ಸೋಮವಾರ, ನವೆಂಬರ್ 18, 2019
26 °C

ಅರಿವಿನ ಕಿಚ್ಚು ಹೊತ್ತಿಸುವ ಹೊತ್ತಿಗೆ

Published:
Updated:

ಗುಲ್ಬರ್ಗ: ಬದುಕನ್ನು ಹಸನಾಗಿಸುವ ವಿಚಾರಗಳಿಗೆ ಸಾವಿಲ್ಲ. ಉತ್ಕೃಷ್ಟ ಚಿಂತನೆಗಳನ್ನು ದಾಖಲಿಸುವ ಪುಸ್ತಕಗಳೂ ಸಾರ್ವಕಾಲಿಕ ಮನ್ನಣೆಗೆ ಭಾಜನವಾಗುತ್ತವೆ. ಉತ್ತಮ ಪುಸ್ತಕಗಳು ದಾರಿದೀವಿಗೆಗಳಾಗಿ ಮನುಕುಲವನ್ನು ಬೆಳಗಬಲ್ಲವು.ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಅಭಿವ್ಯಕ್ತಿ ಮಾಧ್ಯಮ ಹಲವು ಕವಲುಗಳನ್ನು ಕಂಡಿದೆ. ಅರಿವಿನ ಕಿಚ್ಚು ಹೊತ್ತಿಸುವ ಹೊತ್ತಿಗೆಯನ್ನು ಓದುವ ಪ್ರವೃತ್ತಿ ಜನರಲ್ಲಿ ಕಡಿಮೆಯಾದಂತೆ ಭಾಸವಾಗುತ್ತಿರುವ ಈ ಹೊತ್ತಿನಲ್ಲಿ ಅಕ್ಷರ ಪ್ರೇಮಿಗಳಿಗೆಲ್ಲ `ವಿಶ್ವ ಪುಸ್ತಕ ದಿನ'ದ ಸಂಭ್ರಮ.

