ಸೋಮವಾರ, ನವೆಂಬರ್ 18, 2019
29 °C

`ಮೌಲ್ಯ ಹೆಚ್ಚಿಸಿದ ವೃತ್ತಿ ವಚನಕಾರರು'

Published:
Updated:

ಗುಲ್ಬರ್ಗ: ವೃತ್ತಿ ಮೂಲದಿಂದ ಬಂದ ದಲಿತ ಹಾಗೂ ತಳವರ್ಗದ ವಚನಕಾರರು ವೃತ್ತಿಗಳ ಮೌಲ್ಯ ಹೆಚ್ಚಿಸಿದರು ಎಂದು ಕರ್ನಾಟಕ ರಾಜ್ಯ ಸಂಸ್ಕೃತಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಶ್ರೀ ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದಲ್ಲಿ ಗುರುವಾರ ನಡೆದ `ಶ್ರೀ ಹಡಪದ ಶರಣರು-ಶರಣೆಯರು ಇತಿವೃತ್ತ ಹಾಗೂ ಅವರ ಸಾಹಿತ್ಯ' ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹೆಚ್ಚಾಗಿ ಬಸವಣ್ಣ ಅಥವಾ ಅಲ್ಲಂಪ್ರಭು ಕೇಂದ್ರಿತ ವಚನ ಅಧ್ಯಯನ ನಡೆಯುತ್ತಿತ್ತು. ಆದರೆ ಈಚೆಗೆ ನಡೆಯುತ್ತಿರುವ ದಲಿತ, ಹಿಂದುಳಿದ, ಕೆಳ ಎನಿಸಿಕೊಂಡ ಜಾತಿಗಳಿಂದ ಬಂದ ಇತರ ವಚನಕಾರರನ್ನು ಕೇಂದ್ರವಾಗಿರಿಸಿಕೊಂಡ ಅಧ್ಯಯನವು ಬಹುಮುಖ್ಯ. ವೃತ್ತಿಯಿಂದ ಬಂದ ಅವರು  ಬದುಕಿನ ಅಂತರಂಗದ `ಬೆಳಗು' ಮತ್ತು ಬಹಿರಂಗದ `ಬೆಳಕ'ನ್ನು ಹೆಚ್ಚಿಸಿದರು ಎಂದರು.ವಚನ ಚಳವಳಿ ವಿಶ್ವದಲ್ಲೇ ವಿಶಿಷ್ಟ. ಆ ಕಾಲದಲ್ಲೇ ನಡೆದ ಸಾಮಾಜಿಕ ಸುಧಾರಣೆಯ ಪ್ರಯತ್ನ ಎಂದರು. ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು. ಸುಕ್ಷೇತ್ರ ತಂಗಡಗಿ ಶ್ರೀ ಶರಣ ಹಡಪದ ಬಸವಪ್ರಿಯ ಅನ್ನದಾನ ಭಾರತಿ ಶರಣರು, ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥೆ ಪ್ರೊ.ನಾಗಾಬಾಯಿ ಬಿ. ಬುಳ್ಳಾ, ಅಧ್ಯಯನ ಪೀಠದ ನಿರ್ದೇಶಕ ಪ್ರೊ.ವಿ.ಜಿ.ಪೂಜಾರ ಇದ್ದರು. ಡಾ.ಎಚ್.ಟಿ ಪೋತೆ ಕಾರ್ಯಕ್ರಮ ನಿರೂಪಿಸಿದರು.ಗೋಷ್ಠಿ: ಬಳಿಕ ನಡೆದ ಮೊದಲ ಗೋಷ್ಠಿಯಲ್ಲಿ ಡಾ.ವಿಜಯಕುಮಾರ್ ಕರಿಕಲ್ `ಶರಣ ಹಡಪದ ರೇಚಣ್ಣನವರ ಇತಿವೃತ್ತ ಹಾಗೂ ಅವರ ವಚನಗಳಲ್ಲಿ ಅನುಭಾವ' ಡಾ.ಎಚ್.ಟಿ.ಪೋತೆ `ಶರಣ ಹಡಪದ ಅಪ್ಪಣ್ಣ ಹಾಗೂ ಶರಣೆ ಲಿಂಗಮ್ಮನವರ ವಚನಗಳಲ್ಲಿ ಜೀವನಮೌಲ್ಯಗಳು', `ಹಡಪದ ಶರಣರು-ಶರಣರ ವಚನಗಳಲ್ಲಿ ವೈಚಾರಿಕತೆ' ಡಾ.ಬಸವರಾಜ ಸಬರದ ಮಾತನಾಡಿದರು.ಎರಡನೇ ಗೋಷ್ಠಿಯಲ್ಲಿ ಡಾ.ಚೆನ್ನಬಸವಯ್ಯ ಹಿರೇಮಠ `ಶರಣ ಹಡಪದ ಅಪ್ಪಣ್ಣ-ಶರಣೆ ಲಿಂಗಮ್ಮನವರ ಇತಿವೃತ್ತ ಮತ್ತು ಸ್ಮಾರಕಗಳು', ಡಾ.ಪ್ರಶಾಂತ ಜಿ. ನಾಯಕ `ಕನ್ನಡಿ ಕಾಯಕದ ಅಮ್ಮಿದೇವ ಹಾಗೂ ರೇವಮ್ಮನವರ ವಚನಗಳಲ್ಲಿ ಅನುಭಾವ' ಹಾಗೂ ಡಾ.ಎಸ್.ಎಂ.ಹಿರೇಮಠ `ಹಡಪದ ಶರಣರ -ಶರಣೆಯರ ವಚನಗಳಲ್ಲಿ ಕಾವ್ಯಾಂಶಗಳು' ಕುರಿತು ಮಾತನಾಡಿದರು.

ಪ್ರತಿಕ್ರಿಯಿಸಿ (+)