದ ಅತಿಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ. ದಕ್ಷ ಹಾಗೂ ಪಾಲಿಕೆಯಿಂದ ಮೂಲ ಸೌಕರ್ಯ ಒದಗಿಸುವ ಬದ್ಧತೆಯುಳ್ಳವರಿಗೆ ಮಾತ್ರ ಮತ ನೀಡಲು ವಾರ್ಡ್ ಜನರು ನಿಶ್ಚಯಿಸಿದ್ದಾರೆ.



`ಚುನಾವಣೆಯಲ್ಲಿ ಭರವಸೆ ನೀಡುವ ಅಭ್ಯರ್ಥಿಗಳು ಆನಂತರ ಎಲ್ಲವನ್ನು ಮರೆತು ಬಿಡುತ್ತಾರೆ. ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಸಿಸಿ ರಸ್ತೆಗಳನ್ನು ಮಾಡಿಸುತ್ತಿದ್ದಾರೆ. ಮಹಾದೇವ ನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ ಸಿಸಿ ರಸ್ತೆಗಳಾಗಿಲ್ಲ. ಈ ಪ್ರದೇಶದಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿನಾಕಾರಣ ಜನಪ್ರತಿನಿಧಿಗಳನ್ನು ಎದುರು ಹಾಕಿಕೊಳ್ಳಲು ಮುಂದಾಗುವುದಿಲ್ಲ. ಜನಪ್ರತಿನಿಧಿಗಳು ಸೌಲಭ್ಯ ಒದಗಿಸುವ ಬಗ್ಗೆ ಯೋಚಿಸುವುದಿಲ್ಲ.



ಹೀಗಾಗಿ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಇತ್ತ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಹಾನಗರದ ಜನರ ಸಮಸ್ಯೆ ಪರಿಹರಿಸಲು ಸ್ವತಃ `ಪರಮಾತ್ಮ'ನೆ ಬರಬೇಕು' ಎಂದು ಶೇಖ್‌ರೋಜಾ ನಿವಾಸಿ ಶರಣಪ್ಪ ಬೇಸರ ವ್ಯಕ್ತಪಡಿಸಿದರು.

ಗುಲ್ಬರ್ಗದ ಮೂಲ ಪ್ರದೇಶಗಳಿಗೆ ಹೆಚ್ಚಿನ ಸೌಕರ್ಯ ಒದಗಿಸುವುದರ ಕಡೆಗೆ ಪಾಲಿಕೆ ಅಧಿಕಾರಿಗಳು ಇನ್ನಾದರೂ ಮುಂದಾಗಲಿ ಎನ್ನುವುದು ಪ್ರಜ್ಞಾವಂತರ ಅನಿಸಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry