ಮಂಗಳವಾರ, ನವೆಂಬರ್ 12, 2019
20 °C

ಸಾಂಸ್ಕೃತಿಕ ಬದುಕಿನಿಂದ ಸ್ವಸ್ಥ ಸಮಾಜ

Published:
Updated:

ಗುಲ್ಬರ್ಗ: ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಂಗೀತ- ಸಾಹಿತ್ಯ- ನೃತ್ಯ- ಚಿತ್ರಕಲೆ ಒಳಗೊಂಡ ಸಾಂಸ್ಕೃತಿಕ ಬದುಕು ನಮ್ಮೆಲ್ಲರದಾಗಬೇಕು ಎಂದು ಇಲ್ಲಿನ ಚಿತ್ತಾರಿ ಫೌಂಡೇಶನ್ ಅಧ್ಯಕ್ಷ ವಿ.ಎನ್ ಚಿತ್ತಾರಿ ಅವರು ಅಭಿಪ್ರಾಯ ಪಟ್ಟರು.ನಗರದ ರೋಟರಿ ಕ್ಲಬ್‌ನ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಗುರುವಾರ, ಯುಗಾದಿ ಪಾಡ್ಯದಂದು ಡಾ. ಪಿ.ಎಸ್. ಶಂಕರ ಪ್ರತಿಷ್ಠಾನ ಮತ್ತು ಶ್ರಿಗುರು ಪುಟ್ಟರಾಜ ಸಂಗೀತ ವಿದ್ಯಾಲಯ ಜೊತೆಯಾಗಿ ಆಯೋಜಿಸಿದ್ದ ಚೈತ್ರೋತ್ಸವ-2013 ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಐದು ಬಾಲ ಪ್ರತಿಭೆಗಳಿಗೆ ಡಾ. ಪಿ.ಎಸ್.ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ನೀಡಿ ಅವರು ಮಾತನಾಡಿದರು.ಪ್ರತಿಯೊಂದು ಮಗುವಿನಲ್ಲಿ ಒಂದಿಲ್ಲ ಒಂದು ಸೃಜನಶೀಲತೆ ನೆಲೆಗೊಂಡಿರುತ್ತದೆ. ಅದರ ಅನಾವರಣಕ್ಕೆ ಹಾಗು ಬೆಳವಣಿಗೆಗೆ ಸೂಕ್ತ ಭೂಮಿಕೆ, ಪ್ರೋತ್ಸಾಹ ಮಾರ್ಗದರ್ಶನ ಮತ್ತು ತರಬೇತಿ ಬೇಕು. ಆದರೆ, ಇಂಥ ಕಾರ್ಯಗಳಿಗೆ ಸರ್ಕಾರ ಒಂದನ್ನೇ ನೆಚ್ಚಿ ಕುಳಿತುಕೊಳ್ಳದೇ ಸಂಘ-ಸಂಸ್ಥೆ ಮತ್ತು ಆಸಕ್ತ ವ್ಯಕ್ತಿಗಳು ಈ ದಿಶೆಯಲ್ಲಿ ಹೆಚ್ಚಿನ ಹೊಣೆಗಾರಿಕೆ ಹೊರಬೇಕೆಂದು ಹೇಳಿದರು.ಡಾ. ಪಿ.ಎಸ್.ಶಂಕರ ಪ್ರತಿಷ್ಠಾನ ಈ ನಿಟ್ಟಿನಲ್ಲಿ ತನ್ನದೇ ಆದ ರೀತಿಯಲ್ಲಿ 13 ವರ್ಷಗಳಿಂದ ಚೈತ್ರೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅನುಕರಣೀಯ ಕೆಲಸ ಮಾಡುತ್ತಿದೆ ಎಂದರು.ನೃತ್ಯ ಕಲಾವಿದೆ ಚಿನ್ಮಯಿ ವೀಣಾ ಚಂದ್ರಕಾಂತ, ಯೋಗ ಪ್ರವೀಣ ಅನೂಷಾ ಎಸ್.ಭಟ್, ಕರಾಟೆ ಪಟು ಸಾಯಿನಾಥರೆಡ್ಡಿ ಎಸ್.ಪಾಟೀಲ, ಬಹುಪ್ರತಿಭಾ ಸಂಪನ್ನ ಗುರುರಾಜ ಎಸ್.ಪಾಟೀಲ ಮತ್ತು ಕೊಳಲು ವಾದಕ ಮಣಿಕಂಠ ವಿ. ಕುಲಕರ್ಣಿ ಅವರಿಗೆ 2013ನೇ ಸಾಲಿನ ಡಾ. ಪಿ.ಎಸ್. ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ನೀಡಿ, ಪುರಸ್ಕರಿಸಲಾಯಿತು. ಈ ಪ್ರಶಸಿಯು 1,111 ರೂಪಾಯಿ ನಗದು, ಪ್ರಶಸ್ತಿ ಪತ್ರ ಮತ್ತು ಫಲ-ತಾಂಬೂಲ ಒಳಗೊಂಡಿತ್ತು.ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪಡೆದ ಪತ್ರಕರ್ತ ಶ್ರಿನಿವಾಸ ಸಿರನೂರಕರ, ಗುಲ್ಬರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಬಾಬುರಾವ್ ಯಡ್ರಾಮಿ ಮತ್ತು ಕರ್ನಾಟಕ ಪ್ರಸ್ತಕ ಪ್ರಾಧಿಕಾರದ ಒಂದು ಲಕ್ಷ ರೂಪಾಯಿಗಳ ಪ್ರತಿಷ್ಠಿತ 2012ನೇ ಸಾಲಿನ ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ ಪಡೆದ ಬಸವರಾಜ ಕೊನೇಕ್ ಅವರನ್ನು ಡಾ. ಪಿ.ಎಸ್.ಶಂಕರ ಅವರು ಆತ್ಮೀಯವಾಗಿ ಸನ್ಮಾನಿಸಿದರು.ಪ್ರತಿಷ್ಠಾನದ ಅಭಿಮಾನಿ ಸಾವಿತ್ರಿ ಸಗರ ಅವರು ಸ್ವಯಂ-ಸಿದ್ಧಪಡಿಸಿ ಸ್ವಾದಿಷ್ಟ ಬೇವು-ಬೆಲ್ಲದ ಪಾನಕ ವಿತರಿಸಿದರು. ಪ್ರೊ. ನರೇಂದ್ರ ಬಡಶೇಷಿ ಸ್ವಾಗತಿಸಿ, ವಂದಿಸಿದರು. ಡಾ. ಈಶ್ವರಯ್ಯ ಮಠ ನಿರೂಪಿಸಿದರು. ಮಾಲಾಶ್ರಿ ಕಣವಿ ಬಳಗ ಪ್ರಾರ್ಥಿಸಿದರು.

ಪ್ರತಿಕ್ರಿಯಿಸಿ (+)