ಶುಕ್ರವಾರ, ನವೆಂಬರ್ 22, 2019
20 °C

`ಉತ್ತಮರಿಗೆ ಪ್ರಶಸ್ತಿ ಅರಸಿ ಬರುತ್ತವೆ'

Published:
Updated:

ಗುಲ್ಬರ್ಗ: ಯಾವುದೇ ಒಂದು ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಸಾಧಕನಿಗೆ ಪ್ರಶಸ್ತಿಗಳು ಹರಿದು ಬರುತ್ತವೆ. ಪ್ರಶಸ್ತಿಗಳೇ ಅವರನ್ನು ಹುಡುಕಿಕೊಂಡು ಬರಬೇಕು, ಪ್ರಶಸ್ತಿಗಳ ಹಿಂದೆ ಹೋಗುವುದು ತರವಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ `ಶ್ರೀವಿಜಯ' ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಇಂದು ಪ್ರಶಸ್ತಿ ನೀಡುವ ಸಂಸ್ಥೆಗಳು ಹೆಚ್ಚುತ್ತಿವೆ. ಸಂಸ್ಥೆಗಳು ತಮ್ಮ  ಪ್ರತಿಷ್ಠೆಗಾಗಿ ಪ್ರಶಸ್ತಿ ನೀಡುವುದು ಕಂಡು ಬರುತ್ತಿದೆ. ಪ್ರಶಸ್ತಿ ಕೊಡುವುದು ತಪ್ಪಲ್ಲ, ಅದರ ಉದ್ದೇಶ, ರೀತಿ, ನೀತಿ ಒಳ್ಳೆಯದಾಗಿರಬೇಕು. ಲಾಬಿ ಮಾಡಿ ಪ್ರಶಸ್ತಿ ಪಡೆಯುವವರು ಇದ್ದಾರೆ ಎಂದರು.ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆಯು ಇದುವರೆಗೂ ಪ್ರಶಸ್ತಿ ನೀಡುತ್ತಾ ಬಂದಿದೆ. ಕನ್ನಡ ಮುಕುಟ ಮಣಿ `ಶ್ರೀ ವಿಜಯ' ಪ್ರಶಸ್ತಿ ಪ್ರದಾನವನ್ನು ಇಂದಿನಿಂದ ಸರ್ಕಾರವೇ ಕೊಡುವಂತೆ ಮಾಡಿದ ಕೀರ್ತಿ ಈ ಸಂಸ್ಥೆಯದ್ದು ಎಂದು ಶ್ಲಾಘಿಸಿದರು.ಸಮಾಜ ಗುರುತಿಸುವಂತಹ ಕೆಲಸ ಮಾಡಿದರೆ ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆ ನಿಟ್ಟಿನಲ್ಲಿ ಸಾಧನೆ ಮಾಡಿ ಎಂದು ಅಲ್ಲಿ ನೆರೆದಿರುವ ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರು. ಡಾ.ಶಿವರಾಂ ಅಸುಂಡಿ ಅವರ `ಹೈದರಾಬಾದ್ ಕರ್ನಾಟಕ ಸಮೂಹ ಮಾಧ್ಯಮ' ಕೃತಿ ಹಾಗೂ ಡಾ.ಸೂರ್ಯಕಾಂತ ಸುಜ್ಯಾತ್ ಅವರ `ಗುಲಾಮಗಿರಿ' ಕೃತಿಗೆ `ಶ್ರೀ ವಿಜಯ' ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಸುಲಫಲ ಮಠದ ಮಹಾಂತ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಮುಖ್ಯ ಅತಿಥಿಯಾಗಿದ್ದರು. ಖ್ಯಾತ ಶಿಕ್ಷಣ ತಜ್ಞ ಪ್ರೊ.ಚನ್ನಾರೆಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಪಾಟೀಲ ಇದ್ದರು. ಅಶ್ವಿನಿ ಚಿತ್ತಾಪುರ ಪ್ರಾರ್ಥಿಸಿದರು. ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಅಧ್ಯಕ್ಷ ಪ್ರಭುಲಿಂಗ ನೀಲೂರೆ ಸ್ವಾಗತಿಸಿದರು. ಶಿವಾನಂದ ಅಣಜಿಗಿ ನಿರೂಪಿಸಿದರು.

ಪ್ರತಿಕ್ರಿಯಿಸಿ (+)