ಭಾನುವಾರ, ಡಿಸೆಂಬರ್ 8, 2019
25 °C

ಬುದ್ಧಿಮಾಂದ್ಯರಿಗೆ `ಪರಿವರ್ತನೆ' ಮಂದಿರ

Published:
Updated:
ಬುದ್ಧಿಮಾಂದ್ಯರಿಗೆ `ಪರಿವರ್ತನೆ' ಮಂದಿರ

ಗುಲ್ಬರ್ಗ: ತಮಗೆ ಜನಿಸಿರುವ ಮಗು ಬೌದ್ಧಿಕವಾಗಿ ಚುರುಕಾಗಿರಬೇಕು, ಚಟುವಟಿಕೆಯಿಂದ ಕೂಡಿರಬೇಕು ಎನ್ನುವುದು ಪ್ರತಿಯೊಬ್ಬ ತಂದೆ-ತಾಯಿ ಬಯಸುವುದು ಸಾಮಾನ್ಯ. ತಮ್ಮ ಮಗು ಬುದ್ಧಿಮಾಂದ್ಯವಾಗಿದ್ದರೆ ತಾತ್ಸಾರದಿಂದ ಕಾಣುವುದೂ ಇದೆ. ಬುದ್ಧಿಮಾಂದ್ಯ ಮಕ್ಕಳು ಶಾಪ ಅಲ್ಲ ಎನ್ನುವುದಕ್ಕೆ `ಪರಿವರ್ತನಾ ಮಂದಿರ' ಶಾಲೆ ಪೂರಕವಾಗಿದೆ.ನಗರದ ಅಕ್ಕಮಹಾದೇವಿ ಹೌಸಿಂಗ್ ಬೋರ್ಡ್ ಕಾಲೊನಿಯ ವಿನಾಯಕ ವಿದ್ಯಾ ಟ್ರಸ್ಟ್‌ನ ಶ್ರೀಗಿರಿ ನಿಲಯದ `ಪರಿವರ್ತನಾ ಮಂದಿರ' ಶಾಲೆ ಬುದ್ಧಿಮಾಂದ್ಯ ಮಕ್ಕಳಿಗೆ ಚೈತನ್ಯ ತುಂಬಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.ಮಂದಬುದ್ಧಿ ಮಕ್ಕಳ ಚೇಷ್ಟೆಗಳು ಪಾಲಕರಿಗೆ ತಲೆನೋವಾಗಿ ಬುದ್ಧಿಮಾಂದ್ಯ ಮಕ್ಕಳನ್ನು ಭಾರ ಎಂದು ತಿಳಿದಿರುತ್ತಾರೆ.

ಆ ಮಕ್ಕಳ ಬಾಳಲ್ಲಿ ಕತ್ತಲೆ ಆವರಿಸಿರುತ್ತದೆ. ಇವರ ಬದುಕು ನೋಡುತ್ತಾ, ಜೀವನ ಸಾಗಿಸುವ ತಂದೆ ತಾಯಿಗಳು ಆಂತರ್ಯದಲ್ಲಿ ಕೊರಗುತ್ತಾರೆ. ಮಕ್ಕಳು ದೈವೀ ಸ್ವರೂಪಿಯಾಗಿದ್ದು, ಆ ದೇವರನ್ನು ಇವರಲ್ಲಿ ಕಂಡು ಬುದ್ಧಿಮಾಂದ್ಯ ಮಕ್ಕಳಿಗಾಗಿ ಶಾಲೆ ಪ್ರಾರಂಭಿಸಿ ವಿಶೇಷ ತರಬೇತಿ ನೀಡಿ, ಅವರನ್ನು ಪರಿವರ್ತಿಸುವ ಕಾರ್ಯದಲ್ಲಿ ವಿಶಿಷ್ಟ ಹೆಜ್ಜೆ ಇಟ್ಟು ಸೇವೆಯಲ್ಲಿ ನಿರತರಾಗಿರುವವರು ನಿವೃತ್ತ ಅಬಕಾರಿ ಉಪ ಅಧೀಕ್ಷಕ ಶ್ರೀಮಂತ ರೇವೂರ.ಸೌಲಭ್ಯ: ಶಾಲೆಗೆ ದಾಖಲಾಗಲು ತಿಂಗಳಿಗೆ 200 ರೂಪಾಯಿ ಮಾತ್ರ ಶುಲ್ಕ ಇದೆ. 35ಕ್ಕೂ ಹೆಚ್ಚು ಬುದ್ಧಿಮಾಂದ್ಯ ಮಕ್ಕಳಿರುವ ಇಲ್ಲಿ ಸುಸಜ್ಜಿತವಾದ ಕಟ್ಟಡ, ಅಡುಗೆ ಕೋಣೆ, ಕುಡಿಯಲು ಶುದ್ಧೀಕರಿಸಿದ ನೀರು, ಶೌಚಾಲಯ, ಆಟಕ್ಕಾಗಿ ವಿವಿಧ ಸಾಮಾಗ್ರಿಗಳು, ಮಕ್ಕಳನ್ನು ಕರೆ ತರಲು ವಾಹನ ವ್ಯವಸ್ಥೆ ಇದೆ. ಮಕ್ಕಳಿಗೆ ಪ್ರತಿದಿನ ಸಂಜೆ ಟೀ, ಬಿಸ್ಕತ್ ಕೊಡಲಾಗುವುದು. ಮಕ್ಕಳ ಚಿಕಿತ್ಸೆಗಾಗಿ ವೈದ್ಯರು ಭೇಟಿ ನೀಡುತ್ತಿರುತ್ತಾರೆ.ಶಾಲೆಯಲ್ಲಿ ನೋಂದಣಿಯಾದ 41 ಮಕ್ಕಳಿಗೆ ವೈದ್ಯಕೀಯ ಗುರುತಿನ ಚೀಟಿ ಮಾಡಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದ ಮಕ್ಕಳಿಗೆ ಮಾಸಾಶನ ಸೌಲಭ್ಯ, 17 ಮಕ್ಕಳಿಗೆ ರೇಲ್ವೆ ಪಾಸ್ ಮಂಜೂರು ಮಾಡಿಸಲಾಗಿದೆ. 

ತರಬೇತಿ: ಶಾಲೆಯಲ್ಲಿ ಒಟ್ಟು 13ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, 5ಜನ ಪರಿಣತ ಶಿಕ್ಷಕರು ಇದ್ದಾರೆ. ಮಕ್ಕಳ ಬುದ್ಧಿಮಟ್ಟಕ್ಕೆ ತಕ್ಕಂತೆ ಭೌದ್ಧಿಕ ಹಾಗೂ ನಡವಳಿಕೆ ತರಬೇತಿ ನೀಡಲಾಗುತ್ತದೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪೂರ್ವ ಉದ್ಯೋಗಿಕ, ಉದ್ಯೋಗಿಕ ಈ ನಾಲ್ಕು ಹಂತಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಪ್ರಾರ್ಥನೆ, ಯೋಗಾಸನ, ಕೌಶಲ, ಸ್ವ-ಸಹಾಯ ಗುಂಪು, ಬರವಣಿಗೆ, ಚಿತ್ರಕಲೆ, ಆಟ ಇವು ತರಬೇತಿ ನೀಡುವ ವಿಧಾನಗಳಾಗಿವೆ.ಒಂದು ಕಡೆ ಕೂಡಲಾರದ ಅವರಿಗೆ ವಿಶೇಷ ತರಬೇತಿ, ಮಾರ್ಗದರ್ಶನ ನೀಡಿ ಅವರನ್ನು ಹಿಡಿತಗೊಳಿಸುವುದು. ದೊಡ್ಡ ಮಕ್ಕಳಿಗೆ ಕ್ಯಾಂಡಲ್ ಮತ್ತು ಪೇಪರ್ ಬ್ಯಾಗ್ಸ್ ತಯಾರಿಸುವಂತಹ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಲಾಗುತ್ತಿದೆ ಎಂದು ಶ್ರೀಮಂತ ರೇವೂರ ತಿಳಿಸಿದರು.

“ನನ್ನ ಮಗ ಶಂಕರರೆಡ್ಡಿ 6ವರ್ಷದವನಿದ್ದಾನೆ, ಅವನ ಅಂಗಾಂಗಗಳು ಎಲ್ಲವೂ ಚನ್ನಾಗಿದೆ. ಆದರೆ ವಿಪರೀತ ಗಲಾಟೆ ಮಾಡುತ್ತಾನೆ. ಯಾರ ಹತೋಟಿಗೂ ಸಿಗುವುದಿಲ್ಲ.

