ಬುಧವಾರ, ಮೇ 12, 2021
18 °C

`ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮೋಟಾರು ವಾಹನ ತೆರಿಗೆಯನ್ನು ಕಡಿಮೆ ಪಾವತಿಸಿ, ಸರ್ಕಾರಕ್ಕೆ ಸಂದಾಯವಾಗಬೇಕಾದ ತೆರಿಗೆಯಲ್ಲಿ ವಂಚನೆ ಮಾಡಿರುವ ಪ್ರಕರಣಗಳು ಗುಲ್ಬರ್ಗ ವಿಭಾಗದಲ್ಲಿ ಪತ್ತೆಯಾಗಿದ್ದು, ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ವಿರುದ್ಧ ಸಾರಿಗೆ ಇಲಾಖೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.ಗುಲ್ಬರ್ಗ ವಿಭಾಗದ ರಾಯಚೂರು, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಯಲ್ಲಿ ಹೊಸ ವಾಹನವನ್ನು ಖರೀದಿಸಿ ನೋಂದಣಿ ಮಾಡುವ ವೇಳೆಯಲ್ಲಿ ತೆರಿಗೆ ವಂಚನೆ ಮಾಡುವ ವ್ಯಕ್ತಿಗಳು ವಾಹನಕ್ಕೆ ಸಂಬಂಧಪಟ್ಟ ಮೂಲ ದಾಖಲೆಗಳಾದ ದರಪಟ್ಟಿ (ಇನ್ ವಾಯಿಸ್)ಯನ್ನು ಬದಲಾಯಿಸಿ, ಕಡಿಮೆ ಮೊತ್ತಕ್ಕೆ ದರಪಟ್ಟಿಗಳನ್ನು ತಯಾರಿಸಿ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ನೋಂದಣಿಗಾಗಿ ಸಲ್ಲಿಸುತ್ತಿದ್ದರು.ಕೃತ್ರಿಮ ದರಪಟ್ಟಿಗಳ ಸಲ್ಲಿಕೆಯೊಡನೆ ನೋಂದಣಿಯಾದ ವಾಹನಗಳಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ವಂಚನೆಯಾಗಿದೆ. ಇಂತಹ ಪ್ರಕರಣಗಳಲ್ಲಿ ಮಾಲೀಕರಿಂದ ಉಳಿದ ಹಣದ ವಸೂಲಿಗೆ ಕ್ರಮ ಜರುಗಿಸಲಾಗುತ್ತಿದೆ. ಅಲ್ಲದೆ ಈ ಪ್ರಕರಣಗಳಲ್ಲಿ ಆರ್.ಟಿ.ಓ ಕಚೇರಿಯ ಸಿಬ್ಬಂದಿಗಳ ಕೈವಾಡವಿದ್ದು ಇದರಲ್ಲಿ ಭಾಗಿಯಾದ ಗುಲ್ಬರ್ಗ ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಎಸ್.ಬಿ. ಮುನ್ನಳ್ಳಿ ಅವನ್ನು ಸೇವೆಯಿಂದ ಈಗಾಗಲೇ ಅಮಾನತು ಮಾಡಲಾಗಿದೆ. ಹಾಗೂ ಉಳಿದ ವ್ಯಕ್ತಿಗಳ ವಿರುದ್ದವೂ ಕಠಿಣ ಕ್ರಮ ಜರುಗಿಸಲಾಗುತ್ತಿದೆ.ಈ ನಿಟ್ಟಿನಲ್ಲಿ ಸಾರ್ವಜನಿಕರು ವಾಹನಗಳನ್ನು ಖರೀದಿಸುವಾಗ ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ತಮ್ಮ ಬಳಿ ಇಟ್ಟುಕೊಂಡು ಮೂಲ ದಾಖಲೆಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಸಲ್ಲಿಸಲು ಕೋರಲಾಗಿದೆ. ವಾಹನಗಳ ಮಾಲೀಕರು ಮತ್ತು ವಾಹನಗಳ ಕಂಪೆನಿಗಳ ಡೀಲರ್‌ಗಳು, ವಾಹನ ತಯಾರಕರಿಂದ ನಿರ್ಧರಿಸಿದ ಬೆಲೆಯನ್ನು ಹೊಂದಿದ ಇನ್‌ವಾಯಿಸ್‌ಗಳಿಗೆ ತಕ್ಕಂತೆ ತೆರಿಗೆ ಪಾವತಿಸಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಈ ಮೂಲಕ ತಿಳಿಸಲಾಗಿದೆ.ಆಕರ್ಷಕ ನೋಂದಣಿ ಸಂಖ್ಯೆಯನ್ನು ಪಡೆಯಲು ಅನಧಿಕೃತ ವ್ಯಕ್ತಿಗಳಿಗೆ ಲಕ್ಷಾಂತರ ತೆರಿಗೆ ಹಣವನ್ನು ನಗದು ರೂಪದಲ್ಲಿ ನೀಡುವುದು ಮತ್ತು ಮೂಲ ದಾಖಲೆಗಳಾದ ಮಾರಾಟ ಪತ್ರ, ಇನ್‌ವಾಯಿಸ್ ಮುಂತಾದವುಗಳನ್ನು ನೀಡಬಾರದು. ವಾಹನ ಮಾಲೀಕರು ತೆರಿಗೆ ಪಾವತಿಸುವಾಗ ತೆರಿಗೆ ಮೊತ್ತಕ್ಕೆ ಡಿಡಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹೆಸರಿನಲ್ಲಿ ಪಾವತಿಸಬೇಕು.ಈ ನಿಟ್ಟಿನಲ್ಲಿ ಗುಲ್ಬರ್ಗ ವಿಭಾಗದಲ್ಲಿ ವಾಹನಗಳನ್ನು ನೋಂದಣಿ ಮಾಡಿಸುವಾಗ ತಾವು ಪಾವತಿಸುವ ತೆರಿಗೆಯಲ್ಲಿ ವಂಚನೆಯಾಗದಂತೆ ನಿಗಾವಹಿಸಲು ಮಾಲೀಕರಿಗೆ ಮತ್ತು ವಾಹನಗಳ ಡೀಲರುಗಳಿಗೆ ಗುಲ್ಬರ್ಗ ವಿಭಾಗದ ಉಪ ಸಾರಿಗೆ ಆಯುಕ್ತ ಶಿವರಾಜ್ ಬಿ. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.