ಮಂಗಳವಾರ, ನವೆಂಬರ್ 12, 2019
27 °C
ಕೊನೆ ದಿನ 138 ಸೇರಿ 278 ನಾಮಪತ್ರ ಸಲ್ಲಿಕೆ

ಅಭ್ಯರ್ಥಿಗಳಿಂದ ಶಕ್ತಿಪ್ರದರ್ಶನ: ಸಂಚಾರ ಸಂಕಟ

Published:
Updated:

ಗುಲ್ಬರ್ಗ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದೇ 17ರ ಬುಧವಾರ ಕೊನೆಯ ದಿನವಾಗಿದ್ದರಿಂದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಜಿಲ್ಲೆಯಾದ್ಯಂತ ಭಾರಿ ಜನಬಲದೊಂದಿಗೆ ನಾಮಪತ್ರ ಸಲ್ಲಿಸಿದರು. ಜಿಲ್ಲೆಯ ಒಂಭತ್ತು ಮತಕ್ಷೇತ್ರಗಳಲ್ಲಿ ಒಂದೇ ದಿನ 116 ಅಭ್ಯರ್ಥಿಗಳಿಂದ ಒಟ್ಟು 138 ನಾಮಪತ್ರ ಸಲ್ಲಿಕೆಯಾಗಿದ್ದು, ಒಟ್ಟು 278 ನಾಮಪತ್ರ ಸಲ್ಲಿಕೆಯಾದಂತಾಗಿದೆ.ಗುಲ್ಬರ್ಗ ಉತ್ತರ ಮತಕ್ಷೇತ್ರಕ್ಕೆ ಒಂದೇ ದಿನ 20 ನಾಮಪತ್ರ ಸಲ್ಲಿಕೆಯಾಗುವ ಮೂಲಕ ಒಟ್ಟು ನಾಮಪತ್ರಗಳ ಸಂಖ್ಯೆ 29ಕ್ಕೆ ಏರಿದೆ. ಗುಲ್ಬರ್ಗ ದಕ್ಷಿಣ ಮತಕ್ಷೇತ್ರಕ್ಕೆ ಬುಧವಾರ 25 ನಾಮಪತ್ರ ಸಲ್ಲಿಕೆಯಾಗುವ ಮೂಲಕ ಒಟ್ಟು 41 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ. ಗ್ರಾಮೀಣ ಮತಕ್ಷೇತ್ರಕ್ಕೆ ಕೊನೆಯ ದಿನ 19ರಂದು ನಾಮಪತ್ರ ಸಲ್ಲಿಕೆಯಾಗಿ ಇಲ್ಲಿವರೆಗೂ 34 ನಾಮಪತ್ರ ಸಲ್ಲಿಕೆಯಾದಂತಾಗಿದೆ.ಜನಬಲ ಪ್ರದರ್ಶನ: ಗುಲ್ಬರ್ಗ ದಕ್ಷಿಣ ಹಾಗೂ ಗುಲ್ಬರ್ಗ ಉತ್ತರ ಮತಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಜೆಡಿಎಸ್, ಬಿಜೆಪಿ, ಕೆಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ನಗರದ ವಿವಿಧ ಭಾಗಗಳಿಂದ ಮೆರವಣಿಗೆ ಆರಂಭಿಸಿದ್ದರಿಂದ ಸಂಚಾರ ದಟ್ಟಣೆ ಏರ್ಪಟ್ಟು, ಜನಸಾಮಾನ್ಯರು ಕಿರಿಕಿರಿ ಅನುಭವಿಸುವಂತಾಯಿತು.ಗುಲ್ಬರ್ಗ ದಕ್ಷಿಣ ಮತಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಎಸ್.ಕೆ. ಕಾಂತಾ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ತಮ್ಮ ಅಪಾರ ಬೆಂಬಲಿಗರೊಂದಿಗೆ ಕೇಂದ್ರೀಯ ಬಸ್ ನಿಲ್ದಾಣದಿಂದ ಪಾಲಿಕೆವರೆಗೂ ಮೆರವಣಿಗೆ ನಡೆಸಿದರು.ಇದೇ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದತ್ತಾತ್ರೇಯ ಚಂ. ಪಾಟೀಲ ಸೂಪರ್ ಮಾರ್ಕೆಟ್‌ನಿಂದ ಮಹಾನಗರ ಪಾಲಿಕೆವರೆಗೂ ಭಾರಿ ಜನಬಲದೊಂದಿಗೆ ಪಾಲಿಕೆಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.ಗುಲ್ಬರ್ಗ ದಕ್ಷಿಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೈಲಾಸನಾಥ ಪಾಟೀಲ ಹಾಗೂ ಗುಲ್ಬರ್ಗ ಉತ್ತರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಖಮರುಲ್ ಇಸ್ಲಾಂ ಅಪಾರ ಜನಬಲ ಹಾಗೂ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ.ಜಿ. ಸಾಗರ ಕೂಡಾ ತಮ್ಮ ಅಸಂಖ್ಯೆ ಜನಬಲದೊಂದಿಗೆ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳ ಬೆಂಗಲಿಗರು ವಾದ್ಯಮೇಳದೊಂದಿಗೆ ನಗರದ ವಿವಿಧ ಕಡೆಗಳಲ್ಲಿ ಇಡೀ ರಸ್ತೆಯಲ್ಲಿ ಆವರಿಸಿಕೊಂಡಿದ್ದರಿಂದ ರಾಷ್ಟ್ರಪತಿ ವೃತ್ತ ಹಾಗೂ ಮಹಾನಗರ ಪಾಲಿಕೆ ಎದುರು ವಾಹನಗಳು ಬಹಳ ಹೊತ್ತಿನವರೆಗೂ ಕದಲದಂತೆ ನಿಂತುಕೊಳ್ಳಬೇಕಾಯಿತು.ತಪ್ಪಿದ ನಿಯಂತ್ರಣ: ವಿಧಾನಸಭೆ ಚುನಾವಣೆಗೆ ಸಾಕಷ್ಟು ಬಿಗಿ ಬಂದೋಬಸ್ತ್ ಒದಗಿಸುವುದರೊಂದಿಗೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಆದರೆ ನಾಮಪತ್ರ ಸಲ್ಲಿಕೆಯಾಗುವಾಗ ಬೆಂಬಲಿಗರನ್ನು ನಿಯಂತ್ರಿಸುವುದು ಮಾತ್ರ ಪೊಲೀಸರಿಂದ ಅಸಾಧ್ಯ ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು.ಸಂಚಾರ ದಟ್ಟಣೆ ನಿಯಂತ್ರಿಸಿ ಸುಗಮಗೊಳಿಸುವುದು ಸಂಚಾರಿ ಪೊಲೀಸರಿಂದಲೂ ಅಸಾಧ್ಯ ಎನ್ನುವಂತಾಗಿತ್ತು. ಪ್ರತಿ ವೃತ್ತದಲ್ಲಿ ನಿಂತುಕೊಂಡಿದ್ದ ಇಬ್ಬರು ಸಂಚಾರಿ ಪೊಲೀಸರು, ಬಿಸಿಲಿಗೆ ಬಸವಳಿದು ಮೂಕ ಪ್ರೇಕ್ಷಕರಾಗಿ ನಿಂತುಕೊಂಡಿದ್ದರು. ವಾಹನ ಸವಾರರ ಪರಿಪಾಟಲು ಕೇಳುವವರಿರಲಿಲ್ಲ.

ಪ್ರತಿಕ್ರಿಯಿಸಿ (+)