ಮಂಗಳವಾರ, ನವೆಂಬರ್ 19, 2019
26 °C

ಬಿ.ಇಡಿ ಶುಲ್ಕ ಮರುಪಾವತಿ ಗೊಂದಲ

Published:
Updated:

ಗುಲ್ಬರ್ಗ: ಶೈಕ್ಷಣಿಕ ಕೋರ್ಸ್‌ಗಳನ್ನು ಮುಗಿಸಿದ ವಿದ್ಯಾರ್ಥಿಗಳಿಗೆ  ಶುಲ್ಕ ಮರುಪಾವತಿ ಮಾಡುವ ಸುದ್ದಿ ಎಲ್ಲ ಕಡೆ ಹಬ್ಬಿ ಪದವಿಧರರನ್ನು ಗೊಂದಲಕ್ಕೀಡು ಮಾಡಿದೆ.ದಾಖಲಾತಿ ಶುಲ್ಕ ರೂ 10,000 ಮರಳಿ ಬರುವುದೆಂದರೆ ಯಾರು ತಾನೆ ಸುಮ್ಮನಿರುತ್ತಾರೆ? ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 3ಎ, ಮತ್ತು 3ಬಿ ಅಭ್ಯರ್ಥಿಗಳು ನಾಮುಂದೆ ತಾಮುಂದೆ ಎಂದು ಬಿಸಿಲಲ್ಲಿ ಪರದಾಡುತ್ತಿದ್ದಾರೆ. ಅರ್ಜಿಗಳನ್ನು ಕೈಯಲ್ಲಿ ಹಿಡಿದು  ಕಾಲೇಜು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿಗೆ  ಒಂದೇ ಸಮ ಅಲೆದಾಡುತ್ತಿದ್ದಾರೆ. ಆದರೆ ಇವರಿಗೆ ಸ್ಪಷ್ಟವಾದ ಮಾಹಿತಿ ಮಾತ್ರ ಲಭ್ಯವಿಲ್ಲ.ಸುಮಾರು 8 ದಿನಗಳಿಂದ ಈವರೆಗೆ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ವಿಜಾಪುರ, ಬಳ್ಳಾರಿ, ರಾಯಚೂರು, ಬೀದರ್, ಯಾದಗಿರಿ, ಹಾಗೂ ಗುಲ್ಬರ್ಗದಿಂದ ಜನಬಂದು ಒಂದೆ ಸಮನೇ ಮುಗಿಬಿದ್ದಿದ್ದಾರೆ. ಅರ್ಜಿಗಳನ್ನು ತೆಗೆದುಕೊಳ್ಳದೇ ಹೋದರೆ ಗಲಾಟೆಯಾದೀತು ಎಂದು ಅಧಿಕಾರಿಗಳು ಮೊದಮೊದಲು ಕೆಲವೊಂದು ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಮತ್ತೆ ಬಂದ ಅಭ್ಯರ್ಥಿಗಳು ಅವರ ಅರ್ಜಿ ತೆಗೆದುಕೊಂಡಿದ್ದೀರಿ ನಮ್ಮದು ಹೇಗೆ ತೆಗೆದು ಕೊಳ್ಳುವುದಿಲ್ಲ ಎಂದು ಮಾತಿನ ಚಕಮಕಿ ನಡೆದಾಗ ಕೊನೆಗೆ ಪೊಲೀಸ್‌ರನ್ನು ಕರೆಸಿ ಪರಿಸ್ಥಿತಿ ನಿಯಂತ್ರಿಸಬೇಕಾಗಿ ಬಂದ ಘಟನೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ.2012- 13 ನೇ ಸಾಲಿಗಿಂತ ಹಿಂದೆ ಶೈಕ್ಷಣಿಕ ಕೋರ್ಸ್‌ಗಳನ್ನು ಮುಗಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಆಗಲೇ ಅರ್ಜಿ ಸಲ್ಲಿಸಿದ್ದು, ಅಂಥವರ ಅರ್ಜಿ ಆಯ್ಕೆಯಾಗಿದ್ದರೂ ದುಡ್ಡಿನ ಅಭಾವ ಅಥವಾ ಇನ್ನಾವುದೋ ಕಾರಣದಿಂದ ಇಲಾಖೆಯಿಂದ ಮರುಪಾವತಿ ಆಗಿರಲಿಲ್ಲ. ಅಂಥ ಅಭ್ಯರ್ಥಿಗಳು ತಾವು ಈ ಹಿಂದೆ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಪ್ರಾಚಾರ್ಯರನ್ನು ಭೇಟಿಯಾಗಿ ಫೆ.15ರೊಳಗೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ತೆರೆದಿರುವ ಖಾತೆ ಸಂಖ್ಯೆ ಹಾಗೂ ಇತರೆ ಅಗತ್ಯ ವಿವರಗಳನ್ನು ಸಲ್ಲಿಸುವಂತೆ  ಸೂಚಿಸಿದೆ.ಒಂದು ವೇಳೆ ಈ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸದಿದ್ದಲ್ಲಿ ಅವರ ಕ್ಲೈಮುಗಳು (ಕೋರಿಕೆ) ಯಾವುದೂ ಇರುವುದಿಲ್ಲ ಎಂದು ಪರಿಗಣಿಸಲಾಗುವುದು ಎಂಬುದಾಗಿ. ಈ ಅರ್ಜಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿಯಿಂದ ಆನಲೈನ್ ಮೂಲಕ ಹೊರಡಿಸಿಲಾಗಿದೆ ಎಂದು ತಿಳಿದು ಬಂದಿದೆ.ಆದರೆ ಇದು ಕೇವಲ 2007-08ರಿಂದ 2011-12ರ ವರೆಗೆ ಅವರು ಕಲಿಯುತ್ತಿರುವಾಗಲೇ ಸಲ್ಲಿಸಿದ ಅರ್ಜಿಗಳಲ್ಲಿ ಕೆಲವು ಹಾಗೆ ತಡೆ ಹಿಡಿದಿಡಲಾಗಿತ್ತು. ಹಿಂದಿನ ಅಭ್ಯರ್ಥಿಗಳ ಶುಲ್ಕ ಮರು ಪಾವತಿ ಮಾಡಲು, ಬಾಕಿ ಉಳಿದ ಅರ್ಜಿಗಳನ್ನು ಕಳುಹಿಸುವಂತೆ ಆಯಾ ಕಾಲೇಜಿನ ಪ್ರಾಚಾರ್ಯರಿಗೆ ತಿಳಿಸಲಾಗಿತ್ತು. ಅದನ್ನೆ ತಪ್ಪಾಗಿ ಅರ್ಥೈಸಿಕೊಂಡ ಅಭ್ಯರ್ಥಿಗಳು ಮತ್ತೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಈಗ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶುಲ್ಕ ಮರು ಪಾವತಿ ಯಾಗುವುದಿಲ್ಲ. ಈಗ ಸಲ್ಲಿಸಿದ ಅರ್ಜಿಗಳನ್ನು ಮತ್ತೆ ಇಷ್ಟೊಂದು ಅರ್ಜಿಗಳು ಬಂದಿವೆ ಎಂದು ಸರ್ಕಾರದ ಗಮನಕ್ಕೆ ತರಬಹುದಷ್ಟೆ ಎಂದು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.ಇದು ಎಲ್ಲ ಜಿಲ್ಲೆಗಳಲ್ಲಿ ಕಂಡು ಬರುತ್ತಿದೆ. ಅಭ್ಯರ್ಥಿಗಳು ಮೊದಲು ಅಧಿಕಾರಿಗಳ ಹತ್ತಿರ ಬಂದಾಗಲೇ ಅವರಿಗೆ ತಿಳಿಸಿದ್ದರೆ ಇಷ್ಟೊಂದು ಅವಾಂತರ ಆಗುತ್ತಿರಲಿಲ್ಲ. ಮೊದಲಿಗೆ ಅವರಿಗೂ ಸ್ಪಷ್ಟಮಾಹಿತಿ ಇರದೇ ಇರುವುದರಿಂದ ಅರ್ಜಿಗಳನ್ನು ಪಡೆದಿದ್ದಾರೆ. ಮಾಹಿತಿ ಬಂದ ಮೇಲೆ ಹೇಳಿದರೆ ಅಭ್ಯರ್ಥಿಗಳು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ ಎಂಬುದು ತಿಳಿದು ಬಂದಿದೆ. ಅದಕ್ಕಾಗಿ ಅವರು ಅರ್ಜಿ ಕೊಡುತ್ತಲೇ ಇದ್ದಾರೆ ಇವರು ತೆಗೆದುಕೊಳ್ಳುತ್ತಲೇ ಇದ್ದಾರೆ.

