ಶುಕ್ರವಾರ, ನವೆಂಬರ್ 22, 2019
20 °C

ತಾಪಮಾನದಲ್ಲಿ ಇಳಿಕೆ : 37.8 ಡಿ.ಸೆ. ದಾಖಲು

Published:
Updated:

ಗುಲ್ಬರ್ಗ: ಅತ್ತ ಚುನಾವಣಾ ಕಾವು ಏರುತ್ತಿದ್ದರೆ, ಇತ್ತ ವಾತಾವರಣದಲ್ಲಿನ ತಾಪಮಾನ ಕಳೆದ ಕೆಲ ದಿಣಗಳಿಂದ ಇಳಿಕೆಯಾಗುತ್ತಿದೆ. ಗುಲ್ಬರ್ಗದಲ್ಲಿ ಶನಿವಾರ ಗರಿಷ್ಠ ತಾಪಮಾನ 37.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ತಾಪಮಾನವು 23.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.ಗುಲ್ಬರ್ಗದಲ್ಲಿ ಏಪ್ರಿಲ್ 9ರ ಹವಾಮಾನ ವರದಿ ಅನ್ವಯ ರಾಜ್ಯದಲ್ಲೇ ದಿನದ ಗರಿಷ್ಠ ತಾಪಮಾನ 42.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಕೇವಲ ಎರಡು ವಾರದೊಳಗೆ ತಾಪಮಾನವು 4.7 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಮುಂಗಾರು, ಚಂಡಮಾರುತ ಮತ್ತಿತರ ಪ್ರಭಾವ ಇಲ್ಲದೇ ವಾತಾವರಣದ ಸ್ವಾಭಾವಿಕ ಬದಲಾವಣೆಯಲ್ಲಿ ತಾಪಮಾನ ಇಳಿಕೆಯಾಗಿದೆ.ಇದರೊಂದಿಗೆ ಕನಿಷ್ಠ ತಾಪಮಾನವೂ ಇಳಿಕೆಯಾಗಿದೆ. ಏಪ್ರಿಲ್ 20ರಂದು ಬೆಂಗಳೂರಿನಲ್ಲೇ 35.7 ಡಿ.ಸೆ. ಹಾಗೂ ಮೈಸೂರಿನಲ್ಲಿ 36.7 ಡಿ.ಸೆ. ಗರಿಷ್ಠ ತಾಪಮಾನ ಇತ್ತು. ಇದು ಗುಲ್ಬರ್ಗಕ್ಕಿಂತ 2.1 ಡಿ.ಸೆ. ಕಡಿಮೆ ಮಾತ್ರ.`ತಾಪಮಾನ ಇಳಿಕೆಯು ಹವಾಮಾನದ ಸ್ವಾಭಾವಿಕ ಬದಲಾವಣೆ ಆಗಿದೆ. ಆಕಾಶ ಶುಭ್ರವಾಗಿ ವಾತಾವರಣದಲ್ಲಿ ತೇವಾಂಶ ಕಡಿಮೆಯಾದಾಗ ಈ ರೀತಿ ಆಗುತ್ತದೆ. ಭೂಮಿಗೆ ಬರುವ ಸೂರ್ಯನ ಬೆಳಕನ್ನು ಹೀರುವ ತೇವಾಂಶ ಇಲ್ಲದ ಕಾರಣ ತಾಪಮಾನ ಏರಿಕೆಯಾಗುವುದಿಲ್ಲ. ಆದರೆ ಮತ್ತೆ ನಿಧಾನವಾಗಿ ತಾಪಮಾನ ಏರಿಕೆಯಾಗಿ, ಮತ್ತೆ ಅಲ್ಲಲ್ಲಿ ಮಳೆ ಬರುವ ಸಂಭವವಿದೆ. ಈಚೆಗೆ ಪಟ್ಟಣ ಹೋಬಳಿಯಲ್ಲಿ ಮಾತ್ರ ಮಳೆ ಸುರಿದಿರುವುದು ಇದಕ್ಕೆ ಉದಾಹರಣೆ. ಸದ್ಯದಲ್ಲೇ ಹವಾಮಾನ ಇಲಾಖೆಯು ಮುಂಗಾರು ಮುನ್ಸೂಚನೆ ನೀಡುವ ಸಾಧ್ಯತೆ ಇದೆ. ಜೂನ್ ಮೊದಲವಾರದಲ್ಲಿ ನಿರೀಕ್ಷೆ ಇದೆ' ಎನ್ನುತ್ತಾರೆ ಆಕಾಶವಾಣಿ ಕೃಷಿ ಪ್ರಸಾರ ನಿರ್ವಾಹಕ ಸೋಮಶೇಖರ ರೂಳಿ.    2012ರ ಏಪ್ರಿಲ್ 10ರಂದು ತಿಂಗಳ ಗರಿಷ್ಠ ತಾಪಮಾನ 41.6 ಡಿಗ್ರಿ ಸೆ. ದಾಖಲಾಗಿತ್ತು. 2000 ಏಪ್ರಿಲ್ 30ರಂದು 45.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದು, ಏಪ್ರಿಲ್ ತಿಂಗಳಲ್ಲಿ ಈ ತನಕ ಗುಲ್ಬರ್ಗದಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ.

ಪ್ರತಿಕ್ರಿಯಿಸಿ (+)