ಬುಧವಾರ, ನವೆಂಬರ್ 13, 2019
18 °C

ಚಿಂತೆಗೀಡು ಮಾಡಿದ ಮತದಾರರ ವಲಸೆ!

Published:
Updated:

ಚಿಂಚೋಳಿ: ರಾಜ್ಯದಲ್ಲಿ ಚುನಾವಣಾ ಆಯೋಗ ಮತ್ತು ಸ್ಥಳೀಯ ಜಿಲ್ಲಾ ಆಡಳಿತದ ನೆರವಿನೊಂದಿಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಹಿಂದಿಗಿಂತಲೂ ಈ ಬಾರಿ ಹೆಚ್ಚಾಗಿ ಶ್ರಮಿಸಲಾಗುತ್ತಿದೆ.ಶೇ.100ರಷ್ಟು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಜತೆಗೆ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಂದೇಶ ನೀಡುತ್ತ ವಿವಿಧ ಕಾರ್ಯಕ್ರಮಗಳ ಹಮ್ಮಿಕೊಂಡು ಮತದಾರರಲ್ಲಿ ಅರಿವು ಮೂಡಿಸುತ್ತಿರುವ ಬೆನ್ನಲ್ಲೆ ಚಿಂಚೋಳಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಬರುವ ತಾಂಡಾಗಳಿಂದ ಮತದಾರರು ಈಗಾಗಲೇ ಗುಳೆ ಹೋಗಿರುವುದು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.ಚಿಂಚೋಳಿ ಮೀಸಲು ಕ್ಷೇತ್ರದಲ್ಲಿ ಹೆಚ್ಚಾಗಿರುವ ತಾಂಡಾಗಳಲ್ಲಿನ ಶೇ.30ರಿಂದ 60ರಷ್ಟು ಮತದಾರರು ಮುಂಬಯಿ ಸೇರಿದಂತೆ ವಿವಿಧ ಮಹಾ ನಗರಗಳಿಗೆ ವಲಸೆ ಹೋಗಿರುವುದು ರಾಜಕೀಯ ಪಕ್ಷಗಳನ್ನು ಚಿಂತೆಗೀಡು ಮಾಡಿದೆ.ತಾಲ್ಲೂಕಿನ ಐನಾಪುರ ಕಂದಾಯ ಹೋಬಳಿ ವಲಯದ ಚನ್ನೂರು, ಭೂಂಯಾರ್, ಖಾನಾಪುರ, ಯಲ್ಮಾಮಡಿ, ಕಾನೂನಾಯಕ, ಹೇಮ್ಲಾನಾಯಕ, ಫತ್ತು ನಾಯಕ್, ಜಂಗ್ಲಿಪೀರ, ಗೊಂದಲ ಶೇಠ, ಗೌಡಪಗುಡಿ, ಭಿಕ್ಕು ನಾಯಕ್, ಪಾಲ್ತ್ಯಾ ತಾಂಡಾ, ಸೂರುನಾಯಕ್, ಸಜ್ಜನಕೊಳ್ಳ, ಗುಂಡು ನಾಯಕ್, ಸಕ್ಕು ನಾಯಕ್ ಸಲಗರ ಕಾಲೋನಿ, ಚೌಕಿ ತಾಂಡಾ, ಬಾವನಗುಡಿ ಹಾಗೂ ವೆಂಕಟಾಪುರ, ಚಾಪ್ಲನಾಯಕ ತಾಂಡಾಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ದುಡಿಮೆಗಾಗಿ ಮುಂಬಯಿಗೆ ವಲಸೆ ಹೋಗಿರುವುದು ಕಂಡು ಬಂದಿದೆ.