ಹೊರಗಡೆ ಹೋದರೆ ಮನೆಗೆ ಬರುತ್ತಿರಲಿಲ್ಲ. ಅವನ ಕಾಯಿಲೆ ಬಗ್ಗೆ ಎಲ್ಲ ಕಡೆ ತೋರಿಸಿ ಸುಸ್ತಾಗಿದ್ದೆವು. ಹುಬ್ಬಳ್ಳಿಯಲ್ಲಿ ವರ್ಷಕ್ಕೆ 40 ಸಾವಿರ ಖರ್ಚು ಮಾಡಿ ಅಲ್ಲಿಯೂ ಬಿಟ್ಟಿದ್ದೆವು. ಯಾವುದೇ ಪ್ರಯೋಜನ ಆಗಿರಲಿಲ್ಲ. ಮೂಲತಃ ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಮುನ್ನಾಖೇಳಿ ಗ್ರಾಮ ನಮ್ಮದು. ನಾನು ಎರಡು ವರ್ಷದ ಹಿಂದೆ ಪತ್ರಿಕಾ ವರದಿಯಲ್ಲಿ `ಪರಿವರ್ತನಾ ಮಂದಿರ'ದ ಉದ್ಘಾಟನೆ ವಿಷಯ ತಿಳಿದು ಮಗನ ಸಲುವಾಗಿ ಬಾಡಿಗೆ ಮನೆ ಮಾಡಿಕೊಂಡು ಇದೀಗ ಇಲ್ಲಿಯೇ ಇದ್ದೇವೆ. ಈ ಶಾಲೆಯ ವಾತಾವರಣ, ಇಲ್ಲಿನ ವಿಶೇಷ ತರಬೇತಿ ನನ್ನ ಮಗನ ಬದಲಾವಣೆಗೆ ಕಾರಣವಾಗಿದೆ” ಎಂದು ಕಲ್ಯಾಣರಾವ ವಡವಟ್ಟಿ ತಿಳಿಸುತ್ತಾರೆ.

“

ನನ್ನ ಮಗಳು ಆಯೇಷಾ ಸಿದ್ಧಿಕಾ ಬುದ್ಧಿಮಾಂದ್ಯಳಾಗಿದ್ದು, ಅವಳನ್ನು ಈ ತರಬೇತಿ ಶಾಲೆಗೆ ಸೇರಿಸಿ ಎರಡು ವರ್ಷವಾಯಿತು. ಅವಳು ಎಲ್ಲರ ಜೊತೆ ಬೆರೆತು ಸಂತಸದಿಂದ ಆಟದಲ್ಲಿ ಭಾಗಿಯಾಗುವುದನ್ನು ನಾವು ಕಾಣುತ್ತಿದ್ದೇವೆ. ಅವಳಲ್ಲಿ ಪರಿವರ್ತನೆಯ ಲಕ್ಷಣಗಳು ಗೋಚರಿಸುತ್ತಿವೆ” ಎಂದು ಮಗಳ ಮೇಲೆ ಅಪಾರ ಪ್ರೀತಿ ಇಟ್ಟಿರುವ ಗುಲ್ಬರ್ಗದ ಶೇಖ್ ವಯೀದ್ ತಮ್ಮ ಅಭಿಪ್ರಾಯ ಹಂಚಿಕೊಂಡರು.“ಬುದ್ಧಿಮಾಂದ್ಯತೆ ಇರುವ 6ವರ್ಷದ ನನ್ನ ಮಗನನ್ನು ಬೆಂಗಳೂರಿನಂತಹ ದೂರದ ಊರುಗಳಿಗೆ ಚಿಕಿತ್ಸೆಗಾಗಿ ಬಿಟ್ಟು ಬರಬೇಕಾಗಿತ್ತು. ನಮ್ಮ ಮಗನ ಬಗ್ಗೆಯೇ ಚಿಂತೆ ಮಾಡುವ ಪರಿಸ್ಥತಿ ಇತ್ತು. ಗುಲ್ಬರ್ಗದಲ್ಲಿಯೇ ಬುದ್ಧಿಮಾಂದ್ಯರಿಗೆ ವಿಶೇಷ ತರಬೇತಿ ನೀಡುವ ಶಾಲೆ ಇರುವುದು ಬುದ್ಧಿಮಾಂದ್ಯ ಮಕ್ಕಳಿಗೆ ಹಾಗೂ ಪಾಲಕರಿಗೆ ಅನುಕೂಲವಾಗಿದೆ” ಎನ್ನುತ್ತಾರೆ ಜೇವರ್ಗಿ ತಾಲ್ಲೂಕು ರದ್ದೇವಾಡಿಯ ಅಣ್ಣಾರಾವ ಪಾಟೀಲ.

ಪ್ರತಿಕ್ರಿಯಿಸಿ (+)