ಬಿಸಿಲ ಧಗೆಯ ಏರಿಳಿತವೇನಿದ್ದರೂ `ಸೂರ್ಯನಗರಿ'ಯಲ್ಲಿ ಜನತೆಯ ಪುಸ್ತಕ ಪ್ರೀತಿಗೆ ಬರವೇನೂ ಇಲ್ಲ. ಪುಸ್ತಕಪ್ರಿಯರ ಸದಭಿರುಚಿಯನ್ನೇ ನಂಬಿರುವ ಪುಸ್ತಕ ಪ್ರಕಾಶನ ಸಂಸ್ಥೆಗಳು, ಮಾರಾಟಗಾರರಿಗೆ ಎಂಥ ಬಿಸಿಲಿನ ನಡುವೆಯೂ ತುಸು ತಂಗಾಳಿಯ ಹಿತಾನುಭವವಾಗುತ್ತಿದೆ. ಇಷ್ಟದ ಹೊತ್ತಿಗೆ ಅರಸಿ, ಪುಸ್ತಕದ ಅಂಗಡಿಯೆಡೆಗೆ ದಾಂಗುಡಿ ಇಡುತ್ತಿರುವ ಓದುಗರೇ ಮಾರಾಟಗಾರರ ಹಿತಾನುಭವಕ್ಕೆ ಕಾರಣ.ಪುಸ್ತಕ ಪ್ರದರ್ಶನ ಮತ್ತು ಮಾರಾಟ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಓದುಗರು ಪುಸ್ತಕಗಳನ್ನೂ, ಪುಸ್ತಕಗಳು ಓದುಗರನ್ನೂ ಪರಸ್ಪರ ಕೈ ಹಿಡಿದಿವೆ. ಹೌದು, ಪುಸ್ತಕ ಓದುವ ಸಂಸ್ಕೃತಿ ಇನ್ನೂ ಚಲನಶೀಲವಾಗಿದೆ. ಆದರೆ, ಓದುಗರ ಆಯ್ಕೆಯಲ್ಲಿ ಮಾತ್ರ ಗಮನಾರ್ಹ ಬದಲಾವಣೆಯಾಗಿದೆ.ಸುಮಾರು ಸಾವಿರದ ಐದುನೂರು ಪುಸ್ತಕಗಳನ್ನು ಪ್ರದರ್ಶನ ಹಾಗೂ ಮರಾಟಕ್ಕೆ ಸಜ್ಜುಗೊಳಿಸಿರುವ ಮಂಗಳೂರಿನ ಕರಾವಳಿ ಪ್ರಕಾಶನಕ್ಕೆ ಗುಲ್ಬರ್ಗದ ಓದುಗರ ಮೇಲೆ ನಂಬಿಕೆ ದಟ್ಟವಾಗಿದೆ. ಅಂತೆಯೇ ನಾಲ್ಕು ತಿಂಗಳಿಂದ `ಕನ್ನಡ ಭವನ'ದ ಆವರಣದಲ್ಲಿ ಮಳಿಗೆ ಆರಂಭಿಸಿರುವ ಪ್ರಕಾಶನ, ಇನ್ನೂ ಎರಡು ತಿಂಗಳು ತನ್ನ ಪ್ರದರ್ಶನ ಮತ್ತು ಮಾರಾಟವನ್ನು ಮುಂದುವರಿಸಲಿದೆ.`ಸಂಚಾರಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಎಲ್ಲೆಡೆಯೂ ಸೂಕ್ತ ಜಾಗ ದೊರೆಯುವುದಿಲ್ಲ. ಕಟ್ಟಡಗಳ ಬಾಡಿಗೆ ಹೆಚ್ಚಿರುವುದರಿಂದ ಖಾಲಿ ಜಾಗಗಳೇ ಇಂಥ ಮಳಿಗೆಗಳಿಗೆ ಸೂಕ್ತ' ಎನ್ನುವ ಕರಾವಳಿ ಪ್ರಕಾಶನದ ಪ್ರಶಾಂತ ಅವರಿಗೆ ಇಲ್ಲಿನ `ಕೊಂಡೋದುಗರ' ಕುರಿತು ಮೆಚ್ಚುಗೆ ಇದೆ.ಸಾಹಿತ್ಯದ ಗಂಭೀರ ಕೃತಿಗಳಿಗಿಂತ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿವೆ. ಇಂಗ್ಲಿಷ್ ಪುಸ್ತಕಗಳು ಮಾರಾಟದಲ್ಲಿ ಕನ್ನಡ ಪುಸ್ತಕಗಳಿಗಿಂತ ಮುಂದಿವೆ. `ಕೆಲ ವರ್ಷಗಳ ಹಿಂದೆ ಶೇ. 75 ರಷ್ಟು ಕನ್ನಡ ಪುಸ್ತಕಗಳು ಮಾರಾಟವಾಗುತ್ತಿದ್ದವು. ಈಗ ಇಂಗ್ಲಿಷ್ ಪುಸ್ತಕಗಳು ಶೇ. 50 ರಷ್ಟು ಮಾರಾಟ ಕಾಣುತ್ತಿವೆ' ಎಂದು ವಿವರಿಸುವ ಪ್ರಶಾಂತ, ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಹೆಚ್ಚುತ್ತಿರುವುದನ್ನು ಇದಕ್ಕೆ ತಳುಕು ಹಾಕುತ್ತಾರೆ.ಪ್ರತಿ ನವೆಂಬರ್‌ನಲ್ಲಿ ಶೇ. 15ರಿಂದ 20ರವರೆಗೆ ರಿಯಾಯಿತಿ ನೀಡುವ `ನವ ಕರ್ನಾಟಕ ಪ್ರಕಾಶನ' ಮಳಿಗೆಯಲ್ಲೂ ವ್ಯಕ್ತಿತ್ವ ವಿಕಸನ ಕೃತಿಗಳೇ ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ವಿಶೇಷವೆಂದರೆ ಗುಲ್ಬರ್ಗದ ಸುತ್ತಲಿನ ಗ್ರಾಮೀಣ ಪ್ರದೇಶದ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಪುಸ್ತಕ ಖರೀದಿಗೆ ನಿರಂತರವಾಗಿ ಭೇಟಿ ನೀಡುತ್ತಾರೆ. `ಶಹಾಪುರ, ಸುರಪುರ, ಶಹಾಬಾದ್, ಕೆಂಭಾವಿ ಕಡೆಯಿಂದ ಜನ ಪುಸ್ತಕ ಖರೀದಿಗೆ ಬರ‌್ತಾರೆ. ಅವರಲ್ಲಿ ಹಲವರು ರೈತಾಪಿ ಕೆಲಸ ಮಾಡುವವರು. ತಾವು ಕೆಲಸ ಮಾಡುವ ಹೊಲಕ್ಕೆ ಪುಸ್ತಕ ಓಯ್ದು ಓದುತ್ತಾರೆ. ಸದಭಿರುಚಿಯ ಓದುಗರು ಎಲ್ಲ ವರ್ಗದಲ್ಲೂ ಇದ್ದಾರೆ' ಎಂಬುದು ಚಿತ್ರಕಾಂತ ಹಾಗೂ ರವಿಚಂದ್ರ ಅವರ ಅಭಿಪ್ರಾಯ.ಹಲವು ಸಂಸ್ಥೆಗಳು ಆನ್‌ಲೈನ್ ಮೂಲಕ ಪುಸ್ತಕ ಮಾರಾಟ ಆರಂಭಿಸಿರುವುದರಿಂದ ಸಾಂಪ್ರದಾಯಿಕ ಮಳಿಗೆಗಳಲ್ಲಿ ಮಾರಾಟ ತುಸು ಕಡಿಮೆಯಾಗಿದೆ. ಅಂಥ ವ್ಯವಸ್ಥೆಯಲ್ಲಿ ಬೇಕಾದ ಪುಸ್ತಕಗಳು ಓದುಗರ ಮನೆಬಾಗಿಲಿಗೇ ಬಂದು ತಲುಪುತ್ತವೆ. ಕುಳಿತಲ್ಲಿಂದಲೇ ಖರೀದಿ ಸಾಧ್ಯವಾಗುತ್ತದೆ. ಅಲ್ಲದೇ ಬೆಲೆಯೂ ಕಡಿಮೆ ಇರುತ್ತದೆ' ಎನ್ನುತ್ತಾರೆ ಮತ್ತೊಬ್ಬ ಪುಸ್ತಕ ವ್ಯಾಪಾರಿ ವಿಶ್ವನಾಥ.ಸಾಹಿತ್ಯದ ವಿದ್ಯಾರ್ಥಿಗಳಲ್ಲಿಯೂ ಪುಸ್ತಕ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆಯೇ ಎಂಬ ಪ್ರಶ್ನೆಗೆ, `ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಆದರೆ, ಅದು ನಿಂತು ಹೋಗಿಲ್ಲ' ಎಂದವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಡೋಣೂರ.`ಕೈಯಲ್ಲಿನ ಪುಸ್ತಕವನ್ನು ಇವತ್ತು ಕಂಪ್ಯೂಟರ್, ಇಂಟರ್‌ನೆಟ್ ಸೌಲಭ್ಯಗಳು ಕಸಿದುಕೊಳ್ಳುತ್ತಿವೆ. ಆದರೆ, ವಿದ್ಯಾರ್ಥಿಗಳು, ಪಾಲಕರು ಈ ಬದಲಾವಣೆಗೆ ತೆರೆದುಕೊಳ್ಳಬೇಕಾಗಿದೆ' ಎನ್ನುವ ಅವರು, `ಕೈಯಲ್ಲಿ ಪುಸ್ತಕ ಹಿಡಿದು, ಅಲ್ಲಿನ ಅಕ್ಷರಗಳೊಂದಿಗೆ ಮುಖಾಮುಖಿಯಾಗುವ ರೋಮಾಂಚನಕಾರಿ ಅನುಭವ ಇಂಟರ್‌ನೆಟ್‌ನಲ್ಲಿ ದಕ್ಕದು' ಎನ್ನುತ್ತಾರೆ. ಹೌದು, ನಮ್ಮ `ಆ ಓದು' ನೀಡುವ ಮಧುರ ಅನುಭವವನ್ನು `ಇ-ಓದು' ನೀಡಿತಾದರೂ ಹೇಗೆ?

ಪ್ರತಿಕ್ರಿಯಿಸಿ (+)