ಶುಕ್ರವಾರ, ನವೆಂಬರ್ 22, 2019
26 °C

ಡೊಣ್ಣೂರ: ಬೆಂಕಿ ಅವಘಡ, ಹಾನಿ

Published:
Updated:

ಕಾಳಗಿ: ವಿದ್ಯುತ್ ಸಂಪರ್ಕ ಕಲ್ಪಿಸುವ ತಂತಿಗಳಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ ಇಡೀ ಗ್ರಾಮದ ಜನರೇ ನಲುಗಿದ ಘಟನೆ ಚಿತ್ತಾಪುರ ತಾಲ್ಲೂಕಿನ ಡೊಣ್ಣೂರ ಗ್ರಾಮದಲ್ಲಿ ಬುಧವಾರ ನಡೆದಿದೆ.ಇಲ್ಲಿನ ಹರಿಜನವಾಡ ಪ್ರದೇಶದಲ್ಲಿ ಮಧ್ಯಾಹ್ನ 2ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ಎಲ್ಲೆಂದರಲ್ಲಿ ಸಿಡಿದು ಸುಮಾರು 3ಎಕರೆಯಷ್ಟು ಪ್ರದೇಶವನ್ನು ಸುಟ್ಟು ಕರಕಲಾಗಿಸಿದೆ. ಬೆಂಕಿಯ ಕಿಡಿ ಎಲ್ಲೆಡೆ ಸಿಡಿದು ಬೆಂಕಿ ಹತ್ತುತ್ತಿದ್ದಂತೆ ಎಚ್ಚೆತ್ತ ಗ್ರಾಮಸ್ಥರು, ಕೊಡಗಳಲ್ಲಿ ನೀರು ತಂದು ಸುರಿದರೂ ಮಣಿಯದ ಬೆಂಕಿ ಮತ್ತಷ್ಟು ವ್ಯಾಪಿಸುತ್ತಿದ್ದಂತೆ ಟ್ರ್ಯಾಕ್ಟರ್ ಕಟ್ಟಿ ನೀರು ಹೊಡೆದರೂ ಪ್ರಯೋಜನವಾಗಿಲ್ಲ.ಸೇಡಂ ಮತ್ತು ಚಿತ್ತಾಪುರ ಪಟ್ಟಣಗಳಿಂದ ಅಗ್ನಿಶಾಮಕ ದಳದ ಸಿಬ್ಬಂದಿ ತರಿಸಿ ಬೆಂಕಿ ನಂದಿಸುವ ಕಾರ್ಯ ಚುರುಕು ಗೊಳಿಸುವಷ್ಟರಲ್ಲಿ 4ಎತ್ತಿನ ಬಂಡಿಗಳು, 5 ಕಣಕಿ ಬಣವೆ, ಅನೇಕ ಕೃಷಿ ಪರಿಕರಗಳು, ಹಲವು ತಿಪ್ಪೆಗುಂಡಿಗಳು ಸುಟ್ಟು ಹೋಗಿವೆ.ಶಿವರಾಯ ನೀಲಿ, ತಿಪ್ಪಣ್ಣ ಇಂಗನ್‌ಕಲ್, ಅಂಬಣ್ಣ ತೇಲಿ, ಮರೆಪ್ಪ ತೊನಸಳ್ಳಿ, ಸುಭಾಷ ಘಾಳೆ, ಮರೆಮ್ಮ ಘಾಳೆ ಇತರರ ಮನೆಗಳ ಕೆಲವುಭಾಗ ಸುಟ್ಟು ಮನೆಯೊಳಗಿನ ಸಾಮಾನುಗಳು ರಸ್ತೆಗೆ ಬಿದ್ದಿವೆ. ತುಳಜಮ್ಮ ರಾಮಚಂದ್ರಪ್ಪ ಶಿರಮನೋರ ಎಂಬ ಮಹಿಳೆಗೆ ಬೆಂಕಿಕಾವು ತಗುಲಿ ಕಾಳಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.ರಾತ್ರಿ 7ಗಂಟೆಯಾದರೂ ಸುಟ್ಟು ಕರಕಲಾಗಿದ್ದ ಅನೇಕ ಗಿಡಮರಗಳು ಆರದಿದ್ದಾಗ ಇನ್ನು 2 ಅಗ್ನಿಶಾಮಕ ದಳದ ವಾಹನಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ವಿಷಯ ಅರಿಯುತ್ತಿದ್ದಂತೆ ಎನ್‌ಸಿವಿಟಿ ಸದಸ್ಯ ಜಗದೇವ ಗುತ್ತೇದಾರ, ಜಿಲ್ಲಾ ಪಂಚಾಯಿತಿ ಸದಸ್ಯ ಶಂಭುಲಿಂಗ ಗುಂಡಗುರ್ತಿ, ಎಎಸ್‌ಐ ಶಂಕರ ಶಿಕಾರಿ, ಕಂದಾಯ ನಿರೀಕ್ಷಕ ಮಾಣಿಕಪ್ಪ, ಶರಣಗೌಡ ಪಾಟೀಲ ಇತತರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.ಭೇಟಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪಲ್ಲವಿ ಆಕುರತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೆಂಗಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ ಹೊಸಮನಿ, ಶಿವಕುಮಾರ ತೊಟನಳ್ಳಿ, ಕಲ್ಯಾಣರಾವ ಘಾಳೆನೋರ, ಅಶೋಕ ದೊಡ್ಡಮನಿ, ಆನಂದ ಮಲಘಾಣ, ಗ್ರಾಮ ಲೇಖಪಾಲಕ ಇರ್ಷಾದ ಅಲಿ, ಬಿಲ್‌ಕಲೆಕ್ಟರ್ ಕಾಶಿನಾಥ ಕುಡ್ಡಳ್ಳಿ ಇದ್ದರು.

ಪ್ರತಿಕ್ರಿಯಿಸಿ (+)