ಶನಿವಾರ, ಮೇ 8, 2021
18 °C

ಬೀಜ, ಗೊಬ್ಬರಕ್ಕೆ ಆದ್ಯತೆ: ಡಿಸಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `ಜಿಲ್ಲೆಯಲ್ಲಿ ಮಳೆ ಸುರಿಯಲು ಆರಂಭಿಸಿದ್ದು, ರೈತ ಸಂಪರ್ಕ ಕೇಂದ್ರ ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ಪೂರೈಸಬೇಕು' ಎಂದು ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ್     ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ನಡೆದ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದರು. `ಈ ಕಾರ್ಯ ಸುಸೂತ್ರವಾಗಿ ನಡೆಯಲು ಜಿಲ್ಲೆಯ 32 ರೈತ ಸಂಪರ್ಕ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಎಲ್ಲ ಅಧಿಕಾರಿಗಳು ಮುಂದಿನ ಎರಡು ತಿಂಗಳು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆ ಮತ್ತು ಇತರ ಕೃಷಿ ಚಟುವಟಿಕೆಗಳತ್ತ ಗಮನಹರಿಸಬೇಕು. ಈ ಹಂತದಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ. ರಜೆ ಹಾಕುವಂತಿಲ್ಲ' ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.`ಕೃಷಿ ಸಂಬಂಧಿಸಿದ ಸರ್ಕಾರಿ ಯೋಜನೆಗಳ ಬಗ್ಗೆ  ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತರಬೇಕು.  ಇಲಾಖೆ ಮತ್ತು ಖಾಸಗಿ ವಿತರಕರ ಬಳಿ ಲಭ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪ್ರಮಾಣವನ್ನು  ರೈತರ ಗಮನಕ್ಕೆ ತರಬೇಕು. ಖಾಸಗಿ ಬಿತ್ತನೆ ಬೀಜ ಖರೀದಿಸುವ ಹಂತದಲ್ಲಿ ಹಳೇ ಸಂಗ್ರಹ ಹಾಗೂ ಹೊಸ ಸಂಗ್ರಹ, ದರ ನಿಗದಿ ಬಗ್ಗೆ ಸಾಕಷ್ಟು ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ದರ ನಿಗದಿ ಮಾಡಿ ಪ್ರಕಟಿಸಬೇಕು' ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಳತ್ಕರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.`ಈ ಎರಡು ತಿಂಗಳು ಕೃಷಿ ಸಂಬಂಧಿತ ಮಾರುಕಟ್ಟೆ ಚಟುವಟಿಕೆಗಳಲ್ಲಿ ಅಕ್ರಮ ನಡೆಯದಂತೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಎಚ್ಚರ ವಹಿಸಬೇಕು. ಕೃಷಿ ಸಂಬಂಧಿತ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು' ಎಂದು ಆದೇಶಿಸಿದರು. `ಜಿಲ್ಲೆಯಲ್ಲಿ 32 ರೈತ ಸೇವಾ ಕೇಂದ್ರ ಹಾಗೂ 145 ವ್ಯವಸಾಯ ಸೇವಾ ಸಹಕಾರ ಸಂಘಗಳಿವೆ. ರೈತರಿಗೆ ದರದಲ್ಲಿ ಬೀಜ ಮತ್ತು ಗೊಬ್ಬರ ವಿತರಿಸಲಾಗುವುದು. ಎಲ್ಲಿಯೂ ವ್ಯತ್ಯಯ ಆಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಸದ್ಯ ರಾಜ್ಯ ಸಹಕಾರ ಮಾರಾಟ ಮಂಡಳದಲ್ಲಿ 30,507 ಮೆಟ್ರಿಕ್ ಟನ್ ಹಾಗೂ ಖಾಸಗಿಯವರಲ್ಲಿ 8,356 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಹಾಗೂ ಮುಂಗಾರು ಹಂಗಾಮಿಗೆ 20,726 ಕ್ವಿಂಟಲ್ ಬೀಜ ಅವಶ್ಯಕತೆ ಇದೆ. ಸಾಕಷ್ಟು ದಾಸ್ತಾನಿದೆ. ಗೊಬ್ಬರದ ಕೊರತೆ ಇಲ್ಲ. ಮೇ ಕೊನೆ ವಾರದಿಂದ ಈತನಕ ಜಿಲ್ಲೆಯಲ್ಲಿ 91.83 ಮಿ.ಮೀ ಮಳೆಯಾಗಿದೆ' ಎಂದು ವಿವರ ನೀಡಿದರು.ಕೃಷಿ ಇಲಾಖೆ ಅಧಿಕಾರಿ ಬಳತ್ಕರ್ ಮಾತನಾಡಿ `ಮುಂಗಾರಿನಲ್ಲಿ 5.72 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಇದೆ. ಈ ಪೈಕಿ 5.16 ಲಕ್ಷ ಹೆಕ್ಟೇರ್ ಖುಷ್ಕಿ, 0.54 ಲಕ್ಷ ಹೆಕ್ಟೇರ್ ನೀರಾವರಿ ಭೂಮಿ ಒಳಗೊಂಡಿದೆ' ಎಂದರು.ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಶಂಕರ ಶೆಟ್ಟಿ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಲ್ಲವಿ ಆಕುರಾತಿ, ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ, ಸ್ಥಾಯಿ ಸಮಿತಿ ಸದಸ್ಯೆ ಅನ್ನಪೂರ್ಣ ಪಾಟೀಲ, ಹೇಮಾವತಿ ನಿಂಗಣ್ಣ, ಸೌಮ್ಯ ರಾಮಚಂದ್ರ, ಅನ್ನಪೂರ್ಣ ಅರುಣ್‌ಕುಮಾರ್ ಹಾಗೂ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.