ಭಾನುವಾರ, ನವೆಂಬರ್ 17, 2019
21 °C

ಬಿಜೆಪಿ-ಯಜಮಾನ ಇಲ್ಲದ ಮನೆ

Published:
Updated:

ಗುಲ್ಬರ್ಗ: ಬಿಜೆಪಿ ಈಗ ಯಜಮಾನ ಇಲ್ಲದ ಮನೆ. ಬಿ.ಎಸ್.ಯಡಿಯೂರಪ್ಪ ಬಳಿಕ ಇಬ್ಬರು ಮುಖ್ಯಮಂತ್ರಿ ಆದರೂ ಅಭಿವೃದ್ಧಿ ಕಾರ್ಯ ಸಾಧ್ಯವಾಗಿಲ್ಲ ಎಂದು ಚಿತ್ರನಟಿ, ಕರ್ನಾಟಕ ಜನತಾ ಪಕ್ಷ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶ್ರುತಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಅಧಿಕಾರಕ್ಕೆ ಬರುವ ಮೊದಲು ಜೆಡಿಎಸ್ `ವಚನ ಭ್ರಷ್ಟತೆ' ಕಾರಣ ಬಿಎಸ್‌ವೈ ಮೇಲೆ ಅನುಕಂಪ ಇತ್ತು. ಆದರೆ ಆ ಬಳಿಕ ಅವರು ಮಾಡಿದ ಅಭಿವೃದ್ಧಿ ಕಾರ್ಯವು ಕೆಜೆಪಿಗೆ ಶ್ರೀರಕ್ಷೆ ಆಗಿದೆ ಎಂದ ಅವರು, ಬಿಎಸ್‌ವೈ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿಯನ್ನು ಜನ ಈ ಬಾರಿ ತಿರಸ್ಕರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.ಮನೆ ಬಿಟ್ಟು ಹೊರಬರಲು ಸಾಧ್ಯವಾಗುತ್ತಿಲ್ಲ, ಇನ್ನು `ರಾಜಕೀಯ' ನಿಭಾಯಿಸಲು ಸಾಧ್ಯವೇ? ಎಂಬ ಅಳುಕನ್ನು ಹೆಣ್ಣು ಮಕ್ಕಳು ಬಿಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕು ಎಂದರು.ಚುನಾಯಿತ ಮಹಿಳೆಯರ ಅಧಿಕಾರವನ್ನು ಪತಿಯಂದಿರೇ ನಿಭಾಯಿಸುವ ಪ್ರಸಂಗಗಳನ್ನು ಜಿಲ್ಲಾ ಪಂಚಾಯ್ತಿ ಗಳಲ್ಲಿ ಕಂಡಿದ್ದೇವೆ. ಮಹಿಳೆಯರು ಇಂತಹ ಶೋಷಣೆಗೆ ಬಲಿಯಾಗಬಾರದು. ನೊಂದ ಮಹಿಳೆಯರ ಧ್ವನಿ ಆಗಬೇಕು ಎಂದು ಆಶಿಸಿದರು.ರಾಜ್ಯದ ಚಿತ್ರಣ ತಿಳಿದುಕೊಳ್ಳಬೇಕು ಎಂಬ ಕಾರಣಕ್ಕೆ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿಲ್ಲ. ಬಹುತೇಕ ಎಲ್ಲ ಕ್ಷೇತ್ರದಲ್ಲೂ ಪ್ರಚಾರ ಮಾಡುತ್ತಿದ್ದೇನೆ. ಕಲಾವಿದಳಾಗಿ ಜನರಿಂದ ದೂರವಾಗಿದ್ದೆ. ಹೀಗಾಗಿ ಈಗ ಪ್ರಚಾರದಲ್ಲಿ `ಟಾಟಾ ಮಾಡುವ ರೋಡ್ ಶೋ' ಬದಲಾಗಿ ಹಳ್ಳಿ ಹಳ್ಳಿಯ ಜನರ ಬಳಿ ಹೋಗುತ್ತೇನೆ. ಪಕ್ಷದ ಬಗ್ಗೆ ತಿಳಿವಳಿಕೆ ನೀಡುತ್ತೇನೆ ಎಂದ ಅವರು, ಹಳ್ಳಿಗಳಲ್ಲಿ ಬಿಎಸ್‌ವೈ ಬಗ್ಗೆ ವಿಶ್ವಾಸವಿದೆ. ಕೆಜೆಪಿ ಪರ ಒಲವು ಕಾಣುತ್ತಿದ್ದೇವೆ. ಹೀಗಾಗಿ ಬಿಎಸ್‌ವೈ ರಾಜ್ಯದ ಭಾವಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.ನಾನು `ಹುಬ್ಬಳ್ಳಿ ಹುಡುಗಿ'. ಉತ್ತರ ಕರ್ನಾಟಕವೇ ನನ್ನ ಮನಸ್ಸಿಗೆ ಹತ್ತಿರ. ಹೀಗಾಗಿ ಈ ಭಾಗದಿಂದಲೇ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದೇನೆ. ಈ ಭಾಗದ ಕಷ್ಟಗಳನ್ನು ಅರಿತು ಮುಂದಿನ ದಿನಗಳಲ್ಲಿ ಪರಿಹಾರಕ್ಕೆ ಪಯತ್ನಿಸುವ ಆಶಯವಿದೆ ಎಂದರು.ಬೂತ್ ಕಡೆ: ಕೆಜೆಪಿ ರಾಜ್ಯ ಯುವ ಘಟಕದಿಂದ ಏ.14ರಿಂದ 16ರ ತನಕ ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ `ಯುವಕರ ನಡೆ- ಬೂತ್ ಕಡೆ' ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಬಿಎಸ್‌ವೈ ಅವರ ಮುಖ್ಯಮಂತ್ರಿ ಅವಧಿಯ ಸಾಧನೆ ಹಾಗೂ ಪಕ್ಷದ ಚಿಹ್ನೆ ತೆಂಗಿನ ಕಾಯಿ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲಾಗುವುದು ಎಂದು ಘಟಕದ ಅಧ್ಯಕ್ಷ ಜಗದೀಶ ಹಿರೇಮನಿ ಹೇಳಿದರು.ನಮೋಶಿಗೆ ಕೆಜೆಪಿ ಟಿಕೆಟ್ ಇಲ್ಲ!

ಗುಲ್ಬರ್ಗ
: ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ಪಕ್ಷಕ್ಕೆ ಬರುವ ಎಲ್ಲರಿಗೂ ಸ್ವಾಗತವಿದೆ. ಆದರೆ ಟಿಕೆಟ್‌ಗಾಗಿ ಪಕ್ಷಕ್ಕೆ ಯಾರೂ ಬರಬೇಕಾಗಿಲ್ಲ ಎಂದು ಕೆಜೆಪಿ ಗುಲ್ಬರ್ಗ ಮಹಾ ನಗರ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಇಂಗಿನ ಹೇಳಿದರು.ಬಿಜೆಪಿ ಟಿಕೆಟ್ ವಂಚಿತ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಕೆಜೆಪಿ ಸೇರುತ್ತಾರೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಂಗಿನ, ಗುಲ್ಬರ್ಗ ಜಿಲ್ಲೆಯ ಎಲ್ಲ 9 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಯಾವುದೇ ಪಕ್ಷದ ನಾಯಕರು ನಮ್ಮ ಪಕ್ಷಕ್ಕೆ ಬರುವುದಿದ್ದರೆ ಸ್ವಾಗತಿಸುತ್ತೇವೆ. ಆದರೆ ಅಭ್ಯರ್ಥಿಗಳ ಬದಲಾವಣೆ ಅಸಾಧ್ಯ ಎಂದರು.

ಪ್ರತಿಕ್ರಿಯಿಸಿ (+)