ಭಾನುವಾರ, ಮೇ 16, 2021
22 °C
ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ದಿನ ಇಂದು

ಕಮರಿದ ಬಾಲ್ಯ- ಕೈ ಹಿಡಿವ ಕಾಯಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಪ್ರಕಾರ ಜಿಲ್ಲೆಯಲ್ಲಿ ಸುಮಾರು ನಾಲ್ಕು ಸಾವಿರ ಬಾಲಕಾರ್ಮಿಕರು ಇದ್ದಾರೆ.ಇಟ್ಟಂಗಿ ಭಟ್ಟಿ, ಹೋಟೆಲ್ ಕೆಲಸ, ಕಾರ್ಖಾನೆ ಕೆಲಸ, ಅಂಗಡಿ, ನಿರ್ಮಾಣ ಕಾರ್ಯ ಮತ್ತಿತರೆಡೆ ಬಲವಂತದ ದುಡಿಮೆ ಮಾಡುತ್ತಿದ್ದಾರೆ. ಅಜ್ಞಾನ, ಅನಕ್ಷರತೆ, ಆರ್ಥಿಕ ಬಡತನದ ಪರಿಣಾಮ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿವೆ ಎನ್ನುತ್ತವೆ ಎನ್‌ಜಿಒ ಸಮೀಕ್ಷೆಗಳು.`ಜಿಲ್ಲೆಯಲ್ಲಿ 2011-12ರಲ್ಲಿ 9 ಪ್ರಕರಣಗಳು ಪತ್ತೆಯಾಗಿದ್ದು, 10 ಮಕ್ಕಳನ್ನು ಮುಕ್ತಿಗೊಳಿಸಲಾಗಿತ್ತು. ಈ ಪೈಕಿ 4 ಇತ್ಯರ್ಥಗೊಂಡಿದ್ದು, ಮಾಲೀಕರಿಂದ ಒಟ್ಟು 40 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.  2012-13ರಲ್ಲಿ 4 ಪ್ರಕರಣಗಳು ಪತ್ತೆಯಾಗಿದ್ದು, ನ್ಯಾಯಾಲಯದ ಮುಂದಿವೆ' ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ. ಸಿದ್ದಲಿಂಗಪ್ಪ ತಿಳಿಸಿದರು.`ದಾಳಿ ನಡೆಸಿ ವಶಕ್ಕೆ ಪಡೆದುಕೊಂಡ ಮಕ್ಕಳನ್ನು ಬಾಲಕಾರ್ಮಿಕ ಪುನರ್ವಸತಿ ಕೇಂದ್ರಗಳಿಗೆ ಬಿಡಲಾಗುತ್ತದೆ. ಅಲ್ಲಿ 2 ವರ್ಷ ಉಚಿತ ಊಟ, ವಸತಿ ಮತ್ತು ಶಿಕ್ಷಣ ನೀಡಲಾಗುತ್ತದೆ. ಆ ಬಳಿಕ ಶಾಲೆಗೆ ಸೇರಿಸಲು ಬೇಕಾದ ವ್ಯವಸ್ಥೆ ಕಲ್ಪಿಸಿ, ಪೋಷಕರ ಬಳಿ ಬಿಡಲಾಗುತ್ತದೆ.ಈ ರೀತಿ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಿ ಪಡೆದು ಮತ್ತೆ ಶಾಲೆಗೆ ತೆರಳಿದ ಸುಮಾರು ಎರಡು ಸಾವಿರಕ್ಕೂ ಅಧಿಕ ಮಕ್ಕಳು ಇದ್ದಾರೆ. ಪ್ರಸ್ತುತ ಸುಮಾರು 100 ಮಕ್ಕಳು ಪುನರ್ವಸತಿ ಶಾಲೆಗಳಲ್ಲಿ ಇದ್ದಾರೆ ' ಎಂದರು.ಕಾಯಿದೆ: ಕಾಯಿದೆ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗುವನ್ನು  ದುಡಿಮೆಗಳಲ್ಲಿ ಬಳಸುವುದನ್ನು ನಿಷೇಧಿಸಲಾಗಿದೆ. ಈ  ರೀತಿಯ ಯಾವುದೇ ಉಲ್ಲಂಘನೆಯು ಕಾನೂನಿಗೆ ಅನುಸಾರವಾಗಿ ದಂಡನೀಯ ಅಪರಾಧ. ದಂಡ: ಕಾಯಿದೆ ಅನುಸಾರ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಇರಿಸಿಕೊಂಡರೆ ಮಾಲೀಕನಿಗೆ 10ರಿಂದ 20 ಸಾವಿರ ರೂಪಾಯಿ ತನಕ ದಂಡ ಹಾಗೂ 3 ತಿಂಗಳಿನಿಂದ 1 ವರ್ಷದ ತನಕ ಜೈಲು ಶಿಕ್ಷೆಯನ್ನು ವಿಧಿಸಬಹುದು. ಮಗುವಿನ ಭವಿಷ್ಯಕ್ಕಾಗಿ 20 ಸಾವಿರ ರೂಪಾಯಿ ಹೆಚ್ಚು ದಂಡ ವಸೂಲಿ ಮಾಡಬಹುದು.ಪುನರ್ವಸತಿ: ಬಾಲಕಾರ್ಮಿಕ ಮಕ್ಕಳನ್ನು ಮುಕ್ತಿಗೊಳಿಸಿದ ಬಳಿಕ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗುತ್ತದೆ. ಅಂತಹ 10 ಕೇಂದ್ರಗಳು ಜಿಲ್ಲೆಯಲ್ಲಿವೆ. ಗುಲ್ಬರ್ಗ ವಿವೇಕ ನಗರದ ವಿಶ್ವಸೇವಾ ಮಿಶನ್, ತಾರ್‌ಫೈಲ್ ಅಂಬಿಕಾ ನಗರದ  ಆಲ್‌ಫಾತಿಮಾ, ಅವರಾದ ಬಿ. ದೇವಾಜಿ ನಾಯಕ ಶಿಕ್ಷಣ ಸಂಸ್ಥೆ, ಆಲ್‌ಫರ‌್ಹಾ ಮಹಿಳಾ ಮಂಡಳಿ, ಅಫಜಲಪುರದ ಕಿರಣ್ ರೂರಲ್ ರಿಕನ್ಸ್‌ಸ್ಟ್ರಕ್ಷನ್ ಸೊಸೈಟಿ, ಆಳಂದದ ವಿಶ್ವಭಾರತಿ, ಚಿಂಚೋಳಿ ಕೊಂಚಾವರಂನ ಸರ್ಡ್ಸ್ ಸಂಸ್ಥೆ, ಜೇವರ್ಗಿ ಖಾಜಾಕಾಲೊನಿಯ ನೆಲ್ಸನ್ ಮಂಡೇಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಸೇಡಂನ ಹಿಡಾ ಸಂಸ್ಥೆ.ಬದಲಿ ವ್ಯವಸ್ಥೆ: ಬಾಲ ಕಾರ್ಮಿಕ ಪದ್ಧತಿಯಲ್ಲಿ ಸಿಕ್ಕಿದ ಮಕ್ಕಳ ಮಾಲೀಕರಿಂದ 20 ಸಾವಿರ ರೂಪಾಯಿ ದಂಡ ವಸೂಲು ಮಾಡಲಾಗುವುದು. ಅದಕ್ಕೆ ಸರ್ಕಾರ ನೀಡುವ 5 ಸಾವಿರ ರೂಪಾಯಿ ಸೇರಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗುತ್ತದೆ.ಈ ಹಣದಿಂದ ಬರುವ ಬಡ್ಡಿಯನ್ನು ಅಸಹಾಯಕ ಪೋಷಕರಿಗೆ ನೀಡಲಾಗುತ್ತದೆ.