ಅರ್ಜಿ ಕರೆದಿಲ್ಲ: ರಾಠೋಡ್

ಹಿಂದಿನ ವಿದ್ಯಾರ್ಥಿಗಳು ಓದುವಾಗ ಶುಲ್ಕ ವಿನಾಯಿತಿಗೆ ಅರ್ಜಿ ಹಾಕಿದ್ದಲ್ಲಿ, ಆ ಶುಲ್ಕ ಮಂಜೂರಾಗಿ ಪಾವತಿಯಾಗದೇ ಇದ್ದಲ್ಲಿ, ಅಂಥವರ ಮಾಹಿತಿ ಸಲ್ಲಿಸಲು ರಾಜ್ಯದ ಎಲ್ಲ ಕಾಲೇಜಿನ ಪ್ರಾಚಾರ್ಯರಿಗೆ ಪತ್ರ ಬರೆಯಲಾಗಿತ್ತು.ಆದರೆ ಹಳೆಯ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವಂತೆ ಈ ಕಚೇರಿಯಿಂದ ಯಾವುದೇ ಅರ್ಜಿ ಕರೆದಿಲ್ಲ. ವಿದ್ಯಾರ್ಥಿಗಳು ತಪ್ಪು ಗ್ರಹಿಕೆಯಿಂದ ಅರ್ಜಿ ಸಲ್ಲಿಸುತ್ತಿದ್ದು ಇದರ ಅವಶ್ಯಕತೆ ಇರುವುದಿಲ್ಲ.

-ಕೆ.ಟಿ. ರಾಠೋಡ್, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಪ್ರತಿಕ್ರಿಯಿಸಿ (+)