ಬಹುತೇಕ ತಾಂಡಾಗಳಲ್ಲಿ ಮಕ್ಕಳು, ವಯೋವೃದ್ಧರು ಮಾತ್ರ ಕಾಣುತ್ತಿದ್ದು ಐನಾಪುರ ಸುತ್ತಮುತ್ತಲಿನ ತಾಂಡಾಗಳಲ್ಲಿ ಶೇ. 50ರಿಂದ60ರಷ್ಟು ಮಂದಿ ವಲಸೆ ಹೋದರೆ, ಕೊಂಚಾವರಂ ಸುತ್ತಮುತ್ತಲಿನ ತಾಂಡಾಗಳಲ್ಲಿ ಶೇ.25ರಿಂದ 40ರಷ್ಟು ಮಂದಿ ವಲಸೆ ಹೋಗಿದ್ದಾರೆ.ಗುಳೆ ಹೋದ ಮತದಾರರನ್ನು ಗ್ರಾಮ ಲೇಖಪಾಲಕರ ಮೂಲಕ ಚುನಾವಣಾ ಆಯೋಗವೇ ಕರೆಸಿ ತಮ್ಮ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಬೇಕೆಂದು ಎಂದು ಜಂಗ್ಲಿಪೀರ ತಾಂಡಾದ ಮಾರುತಿ ರಾಠೋಡ್ ಒತ್ತಾಯಿಸಿದ್ದಾರೆ.ವಲಸೆಯ ಕಾರಣದಿಂದಲೇ ಚಿಂಚೋಳಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಬಾವನಗುಡಿ ತಾಂಡಾ ಶೇ. 28.33, ಚಿಂಚೋಳಿ (ಎಚ್) ಶೇ. 28.44, ಭೂಂಯಾರ (ಬಿ) ಶೇ. 29.45, ಜಮ್ಮನಕೊಳ್ಳ ಶೇ. 32, ಕಾನು ನಾಯಕ ತಾಂಡಾ ಶೇ. 34, ಸಂಜಯ ನಗರ ತಾಂಡಾ, ಲಚ್ಚು ನಾಯಕ ತಾಂಡಾ, ಗಾಂಧಿ ನಗರ ( ರುಮ್ಮನಗೂಡ) ತಾಂಡಾ, ಶೇ. 35, ಡೊಂಗ್ರು ನಾಯಕ, ಆಡಕಿ ಮೋಕ ತಾಂಡಾ ಶೇ. 36, ಚಂದನಕೇರಾದ ಮತಗಟ್ಟೆ 65ರಲ್ಲಿ ಶೇ. 38, ಸಾಸರಗಾಂವ್ ಶೇ. 38, ಅರಣಕಲ್ ಬಳಿ ಬುಗುಡಿ ತಾಂಡಾ ಶೇ. 38, ರಾಜಾಪುರ, ಶಿವರಾಮ ನಾಯಕ ತಾಂಡಾಗಳಲ್ಲಿ ಶೇ. 39ರಷ್ಟು ಅಂದರೆ ಶೇ. 40ಕ್ಕಿಂತ ಕಡಿಮೆ ಮತದಾನವಾಗಿರುವುದು ಸ್ವೀಪ್ ಕ್ರೀಯಾ ಯೋಜನೆಯೇ ತಿಳಿಸುತ್ತದೆ.ಜಿಲ್ಲೆಯ ವಾಡಿಯ 111ನೇ ಮತಗಟ್ಟೆಯಲ್ಲಿ ಶೇ. 7.45ರಷ್ಟು, ವಾಡಿಯ 99(ಎ) ಮತಗಟ್ಟೆಯಲ್ಲಿ 17.86, ಭಂಕೂರು40 (ಎ) ಮತಗಟ್ಟೆಯಲ್ಲಿ ಶೇ.20,ಸೇಡಂನ ಮತಗಟ್ಟೆ 83ರಲ್ಲಿ 21.85, ಆಜಾದಪುರ ಮತಗಟ್ಟೆ 158ರಲ್ಲಿ 17.57ರಷ್ಟು ಮತದಾನ ನಡೆದಿದ್ದನ್ನು ಚುನಾವಣೆಯ ದಾಖಲೆಗಳೇ ತಿಳಿಸುತ್ತವೆ.

ಪ್ರತಿಕ್ರಿಯಿಸಿ (+)