ಬುಧವಾರ, ನವೆಂಬರ್ 20, 2019
22 °C

ಜ್ಞಾನದೀಪ ತೋರುವ ಸಿದ್ಧಾರೂಢರು

Published:
Updated:

ಭಾರತ ದೇಶ ಆಧ್ಯಾತ್ಮಿಕ ಸಂಪತ್ಭರಿತ ದೇಶ. ಇಲ್ಲಿ ಅನೇಕ ಶರಣರು, ಸಂತರು ಆಗಿ ಹೋಗಿದ್ದಾರೆ. ಇಂತಹ ಭವ್ಯ ಪರಂಪರೆಯುಳ್ಳ ದೇಶದಲ್ಲಿ ಮಹಾತ್ಮರಾದ ಸಿದ್ಧಾರೂಢರು ಆಧ್ಯಾತ್ಮಿಕ ಪರಂಪರೆಯ ಭವ್ಯ ಬುನಾದಿ ಹಾಕಿದ್ದಾರೆ.ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಚಳಕಾಪುರದಲ್ಲಿ ಗುರುಶಾಂತಪ್ಪ ಹಾಗೂ ಮಲ್ಲಮ್ಮ ಅವರ ಪುಣ್ಯಗರ್ಭದಲ್ಲಿ ಶಾಲಿವಾಹನ ಶಕೆ 1832ರಲ್ಲಿ ಸದ್ಗುರು ಸಿದ್ಧಾರೂಢರು ಶಿವನೇ ಸಿದ್ಧನಾಗಿ ಜನ್ಮ ತಾಳಿದರು. ಏಳನೇ ವಯಸ್ಸಿನಲ್ಲಿಯೇ ಅಧ್ಯಾತ್ಮದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ರಾಯಚೂರು ಜಿಲ್ಲೆ ಗುಡುಗುಂಟಿಯ ಗಜದಂಡ ಶಿವಾಚಾರ್ಯರ ಬಳಿ 12 ವರ್ಷಗಳ ಕಾಲ ಅಧ್ಯಾತ್ಮದ ಜ್ಞಾನ ಪಡೆದರು. ಗುಡುಗುಂಟಿ ಅಮರೇಶ್ವರ ಮಠದಲ್ಲಿ ಸೇವೆ ಮಾಡುತ್ತ ಜ್ಞಾನ ಸಂಪತ್ತನ್ನು ಪಡೆದರು.ಗುರುಗಳಿಂದ ಜ್ಞಾನದೀಕ್ಷೆ ಪಡೆದ ನಂತರ ಸಿದ್ಧ ಎಂಬ ಹೆಸರಿನಿಂದ ಸಿದ್ಧಾರೂಢ ಎಂಬ ನಾಮಾಂಕಿತದಿಂದ ಹೆಸರುವಾಸಿಯಾದರು. ಅಲ್ಲಿಂದ ಗುರುಗಳ ಆದೇಶದಂತೆ 32 ವರ್ಷಗಳ ಕಾಲ ಭಾರತದಾದ್ಯಂತ ಕಾಲ್ನಡಿಗೆಯ ಮೂಲಕ ಸಂಚರಿಸಿ, ಮುಮುಕ್ಷಿಗಳಿಗೆ ಜ್ಞಾನ ದಯಪಾಲಿಸುತ್ತ ಕೊನೆಗೆ ಹುಬ್ಬಳ್ಳಿಯಲ್ಲಿ ನೆಲೆಸಿದರು. ಸಕಲ ವೇದಾಂತ ನಿಜಗುಣ ಶಿವಯೋಗಿಗಳ ಏಳು ವೇದಾಂತ ಗ್ರಂಥಗಳಿಗೆ ಸರಳ ಕನ್ನಡದಲ್ಲಿ ಎಲ್ಲ ಜನರಿಗೆ ಅರ್ಥವಾಗುವಂತೆ ಬರೆದ ಸದ್ಗುರು ಸಿದ್ಧಾರೂಢರು 1920ರಲ್ಲಿ ಭಗವಂತನಲ್ಲಿ ಲೀನರಾದರು.ಸದ್ಗುರು ಸಿದ್ಧಾರೂಢರ ಪರಂಪರೆಯ ಶಿಷ್ಯರಾದ ಮುಕ್ಯಾಳದ ಸಂಗಮೇಶ್ವರ ಮಹಾಸ್ವಾಮಿಗಳು ಸದ್ಗುರು ಸಿದ್ಧಾರೂಢರು ಬೋಧಿಸಿದ ಜ್ಞಾನ ದೀಪವನ್ನು ಹಿಡಿದು ಸುರಪುರ ತಾಲ್ಲೂಕು ನಡಕೂರು ಗ್ರಾಮಕ್ಕೆ ಬಂದು ನೆಲೆಸಿದರು. ಅಂದಿನಿಂದ ನಡಕೂರು ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲು ಪ್ರಾರಂಭವಾದವು. ನಂತರ ಸಿಂದಗಿ ತಾಲ್ಲೂಕಿನ ಆಲಗೂರು ಗ್ರಾಮದ ಶಿವಯ್ಯ ಮಹಾಸ್ವಾಮಿಗಳು ಸಿದ್ಧಾರೂಢರ ಮಠ ಸ್ಥಾಪಿಸಿದರು. ಶಿವಯ್ಯ ಮಹಾಸ್ವಾಮಿಗಳು ಅಧ್ಯಾತ್ಮದ ಜೊತೆಗೆ ನಾಟಕ, ಕೀರ್ತನೆ, ಪುರಾಣ, ಶಾಸ್ತ್ರಗಳನ್ನು ಹೇಳುತ್ತ ಜನರನ್ನು ಧಾರ್ಮಿಕತೆಯೆಡೆಗೆ ಕೊಂಡೊಯ್ದರು. ಇಂದಿಗೂ ಈ ಪರಂಪರೆ ಮುಂದುವರಿಯುತ್ತ ಸದ್ಯದ ಮಠದ ಪೀಠಾಧಿಪತಿಗಳಾದ ಪ್ರಣವಾನಂದ ಮಹಾಸ್ವಾಮಿಗಳು 13 ವರ್ಷಗಳಿಂದ ಜ್ಞಾನ ದಾಸೋಹವನ್ನು ಉಣಿಸುವ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಡಕೂರದ ಸಿದ್ಧಾರೂಢರ ಮಠ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ.`ಗ್ರಾಮಸ್ಥರ ಸಹಕಾರವೂ ಹೆಚ್ಚಿನದಾಗಿದ್ದು, ಸಿದ್ಧಾರೂಢರ ಮಠ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಎಲ್ಲಿ ಭಕ್ತಿ ಹಾಗೂ ನಿಜವಾದ ಭಕ್ತರು ಇರುತ್ತಾರೋ ಅಲ್ಲಿ ಇಂಥ ಕಾರ್ಯಗಳನ್ನು ಭಗವಂತ ನಿಂತು ಮಾಡಿಸುತ್ತಾನೆ' ಎಂದು ಪೀಠಾಧಿಪತಿ ಪ್ರಣವಾನಂದ ಮಹಾಸ್ವಾಮಿಗಳು ಹೇಳುತ್ತಾರೆ.ಏ. 21ರಿಂದ 25 ದಿನಗಳ ಕಾಲ ಸತ್ಸಂಗ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು ನೂತನವಾಗಿ ನಿರ್ಮಾಣಗೊಂಡ ಸಿದ್ದಾರೂಢರ ಮಂದಿರದ ಕಳಸಾರೋಹಣ, ಸಿದ್ಧಾರೂಢ ಮಹಾಸ್ವಾಮೀಜಿ ಮೂರ್ತಿ ಪ್ರತಿಷ್ಠಾಪನೆ, ಸಂಗಮೇಶ್ವರರ 32ನೇ ಪುಣ್ಯಾರಾಧನೆ ಹಾಗೂ ಸಿದ್ಧಾರೂಢರ ಜಾತ್ರಾ ಮಹೋತ್ಸವ ನಡೆಯಲಿದೆ. ಈ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಇಂಚಲ ಶಿವಾನಂದ ಭಾರತಿ ಮಹಾ ಸ್ವಾಮೀಜಿ, ಬೀದರ್ ಶಿವಕುಮಾರ ಮಹಾ ಸ್ವಾಮೀಜಿ, ಅಭಿನವ ಶಿವಪುತ್ರ ಮಹಾಸ್ವಾಮೀಜಿ, ಸಂಗಮೇಶ್ವರ ಮಹಾಸ್ವಾಮೀಜಿ, ಶಿವಯೋಗೇಶ್ವರ ಸೇರಿದಂತೆ ಅನೇಕ ಮಠಾಧೀಶರು ಪಾಲ್ಗೊಳ್ಳಲಿದ್ದು ಲಕ್ಷದೀಪೋತ್ಸವ, ಕುಂಭಮೇಳ, ಪಲ್ಲಕ್ಕಿ ಮೆರವಣಿಗೆ, ಡೊಳ್ಳು ಕುಣಿತ, ಭಜನೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಸಾವಿರಾರು ಭಕ್ತರ ಶ್ರದ್ಧಾ-ಭಕ್ತಿಯೊಂದಿಗೆ ಜರುಗಲಿವೆ.

 

ಪ್ರತಿಕ್ರಿಯಿಸಿ (+)