ಮಂಗಳವಾರ, ನವೆಂಬರ್ 12, 2019
27 °C

ಸಮಗ್ರ ಕೃಷಿ ಅಭಿವೃದ್ಧಿಗೆ ಸಲಹೆ

Published:
Updated:

ಗುಲ್ಬರ್ಗ: ರೈತರ ಆರ್ಥಿಕಮಟ್ಟ ಸುಧಾರಿಸಲು ಅನುಕೂಲವಾಗುವ ಸಮಗ್ರ ಕೃಷಿ ಅಭಿವೃದ್ಧಿ ಯೋಜನೆಯನ್ನು ಹಾಗೂ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆಯಂತಹ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲು ಕೃಷಿ ಅಧಿಕಾರಿಗಳು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಅಕುರಾತಿ ಹೇಳಿದರು.ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ ಜಿಲ್ಲಾ ಮಟ್ಟದ ಮುಂಗಾರು ಹಂಗಾಮಿನ ಕಾರ್ಯಾಗಾರ-11 ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿ ಸಂಶೋಧನೆ ಮತ್ತು ಕ್ಷೇತ್ರಮಟ್ಟದ ಕಾರ್ಯಗಳು ರೈತರ ಹೊಲಗಳಿಗೆ ಕೊಂಡೊಯ್ಯಬೇಕು ಹಾಗೂ ಕೃಷಿ ತ್ಯಾಜ್ಯಗಳ ಸದ್ಬಳಕೆಯ ಬಗ್ಗೆ ರೈತರಿಗೆ ಮನವರಿಕೆ ಮಾಡಬೇಕು. ಜೈವಿಕ ಕೃಷಿ ಪದ್ಧತಿಗೆ ಆದ್ಯತೆ ನೀಡಲು ಪ್ರತಿ ತಾಲ್ಲೂಕಿನಲ್ಲಿ ರೈತರ ಸಹಕಾರ ಸಂಘಗಳ ಮೂಲಕ ಕೃಷಿ 15 ಮತ್ತು ತೋಟಗಾರಿಕೆ ಇಲಾಖೆಯ 15 ಸೇರಿದಂತೆ 30 ಎರೆಹುಳು ಗೊಬ್ಬರ ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.ಜಿಲ್ಲೆಯ ಸ್ವ-ಸಹಾಯ ಗುಂಪುಗಳ ಮೂಲಕ ಪ್ರಮುಖ ವಿವಿಧ ದೇಶಿ ತಳಿ ಬಿತ್ತನೆ ಬೀಜಗಳನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕು. ರೈತರು ಮಿಶ್ರಬೆಳೆ ಪದ್ಧತಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಭೂಜಲ ಮಟ್ಟ ತೀವ್ರವಾಗಿ ಕುಸಿಯುವುದನ್ನು ತಡೆಗಟ್ಟಲು ರೈತರ ಪ್ರತಿ ಹೊಲದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳುವಂತೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.ರೈತ ಮಹಿಳೆಯರು ಹಾಗೂ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು ಲಾಭದಾಯಕವಾದ ಅಣಬೆ ಬೇಸಾಯ ಕೈಗೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದಡಿ ಜಿಲ್ಲೆಯ ಸಣ್ಣ ಮತ್ತು ಅತೀ ಸಣ್ಣ ರೈತರ ಹೊಲಗಳ ಬದುಗಳ ಮೇಲೆ ಹುಣಸೆ, ಮಾವು, ಸೀತಾಫಲ, ನೆಲ್ಲಿ ಮುಂತಾದ ಹತ್ತು ಹಣ್ಣಿನ ಸಸಿಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಐದು ವರ್ಷಗಳ ಬಳಿಕ ರೈತರು ಈ ಗಿಡಗಳ ಫಲವನ್ನು ಪಡೆದು ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಅನುಕೂಲವಾಗುವುದು. ಇದಕ್ಕಾಗಿ 30 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ರೈತರ ಜೀವನಮಟ್ಟ ಸುಧಾರಣೆಗೆ ಎಲ್ಲ ಕೃಷಿ ಅಧಿಕಾರಿಗಳು ಶ್ರಮಿಸಬೇಕು ಎಂದು ನುಡಿದರು.ಕೃಷಿ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ. ಪಿ.ಎಸ್. ಧರ್ಮರಾಜ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಕೃಷಿ ಆಯುಕ್ತರ ಕಚೇರಿಯ ಜಂಟಿ ಕೃಷಿ ನಿರ್ದೇಶಕ (ಪರಿಕರ) ಡಾ. ಸಿದ್ಧರಾಜು, ಹೈದರಾಬಾದ್ ಇಕ್ರಿಸ್ಯಾಟ್ ಸಂಸ್ಥೆಯ ಅಧಿಕಾರಿ ಡಾ. ಗಫೂರ್, ವಿಜ್ಞಾನಿ ಡಾ. ಕೇಶವರಾವ, ಗುಲ್ಬರ್ಗ ಕೃಷಿ ವಿಜ್ಞಾನ ಕೇಂದ್ರದ ಯೋಜನಾ ನಿರ್ದೇಶಕ ಡಾ. ಕಾಂತರಾಜ್ ಮುಖ್ಯ ಅತಿಥಿಯಾಗಿದ್ದರು.ಜಂಟಿ ಕೃಷಿ ನಿರ್ದೇಶಕ ಐ.ಈ. ಬಳತಕರ್ ಸ್ವಾಗತಿಸಿದರು. ಸಹಾಯಕ ಕೃಷಿ ನಿರ್ದೇಶಕ (ಜಾಗತದಳ) ಜಿ.ಆರ್. ಕೋಟಿ ನಿರೂಪಿಸಿದರು. ಈ ಸಂದರ್ಭದಲ್ಲಿ 2013-14ನೇ ಸಾಲಿನ ಮುಂಗಾರು ಹಂಗಾಮಿನ ಭೂಚೇತನ ಯೋಜನೆಯ ಮಾರ್ಗಸೂಚಿ ಕೈಪಿಡಿ, ಪೋಷಕಾಂಶಗಳ ಕೊರತೆ ಲಕ್ಷಣಗಳ ಮತ್ತು ಅವುಗಳ ನಿರ್ವಹಣೆ ಕ್ರಮಗಳ ವಿಸ್ತರಣಾ ಕೈಪಿಡಿ ಹಾಗೂ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಪ್ರತಿಕ್ರಿಯಿಸಿ (+)