ಸೋಮವಾರ, ಡಿಸೆಂಬರ್ 16, 2019
17 °C

ಹೋರಾಟ ಯಶಸ್ವಿ: ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲೆಯ ರಾಜಶ್ರೀ ಸಿಮೆಂಟ್ ಕಾರ್ಖಾನೆ ಸೇರಿ ವಾಸವದತ್ತಾ ಸಿಮೆಂಟ್. ಚೆಟ್ಟಿನಾಡ್ ಸಿಮೆಂಟ್ ಹಾಗೂ ಕೊಪ್ಪಳ ಜಿಲ್ಲೆಯ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ ನೌಕರರಿಗೆ ಅನ್ವಯವಾಗುವಂತೆ ಕೇಂದ್ರ ಸರ್ಕಾರವು `ಸಿಮೆಂಟ್ ವೇತನ ಮಂಡಳಿ ಜಾರಿ'ಗೆ ನಿರ್ದೇಶನ ನೀಡಿದ್ದು, ಶ್ರಮಜೀವಿಗಳ ವೇದಿಕೆಯು ಗುತ್ತಿಗೆ ನೌಕರರ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಒಂದೂವರೆ ವರ್ಷದಿಂದ ಮುಂದುವರಿಸಿದ್ದ ಹೋರಾಟಕ್ಕೆ ಈಗ ಯಶಸ್ಸು ಸಿಕ್ಕಂತಾಗಿದೆ ಎಂದು ವೇದಿಕೆಯ ಅಧ್ಯಕ್ಷ ಚಂದ್ರಶೇಖರ್ ಹಿರೇಮಠ ಬುಧವಾರ ಇಲ್ಲಿ ವಿವರಿಸಿದರು.ಈ ನೂತನ ಆದೇಶದಿಂದ ಜಿಲ್ಲೆಯ 10 ಸಾವಿರ ನೌಕರರು ಹೆಚ್ಚಿನ ವೇತನ ಪಡೆಯಲಿದ್ದು, ಸದ್ಯದ 5 ಸಾವಿರ ಹಾಗೂ 8 ಸಾವಿರ ಸಂಬಳ ಪಡೆಯುತ್ತಿದ್ದ ನೌಕರರು ಇನ್ನು ಮುಂದೆ ರೂ 10 ಸಾವಿರ ಹಾಗೂ 15 ಸಾವಿರ ವೇತನ ಪಡೆಯಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಜಿಲ್ಲೆಯ ಉಪ ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದರೂ ರಾಜಶ್ರೀ ಸಿಮೆಂಟ್ ಕಾರ್ಖಾನೆಯ ಒತ್ತಡಕ್ಕೆ ಮಣಿದು ಬೇಜವಾಬ್ದಾರಿ ವರ್ತನೆ ತೋರಿಸಿದ್ದರು. ಹೀಗಾಗಿ ಪ್ರಾದೇಶಿಕ ಆಯುಕ್ತರು ಹಾಗೂ ಸೇಡಂ ಉಪ ಆಯುಕ್ತರ ಮೂಲಕ ಮನವಿ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಸಮಗ್ರ ವರದಿಯೊಂದನ್ನು ಸಿದ್ಧಗೊಳಿಸಿ ವೇತನ ಮಂಡಳಿಗೆ ಗುತ್ತಿಗೆ ನೌಕರರು ಅರ್ಹರಾಗಿದ್ದಾರೆ ಎಂದು ಆಯುಕ್ತರು ಶಿಫಾರಸು ನೀಡಿದರು.ವೇತನ ಮಂಡಳಿ ಜಾರಿಗೆ ಒತ್ತಾಯಿಸಿ ಕಾರ್ಮಿಕ ಆಯುಕ್ತರಾಗಿದ್ದ ಹರ್ಷ ಗುಪ್ತ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಇದರ ಪ್ರತಿಫಲವಾಗಿ ರಾಷ್ಟ್ರಮಟ್ಟದಲ್ಲಿ ಕೇಂದ್ರದ ಮುಖ್ಯ ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಷ್ಟ್ರಮಟ್ಟದ ಕಾರ್ಮಿಕ ಸಂಘಗಳು ಹಾಗೂ ಸಿಮೆಂಟ್ ಉತ್ಪಾದಕರ ನಡುವೆ ಒಪ್ಪಂದ ಏರ್ಪಟ್ಟಿತು. ನಂತರ ವೇತನ ಮಂಡಳಿ ಜಾರಿಗೆ ಒಪ್ಪಿಗೆ ಸಿಕ್ಕಿತು ಎಂದು ತಿಳಿಸಿದರು.ಸಚಿವ ಖರ್ಗೆ ಮಧ್ಯ ಪ್ರವೇಶಿಸಲಿ: ಕೇಂದ್ರ ಸರ್ಕಾರದ ಮುಖ್ಯ ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಕೈಗೊಳ್ಳಲಾದ ಒಪ್ಪಂದದಂತೆ ಗುಲ್ಬರ್ಗ ಜಿಲ್ಲೆಯ ಸಿಮೆಂಟ್ ಕಾರ್ಖಾನೆ ಕಂಪೆನಿಗಳ ಕಾರ್ಮಿಕರಿಗೆ ವೇತನ ಮಂಡಳಿಯನ್ನು ಅನ್ವಯಿಸಬೇಕು. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯೆ ಪ್ರವೇಶಿಸಿ ಈ ಬಗ್ಗೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಕೋರಿದರು.ತೇಲ್ಕೂರ್ ವಿರುದ್ಧ ಕ್ರಮಕ್ಕೆ ಒತ್ತಾಯ: ಗುತ್ತಿಗೆ ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ್, ರಾಜಶ್ರೀ ಸಿಮೆಂಟ್ ಕಂಪೆನಿ ಪರ ವಹಿಸಿಕೊಂಡು ಸಾಕಷ್ಟು ಒತ್ತಡ ಹೇರಿದರು. ಕಂಪೆನಿಯೊಂದಿಗೆ ಸಂಘರ್ಷಕ್ಕಿಳಿಯದಂತೆ ಸ್ನೇಹಿತರಿಂದ ಒತ್ತಡ ಹಾಕಿದ್ದರು. ಪ್ರಮಾಣಿಕ ಹೋರಾಟ ಮುಂದುವರಿಸಿ ಇದರಲ್ಲಿ ಇದೀಗ ಯಶಸ್ಸು ಕಂಡಿದ್ದೇನೆ. ರಾಜಕುಮಾರ ಪಾಟೀಲ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ವರಿಷ್ಠರಿಗೆ ದೂರು ಸಲ್ಲಿಸಿದ್ದೇನೆ ಎಂದರು.ರಾಜಕೀಯದಿಂದ ದೂರ: ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಯಾವ ಪಕ್ಷಕ್ಕೂ ಅರ್ಜಿ ಸಲ್ಲಿಸುವುದಿಲ್ಲ. ನಾಮಪತ್ರ ಅಂತಿಮಗೊಂಡ ನಂತರ ಪರೋಕ್ಷವಾಗಿ ಸೂಕ್ತ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಯೋಚಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)