ಗುರುವಾರ , ನವೆಂಬರ್ 21, 2019
20 °C

`ಚುನಾವಣೆ: ವ್ಯಾಪಕ ಬಂದೋಬಸ್ತ್'

Published:
Updated:

ಗುಲ್ಬರ್ಗ: ಗುಲ್ಬರ್ಗ ಈಶಾನ್ಯ ವಲಯದ ವ್ಯಾಪ್ತಿಯಲ್ಲಿ ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಯನ್ನು ಮುಕ್ತ, ಪಾರದರ್ಶಕ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಹಾಗೂ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕ ಮಹ್ಮದ್ ವಜೀರ್ ಅಹ್ಮದ್ ತಿಳಿಸಿದ್ದಾರೆ.ಮತಗಟ್ಟೆಗಳು: ಈಶಾನ್ಯ ವಲಯದ ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲಿಲ್ಲಿ ಒಟ್ಟು 7,074

ಮತಗಟ್ಟೆಗಳಿರುತ್ತವೆ.  ಅವುಗಳಲ್ಲಿ 1038 ಮತಗಟ್ಟೆಗಳು ಅತಿ ಸೂಕ್ಷ್ಮ, 1557 ಸೂಕ್ಷ್ಮ ಮತ್ತು 4479 ಸಾಮಾನ್ಯ ಮತಗಟ್ಟೆಗಳಿರುತ್ತವೆ.ಸಿಬ್ಬಂದಿ ನಿಯೋಜನೆ: ಗೃಹರಕ್ಷಕ ದಳ ಸೇರಿದಂತೆ ಒಟ್ಟು 8,000 ಪೊಲೀಸ್ ಸಿಬ್ಬಂದಿಯನ್ನು ಈಶಾನ್ಯ ವಲಯದ ಎಲ್ಲ ಮತಗಟ್ಟೆಗಳಿಗೆ ನಿಯೋಜಿಸಲಾಗುವುದು. ನಾಗರಿಕ ಪೊಲೀಸ್ ಸಿಬ್ಬಂದಿಯೊಂದಿಗೆ ಕೇಂದ್ರೀಯ ಅರೆ ಸೇನಾ ಪಡೆಯ ಅರ್ಧ ತುಕಡಿ ಸಿಬ್ಬಂದಿಯನ್ನು ಸೂಕ್ಷ್ಮ, ಅತೀಸೂಕ್ಷ್ಮ ಹಾಗೂ ಮಹತ್ವದ ಮತಗಟ್ಟೆಗಳಿಗೆ ನಿಯೋಜಿಸಲಾಗುತ್ತದೆ. ಈ ಕುರಿತು ಈಶಾನ್ಯ ವಲಯಕ್ಕೆ ಒಟ್ಟು 65 ಸಿ.ಆರ್.ಪಿ.ಎಫ್., ಬಿ.ಎಸ್.ಎಫ್., ಎಸ್.ಎಸ್.ಬಿ. ಪಡೆಗಳನ್ನು ಒಳಗೊಂಡ ಕೇಂದ್ರೀಯ ಅರೆ ಸೇನಾ ಪಡೆಯ ಕಂಪನಿಗಳು ಹಂಚಿಕೆ ಮಾಡಲಾಗಿದೆ. ಅಲ್ಲದೆ ಕೆ.ಎಸ್.ಆರ್.ಪಿ.ಯ 16 ಪ್ಲಟೂನ್‌ಗಳನ್ನು  ವಲಯದ ಎಲ್ಲ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಅಲ್ಲದೆ ಜಿಲ್ಲಾ ಸಶಸ್ತ್ರ ಪಡೆಯ 50 ತುಕಡಿಗಳನ್ನು ಸಹ ವಲಯದಲ್ಲಿ ನಿಯೊಜಿಸಲಾಗಿರುತ್ತದೆ ಎಂದಿದ್ದಾರೆ.ಪ್ರತಿ 15-20 ಮತಗಟ್ಟೆಗಳಿಗೆ ಒಂದು ಪೊಲೀಸ್ ಸಂಚಾರಿ ತುಕಡಿ ನಿಯೋಜಿಸಲಾಗುತ್ತದೆ. ಈ ತುಕಡಿಯು ಪೊಲೀಸ್ ಅಧಿಕಾರಿ ಮತ್ತು ಅರೆ ಸೇನಾಪಡೆ ಸಿಬ್ಬಂದಿಯನ್ನು ಒಳಗೊಂಡಿರುತ್ತವೆ. ಪ್ರತಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಡಿವೈ.ಎಸ್.