14 ವರ್ಷದ ಬಳಿಕ ಈ ಹಣವು ಸಂಬಂಧಿತ ಮಕ್ಕಳಿಗೆ ಸೇರುತ್ತದೆ. ಅಲ್ಲದೇ ಅಂತಹ ಪೋಷಕರಿಗೆ ಸ್ವಯಂ ಉದ್ಯೋಗಕ್ಕೆ ನಡೆಸಲು ಸರ್ಕಾರ ವಿವಿಧ ಯೋಜನೆಗಳಲ್ಲಿ ನೆರವು ನೀಡುತ್ತದೆ.ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಇದೆ. ಬಾಲ್ಯ ಕಳೆದು ಕೊಂಡ ಮಕ್ಕಳಿಗೆ ಮರಳಿ ಬದುಕು ಕೊಡುವುದೇ ಈ ಸಮಿತಿಯ ಕೆಲಸ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಮಿತಿ ಜೊತೆ ಜನತೆ ಕೈ ಹಿಡಿಯ ಬೇಕಾಗಿದೆ.ಸರ್ಕಾರಿ ಶಾಲೆಗಳು ಆಕರ್ಷಕವಾಗಲಿ...

`ಸರ್ಕಾರಿ ಶಾಲೆಗಳಲ್ಲಿ ಅರ್ಹತೆ ಪಡೆದ ಶಿಕ್ಷಕರು ಇರುತ್ತಾರೆ. ಆದರೆ ಸರ್ಕಾರಿ ಶಾಲೆಗಳು ಆಕರ್ಷಣೀಯವಾಗಿಲ್ಲ. ಇತ್ತ ಆಕರ್ಷಕವಾಗಿರುವ ಖಾಸಗಿ ಶಾಲೆಗಳ ಡೊನೇಷನ್ ಪಾವತಿಸಲು ಬಡ ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಕ್ಕಳು ಬಾಲ ಕಾರ್ಮಿಕ ಪದ್ಧತಿಗೆ ಬಲಿಯಾಗುತ್ತಿದ್ದಾರೆ.ಎಲ್ಲ ಪೋಷಕರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬ ಆಸೆ ಇರುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಅಂತಹ ವ್ಯವಸ್ಥೆಯನ್ನು ನಿರ್ಮಿಸಲು ಜನಪ್ರತಿನಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಶ್ರಮಿಸಬೇಕು. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಬೇಕು. ಆಗ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬಹುದು'

-ನಫೀಸಾ ಭಾನು, ಸಾಮಾಜಿಕ ಕಾರ್ಯಕರ್ತೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.