ಸೇತುವೆ ಪ್ರಯಾಣಕ್ಕೆ ಅಪಾಯ

7

ಸೇತುವೆ ಪ್ರಯಾಣಕ್ಕೆ ಅಪಾಯ

Published:
Updated:
ಸೇತುವೆ ಪ್ರಯಾಣಕ್ಕೆ ಅಪಾಯ

ಚಿತ್ತಾಪುರ: ತಾಲ್ಲೂಕಿನ ಮರಗೋಳ ಗ್ರಾಮದ ಹತ್ತಿರ ನಾಲಾಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆ ಹತ್ತಿರದ ಮಣ್ಣು ನಾಲಾ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ತೆಗ್ಗು ಬಿದ್ದಿದೆ. ಇದರಿಂದ ಈ ಮಾರ್ಗದ ಸಾರಿಗೆ ಸಂಚಾರಕ್ಕೆ ಅಪಾಯ ಉಂಟು ಮಾಡುವ ಆತಂಕ ಜನರಿಗೆ ಕಾಡುತ್ತಿದೆ.ಸೇತುವೆ ನಿರ್ಮಾಣದ ನಂತರ ಸೇತುವೆ ಎರಡೂ ಪಕ್ಕದಲ್ಲಿ ಸರಿಯಾಗಿ ಗೋಡೆ ನಿರ್ಮಾಣ ಮಾಡಿಲ್ಲ. ಮಳೆಗಾಲ ಸಮಯದಲ್ಲಿ ನಾಲಾದಲ್ಲಿ ಭಾರಿ ರಭಸದಿಂದ ಪ್ರವಾಹ ಬಂದಾಗೊಮ್ಮೆ ಮಣ್ಣು ಕೊಚ್ಚಿಕೊಂಡು ಹೋಗಿ ಸೇತುವೆ ಹತ್ತಿರ ಭಾರಿ ತೆಗ್ಗು ಬಿದ್ದಿದೆ. ಸಂಬಂಧಿತ ಇಲಾಖೆಯ ಅಧಿಕಾರಿ ಅದನ್ನು ಮುಚ್ಚಿಸಿ, ಸೇತುವೆ ಪಕ್ಕದ ರಸ್ತೆ ಸರಿಯಾಗಿ ರಕ್ಷಣೆ ಮಾಡುವ ಕೆಲಸ ಮಾಡಿಸುತ್ತಿಲ್ಲ ಎಂದು ಮರಗೋಳ ಗ್ರಾಮಸ್ಥರು ಆರೋಪಿಸಿದ್ದಾರೆ.ಗ್ರಾಮದಿಂದ ದಂಡೋತಿ ಕ್ರಾಸ್‌ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ತೆಗ್ಗು ಗುಂಡಿಗಳು ನಿರ್ಮಾಣವಾಗಿವೆ. ಕಳೆದ ಮಳೆಗಾಲದಲ್ಲಿ ಇಡೀ ರಸ್ತೆ ಕೊಳಚೆಗುಂಡಿಯಾಗಿ ಮಾರ್ಪಟ್ಟಿತ್ತು. ಇದರಿಂದ ಇಲ್ಲಿನ ಸಾರಿಗೆ ಸಂಸ್ಥೆಯು ಈ ಮಾರ್ಗದಲ್ಲಿ ಓಡಿಸುತ್ತಿದ್ದ ಏಕೈಕ ಬಸ್ ಸಂಚಾರ ಸ್ಥಗಿತಗೊಳಿಸಿತ್ತು. ಸಾರ್ವಜನಿಕರು ಹಾಗೂ ಗ್ರಾಮದ ವಿದ್ಯಾರ್ಥಿಗಳು ತುಂಬಾ ಕಷ್ಟ ಅನುಭವಿಸಬೇಕಾಗಿತ್ತು. ಈಗ ಕಾಳಗಿ  ಘಟಕದ ಬಸ್ ಈ ಮಾರ್ಗವಾಗಿ ಸಂಚರಿಸುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.ಸಂಬಂಧಿತ ಇಲಾಖೆಯ ಅಧಿಕಾರಿ ಕೂಡಲೇ ಗಮನ ಹರಿಸಿ ಸೇತುವೆ ಹತ್ತಿರ ಪ್ರವಾಹದಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಬಿದ್ದಿರುವ ತೆಗ್ಗು ಮುಚ್ಚಿಸಿ, ರಸ್ತೆ ಸುಧಾರಣೆ ಮಾಡಿಸಬೇಕು. ಗ್ರಾಮದಿಂದ ದಂಡೋತಿ ಕ್ರಾಸ್‌ವರೆಗೆ ರಸ್ತೆ ಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇಲ್ಲವಾದರೆ ಈ ಸಾಲಿನ ಮಳೆಗಾಲದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಜನರು ತೊಂದರೆ ಪಡಬೇಕಾಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ತೆಂಗಳಿ ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ ಮರಗೋಳ ತಮ್ಮ ಸ್ವಗ್ರಾಮ ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮರಗೋಳ ರಸ್ತೆ ಮತ್ತು ಸೇತುವೆ ಬಗ್ಗೆ ಗಮನ ಹರಿಸಿ ಜನರ ಆತಂಕ ದೂರ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry