ಶುಕ್ರವಾರ, ನವೆಂಬರ್ 22, 2019
20 °C

ಅಪ್ಪುಗೌಡ ಬಿಜೆಪಿಗೆ ಸೇರ್ಪಡೆ

Published:
Updated:

ಗುಲ್ಬರ್ಗ: ಜೆಡಿಎಸ್ ಮುಖಂಡರಾಗಿದ್ದ ದತ್ತಾತ್ರೇಯ ಪಾಟೀಲ ರೇವೂರ (ಅಪ್ಪುಗೌಡ) ಹಾಗೂ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಐದು ಪಾಲಿಕೆ ಸದಸ್ಯರು ತಮ್ಮ ಬೆಂಬಲಿಗರೊಂದಿಗೆ ಶುಕ್ರವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.`ತಂದೆ ದಿ. ಚಂದ್ರಶೇಖರ್ ಪಾಟೀಲ ಬಿಜೆಪಿಯನ್ನು ಗುಲ್ಬರ್ಗದಲ್ಲಿ ಸಾಕಷ್ಟು ಬೆಳೆಸಿದ್ದಾರೆ. ಬಿಜೆಪಿಯಿಂದಲೇ ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅನಂತಕುಮಾರ, ಪ್ರಹ್ಲಾದ ಜೋಶಿ ಅವರು ಮತ್ತೆ ಬಿಜೆಪಿ ಬೆಳೆಸುವುದಕ್ಕೆ ಆಹ್ವಾನ ನೀಡಿ, ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದರು. ಅವರ ಆಸೆಯಂತೆ ನಾನು ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದೇನೆ' ಎಂದು ದತ್ತಾತ್ರೇಯ ಪಾಟೀಲ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಗೌರವವಿದೆ. ಆದರೆ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಜೆಡಿಎಸ್ ಮುಖಂಡರೆ ಏಳು ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿ ಸೋಲಿಸಿದರು. ಪಕ್ಷ ಬಿಡುವುದಕ್ಕೆ ಈ ಕಹಿ ಘಟನೆ ಕಾರಣ. ಅಲ್ಲದೆ, ತಂದೆಯ ಹಾದಿಯಲ್ಲಿ ನಡೆಯಬೇಕೆನ್ನುವ ಉದ್ದೇಶದಿಂದ ಮತ್ತೆ ಬಿಜೆಪಿಗೆ ಮರಳಿದ್ದೇನೆ ಎಂದರು.ಬಿಜೆಪಿ ಹಿರಿಯ ಮುಖಂಡರೊಂದಿಗೆ ಮುನಿಸಿಕೊಂಡಿರುವ ಶಶೀಲ್ ಜಿ. ನಮೋಶಿ ಅವರ ಬಗ್ಗೆಯೂ ನನಗೆ ಗೌರವವಿದೆ. ಬಿಜೆಪಿ ತೊರೆಯದಂತೆ ಈ ಮೂಲಕ ಅವರಿಗೆ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.ಬಿಜೆಪಿ ಮುಖಂಡ ವಿದ್ಯಾಸಾಗರ ಶಾಬಾದಿ ಮಾತನಾಡಿ, `ಬಿಜೆಪಿ ಅಧಿಕಾರಕ್ಕೆ ಬಂದರೆ ನಮೋಶಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಭರವಸೆ ನೀಡಿದ್ದಾರೆ. ದತ್ತಾತ್ರೇಯ ಪಾಟೀಲ ಅವರಿಗೆ ಟಿಕೆಟ್ ನೀಡುವ ಮೊದಲು ನಮೋಶಿ ಅವರೊಂದಿಗೆ ಸಮರ್ಪಕ ಮಾಹಿತಿಯನ್ನು ಹಿರಿಯರು ಒದಗಿಸಬೇಕಿತ್ತು. ಈ ಬಗ್ಗೆ ಕಾರ್ಯಕರ್ತರಲ್ಲೂ ಸಾಕಷ್ಟು ಗೊಂದಲವಿತ್ತು. ಇದೀಗ ನಮೋಶಿ ಅವರ ಮನ ಒಲಿಸುವ ಯತ್ನ ಮುಂದುವರಿದಿದೆ' ಎಂದರು.ಗುಲ್ಬರ್ಗ ಉತ್ತರ ಮತಕ್ಷೇತ್ರದ ಅಭ್ಯರ್ಥಿ ರಾಜಗೋಪಾಲ ರೆಡ್ಡಿ ಮಾತನಾಡಿ, `ದಿ. ಚಂದ್ರಶೇಖರ್ ಪಾಟೀಲ ರೇವೂರ ಅವರ ಗರಡಿಯಲ್ಲಿ ನಾವೆಲ್ಲ ರಾಜಕೀಯಕ್ಕೆ ಬಂದವರು. ಅವರ ಪುತ್ರ ಮತ್ತೆ ಬಿಜೆಪಿ ಬಂದಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ' ಎಂದರು.ಬಿಜೆಪಿಗೆ ಸೇರ್ಪಡೆಗೊಂಡ ವಿಜಯಕುಮಾರ ಸೆವಲಾನಿ ಮಾತನಾಡಿದರು.ಪಾಲಿಕೆ ಸದಸ್ಯರಾದ ವಿಶಾಲ ದರ್ಗಿ, ಶಿವಾನಂದ ಪಾಟೀಲ ಅಷ್ಟಗಿ, ಬಸವರಾಜ ನಾಶಿ, ಶಿವುಸ್ವಾಮಿ ಹಾಗೂ ಜಗದೇವಿ ಸೋಮಾ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಇದೇ ವೇಳೆ ದತ್ತಾತ್ರೇಯ ಪಾಟೀಲ ಹಾಗೂ ಪಾಲಿಕೆ ಸದಸ್ಯರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು.ಕೆ.ಬಿ. ಶಾಣಪ್ಪ, ಮುಕುಲ ದೇಶಪಾಂಡೆ, ಧಾರವಾಡಕರ್ ಬಿಜೆಪಿ ಚಿಹ್ನೆಯ ಶಾಲು ನೀಡಿ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)