ಪಿ. ಅಥವಾ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ಮೇಲ್ವಿಚಾರಣಾ ಅಧಿಕಾರಿಗಳನ್ನಾಗಿ ನಿಯೋಜಿಸಲಾಗುತ್ತದೆ.ಈಶಾನ್ಯ ವಲಯದಲ್ಲಿ 5 ಜನ ಪೊಲೀಸ್ ಅಧೀಕ್ಷಕರು, 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 15 ಪೊಲೀಸ್ ಉಪ ಅಧೀಕ್ಷಕರು, 64 ಪೊಲೀಸ್ ನಿರೀಕ್ಷಕರು, 170 ಪೊಲೀಸ್ ಉಪ-ನಿರೀಕ್ಷಕರು ಮತ್ತು 405 ಸಹಾಯಕ ಪೊಲೀಸ್ ಉಪ-ನಿರೀಕ್ಷಕರನ್ನು ಚುನಾವಣಾ ಕರ್ತವ್ಯಕ್ಕಾಗಿ ಉಪಯೋಗಿಸಲಾಗುತ್ತಿದೆ. ಚುನಾವಣೆ ಕರ್ತವ್ಯಕ್ಕಾಗಿ ವಿಶೇಷ ಘಟಕಗಳಾದ ಡಿ.ಸಿ.ಆರ್.ಇ., ಅಬಕಾರಿ ಮತ್ತು ಲಾಟರಿ ನಿಷೇಧ ದಳ ಘಟಕ, ಜೆಸ್ಕಾಂ ಘಟಕಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹಾಗೂ  ಅರಣ್ಯ ಘಟಕದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.ಚೆಕ್ ಪೋಸ್ಟ್: ಈ ವಲಯದಲ್ಲಿ ಒಟ್ಟು 83 ಚೆಕ್‌ಪೋಸ್ಟ್‌ಗಳಿದ್ದು, ಅವು ಕಾರ್ಯಪ್ರವೃತ್ತರಾಗಿರುತ್ತವೆ. ಪೊಲೀಸ್ ಅಧಿಕಾರಿಗಳೊಂದಿಗೆ ಕೇಂದ್ರೀಯ ಅರೆ ಸೇನಾಪಡೆ ಸಿಬ್ಬಂದಿಯನ್ನು ಈ ಚೆಕ್‌ಪೋಸ್ಟ್‌ಗಳಿಗೆ ನಿಯೋಜಿಸಲಾಗಿದೆ. ಸರಹದ್ದುಗಳಿಂದ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಪ್ರವೇಶ, ಬಟ್ಟೆ ಮತ್ತು ಹಣ ಸಾಗಾಟ ನಿಷೇಧಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.  ವಿಧಾನ ಸಭೆ ಚುನಾವಣೆ ಸಮಿಪಿಸುತ್ತಿದ್ದಂತೆ ಚೆಕ್‌ಪೋಸ್ಟ್ ಚೆಕ್ಕಿಂಗ ತೀವ್ರಗೊಳಿಸಲಾಗುತ್ತದೆ.ರೌಡಿ ಶೀಟ್ಸ್: ವಲಯದಲ್ಲಿ ಒಟ್ಟು 1,652 ರೌಡಿ ಶೀಟೆಡ್ ವ್ಯಕ್ತಿಗಳಿರುತ್ತಾರೆ. ಅವರುಗಳನ್ನು ಗುರುತಿಸಿ ಅವರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅವರ ಮೇಲೆ ಮುನ್ನೆಚ್ಚರಿಕೆ ಕ್ರಮವಾಗಿ ಕಲಂ 107 ಸಿಆರ್.ಪಿ.ಸಿ. ಪ್ರಕಾರ ಕೈಗೊಂಡು ಒಳ್ಳೆಯ ನಡತೆಗಾಗಿ ತಾಲ್ಲೂಕು ದಂಡಾಧಿಕಾರಿಗಳಿಂದ ಮುಚ್ಚಳಿಕೆ ಪಡೆಯಲಾಗಿದೆ.ಆಯುಧಗಳು: ವಲಯದ ಒಟ್ಟು 5,114 ಆಯುಧ ಲೈಸೆನ್ಸ್‌ದಾರರು ಆಯುಧಗಳನ್ನು ಹೊಂದಿದ್ದು, ಅವುಗಳಲ್ಲಿ 4,994 ಆಯುಧಗಳನ್ನು ಆಯುಧದಾರರಿಂದ ಜಪ್ತಿ ಪಡಿಸಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)