ಶನಿವಾರ, ಏಪ್ರಿಲ್ 17, 2021
32 °C

ಬಸವೇಶ್ವರ ಆಸ್ಪತ್ರೆಯಲ್ಲಿ ಹೊಸ ಮೈಲಿಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ನಗರದ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಬಸವೇಶ್ವರ ಸಾರ್ವಜನಿಕ ಆಸ್ಪತ್ರೆಯು ಏ. 8ರಿಂದ ಉಚಿತ ತಪಾಸಣೆ ಹಾಗೂ ಉಚಿತ ಚಿಕಿತ್ಸೆಯ ವಿಶೇಷ ಯೋಜನೆಯನ್ನು ಆರಂಭಿಸುತ್ತಿದೆ. ಇದೊಂದು ಪ್ರಮುಖ ಮೈಲಿಗಲ್ಲು ಆಗಲಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶಿಲ್ ಜಿ.ನಮೋಶಿ ತಿಳಿಸಿದ್ದಾರೆ.ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಚಿಕಿತ್ಸೆಯ ಪ್ರಥಮ ಮತ್ತು ದ್ವಿತೀಯ ಹಂತಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ವೈದ್ಯಕೀಯ ಸೇವೆಗಳಲ್ಲಿ ವಿಶೇಷ ತಜ್ಞರು, ವಿಶೇಷ ಆಸ್ಪತ್ರೆಗಳ ಸಂಖ್ಯೆಗಳು ಹೆಚ್ಚಾಗಿವೆ. ರೋಗ ಜಾಗೃತಿ ಮತ್ತು ಮಾಹಿತಿಗಾಗಿಯೂ ಹಲವಾರು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಆದರೆ ಅತ್ಯಂತ ತುರ್ತು ಪರಿಸ್ಥಿತಿ ಮತ್ತು ಪ್ರಾರಂಭಿಕ ಪರಿಸ್ಥಿತಿಗಳ ನಡುವಿನ ಕಂದರ ಹೆಚ್ಚಾಗುತ್ತಿದೆ. ಈ ಎರಡೂ ಹಂತಗಳ ನಡುವೆ ಸೇತುಬಂಧ ಕಲ್ಪಿಸಲು ಸಾಮಾನ್ಯ ತಪಾಸಣೆಗಳನ್ನುಉಚಿತ ಮಾಡಲಾಗಿದೆ ಎಂದು ಎಂ.ಆರ್.ವೈದ್ಯಕೀಯ ಕಾಲೇಜಿನ ಡೀನ್ ಮಲ್ಲಿಕಾರ್ಜುನ್ ಭಂಡಾರಿ ಹೇಳುತ್ತಾರೆ.ಸಾಮಾನ್ಯ ಜನರಿಗೆ ಆರೋಗ್ಯ ಮಾಹಿತಿಯೊಂದಿಗೆ ನಿಗದಿತ ಅವಧಿಯಲ್ಲಿ ತಪಾಸಣೆ, ಮುಂಜಾಗೃತೆ ಬಗ್ಗೆ ಹೆಚ್ಚಿನ ಒಲವು ಮೂಡಿಸಲು ಈ ಕ್ರಮವು ಸಹಾಯಕವಾಗಲಿದೆ. ಮೊದಲು ಮೂವತ್ತರ ಮಹಿಮೆ, ನಾಲ್ವತ್ತರ ಮಹಿಮೆ ಎಂದು ವಯೋನಿರ್ಧಾರಿತ ರೋಗಗಳಿದ್ದವು. ಆದರೆ ಬದಲಾದ ಜೀವನ ಶೈಲಿಗೆ ಅನುಗುಣವಾಗಿ ಎಲ್ಲ ವಯೋಮಿತಿಯನ್ನೂ ಮೀರಿ ಸ್ವಸ್ಥ ದೇಹದ ಕೋಟೆಗೆ ರೋಗಗಳು ಲಗ್ಗೆ ಇಟ್ಟಿವೆ. ಆಗಿಂದಾಗ್ಗೆ ತಪಾಸಣೆಗೆ ಒಳಗಾಗುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳುತ್ತಾರೆ.