ಗುರುವಾರ , ನವೆಂಬರ್ 21, 2019
22 °C

ವಾಯು ವೈಪರೀತ್ಯ: ಹಾರದ ಪ್ಯಾರಾಗ್ಲೈಡರ್

Published:
Updated:

ಗುಲ್ಬರ್ಗ: ನಗರದ ಶ್ರಿನಿವಾಸ ಸರಡಗಿ ವಿಮಾನ ನಿಲ್ದಾಣದಿಂದ ಮಂಗಳವಾರ ಮುಂಜಾನೆ ಹಾರಬೇಕಿದ್ದ ಪ್ಯಾರಾಗ್ಲೈಡರ್ ಮೇಲಕ್ಕೇರಲೇ ಇಲ್ಲ. ಇದರಿಂದಾಗಿ ಮತದಾರರಲ್ಲಿ ಮತದಾನದ ಹಕ್ಕು ಕುರಿತು ಜಾಗೃತಿ ಮೂಡಿಸುವ ಆಶಯ ಈಡೇರಲಿಲ್ಲ.ಆಂದೋಲನದ ನಿಮಿತ್ತ ಪ್ಯಾರಾಗ್ಲೈಡರ್ ಹಾರಾಟದಿಂದ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಗೆಂದು ಜಿಲ್ಲಾ ಪಂಚಾಯಿತಿ ಸಿಇಒ ಪಲ್ಲವಿ ಅಕುರಾತಿ ಸ್ಥಳದಲ್ಲಿದ್ದರು. ಆದರೆ ಪ್ಯಾರಾಗ್ಲೈಡರ್ ವಾಯು ವೈಪರೀತ್ಯ ಇರುವುದರಿಂದ ಮೇಲಕ್ಕೇರಲೇ ಇಲ್ಲ.ಬಳಿಕ ಪಲ್ಲವಿ ಮಾತನಾಡಿ, ಮೇ 5ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಧರ್ಮ, ಜಾತಿ, ಮತ, ಭಾಷೆ ಅಥವಾ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಲು ಮತದಾರರನ್ನು ವಿನಂತಿಸಿದರು. ಮೂರು ಚಕ್ರಗಳನ್ನು ಒಳಗೊಂಡ ಸೈಕಲ್ ಮಾದರಿಯ ವಾಹನ ಹಾಗೂ ಅದರ ಮೇಲಿಂದ ಪ್ಯಾರಾಚೂಟನ್ನು ಒಳಗೊಂಡ 450 ಕೆಜಿ ಭಾರದ ಪ್ಯಾರಾಗ್ಲೈಡಿಂಗ್ ನಗರ ಮತ್ತು ಸುತ್ತಲಿನ ಗ್ರಾಮಗಳ ಆಗಸದಲ್ಲಿ ಸಂಚರಿಸಿ ಮತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ತಯಾರಾಗಿತ್ತು, ಅದರ ಹಾರಾಟ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಪ್ಯಾರಾಗ್ಲೈಡಿಂಗ್ ತಂಡದ ಮುಖ್ಯಸ್ಥ ನಿಕೊಲಾಸ್ ಸಿಂಗ್ ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ ಇದ್ದರು.

ಪ್ರತಿಕ್ರಿಯಿಸಿ (+)