ಆದರೆ ಜನರಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಇಲ್ಲ. ರೋಗಸ್ಥಿತಿಯ ಆರಂಭಿಕ ಲಕ್ಷಣಗಳು ಕಂಡಾಗ ನಿರ್ಲಕ್ಷ್ಯ ವಹಿಸುತ್ತಾರೆ. ಅಥವಾ ಯಾವುದಾದರೂ ‘ಕಾಡಾಟ’ ಇರಬಹುದು ಎಂದು ಮಂತ್ರ, ಚೀಟಿಗಳ ಮೊರೆ ಹೋಗುತ್ತಾರೆ. ಅಥವಾ ಹಣದ ಕೊರತೆಯಿಂದಾಗಿ ವೈದ್ಯರು ಸಲಹೆ ನೀಡಿದ ತಪಾಸಣೆಗೆ ಮುಂದಾಗುವುದೇ ಇಲ್ಲ. ಈ ಎಲ್ಲ ಕಾರಣಗಳಿಂದಲೂ ರೋಗ ಉಲ್ಬಣಗೊಂಡಾಗಲೇ ವೈದ್ಯರ ಬಳಿ ಬರುತ್ತಾರೆ. ಇದರಿಂದಾಗಿ ನೋವು ಹಾಗೂ ಸಾವಿನ ದರಗಳಲ್ಲಿ ಹೆಚ್ಚಳ ಕಂಡುಬರುತ್ತದೆ.ಸಾವು ಹಾಗೂ ನೋವುಗಳ ದರದಲ್ಲಿ ಇಳಿಕೆಯನ್ನು ಉಂಟು ಮಾಡುವುದೇ ಈ ಪ್ರಾಥಮಿಕ ಹಂತದ ತಪಾಸಣೆ ಹಾಗೂ ಚಿಕಿತ್ಸೆಯ ಯೋಜನೆಯ ಉದ್ದೇಶವಾಗಿದೆ ಎನ್ನುತ್ತಾರೆ ಡಾ.ದಿಲೀಪ್ ರಾಂಪುರೆ ಅವರು.ಅಗತ್ಯವಿದ್ದವರಿಗೆ ಕೆಲವು ಶಸ್ತ್ರ ಚಿಕಿತ್ಸೆಗಳನ್ನೂ ಸ್ಪರ್ಧಾತ್ಮಕ ದರದಲ್ಲಿ ನೆರವೇರಿಸಲಾಗುವುದು. ವೈದ್ಯಕೀಯ ಸೇವಾಶುಲ್ಕವನ್ನು ಕಡಿತಗೊಳಿಸಲಾಗುವುದು. ಇನ್ನು ಕೆಲವಕ್ಕೆ ಅಗತ್ಯದ ಸಲಕರಣೆಗಳ ಶುಲ್ಕವನ್ನು ಮಾತ್ರ ರೋಗಿಗಳೇ ಭರಿಸಬೇಕಾಗುವುದು. ಉಳಿದಂತೆ ಸೇವಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು. ಸಾಧ್ಯವಿದ್ದಷ್ಟೂ ಕೈಗೆಟಕುವ ದರದಲ್ಲಿ ಜನರಿಗೆ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳುವುದೇ ಯೋಜನೆಯ ಗುರಿಯಾಗಿದೆ. ಇಂಥ ಮಹತ್ವದ ತೀರ್ಮಾನ ತೆಗೆದುಕೊಳ್ಳುವಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯಕೀಯ ವೃಂದವೂ ಮಹತ್ವದ ನೈತಿಕ ಬೆಂಬಲ ನೀಡಿದೆ.ಬೀದರ್, ಯಾದಗಿರಿ, ರಾಯಚೂರು, ಗುಲ್ಬರ್ಗ ಜಿಲ್ಲೆಗಳಿಗೆ ಸೂಪರ್ ಸ್ಪೆಷಾಲಿಟಿ ಗುಣಮಟ್ಟದ ಸೇವೆಗೆ ಶ್ರಮಿಸಲಾಗುವುದು ಎಂಬ ಭರವಸೆಯ ನುಡಿಗಳನ್ನು ಶಶಿಲ್ ಜಿ.ನಮೋಶಿ ತಿಳಿಸುತ್ತಾರೆ.ಈ ಚಿಕಿತ್ಸೆಯನ್ನು ಶುಕ್ರವಾರ ಪ್ರಾದೇಶಿಕ ಆಯುಕ್ತ ಡಾ.ರಜನೀಶ್ ಗೋಯಲ್ ಉದ್ಘಾಟಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.