ಗುರುವಾರ , ಮೇ 13, 2021
16 °C

ಚಿಂಚೋಳಿ: ಬೀಜಗಳ ಖರೀದಿಗೆ ಮುಗಿಬಿದ್ದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನಲ್ಲಿ ಉದ್ದು, ಹೆಸರು ಬೇಸಾಯಕ್ಕೆ ಬೈಬೈ ಹೇಳುತ್ತಿರುವ ರೈತರು, ಸೋಯಾ ಬಿತ್ತನೆಗೆ ಜೈ ಎನ್ನುತ್ತಿದ್ದಾರೆ. ಹೀಗಾಗಿ ರೈತರು ಅಗತ್ಯ ಪ್ರಮಾಣದ ಸೋಯಾ ಬೀಜ ಖರೀದಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಮುಗಿ ಬೀಳುತ್ತಿರುವುದು ಬುಧವಾರ ಚಿಂಚೋಳಿಯಲ್ಲಿ ಕಂಡು ಬಂದಿತು.ಕೃಷಿ ಇಲಾಖೆ ತನ್ನ ನಿಗದಿತ ಗುರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೋಯಾ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಿಗೆ ಪೂರೈಕೆ ಮಾಡಿ ರೈತರಿಗೆ ಮಾರಾಟ ಮಾಡಿದೆ. ಆದರೂ ಬೀಜಕ್ಕಾಗಿ ರೈತರಿಂದ ಬೇಡಿಕೆ ತಗ್ಗಿಲ್ಲ ಎಂದು ಕೃಷಿ ಅಧಿಕಾರಿ ಪ್ರದೀಪ ದೇಶಪಾಂಡೆ ತಿಳಿಸಿದರು.ರಸ ಗೊಬ್ಬರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಪ್ರಸಕ್ತ ವರ್ಷ ರಸಗೊಬ್ಬರದ ಸಮಸ್ಯೆಗಿಂತಲೂ ಸೋಯಾ ಬೀಜಕ್ಕೆ ಹೆಚ್ಚಿನ ಬೇಡಿಕೆ  ಇದೆ ಎಂದರು.`ಸೋಯಾ ಬೀಜ ಪಡೆಯಲು ಎರಡುಮೂರು ದಿನಗಳಿಂದ ಕಾಯುತ್ತಿದ್ದೇನೆ ಆದರೂ ಸಿಕ್ಕಿಲ್ಲ. ಬುಧವಾರ ಬೀಜದ ಲಾರಿ ಬಂದಿದೆ. ಈಗಲಾದರೂ ಬೀಜ ತೆಗೆದುಕೊಳ್ಳಲು ಪಾಸ್ ಪುಸ್ತಕ ಹಿಡಿದುಕೊಂಡು ಸರತಿ ಸಾಲಿನಲ್ಲಿ ಕುಳಿತು ಕಾಯುತ್ತಿದ್ದೇನೆ' ಎಂದು ಐನೋಳ್ಳಿಯ ರೈತ ಸಯ್ಯದ್ ಗೌಸ್ ತಿಳಿಸಿದರು.`ಕೊನೆ ಮಳೆಯ ಭೀತಿಯಿಂದ ನಾವು ಹೆಸರು, ಉದ್ದು ಕೈಬಿಟ್ಟು, ಸೋಯಾ ಬಿತ್ತನೆಗೆ ಮುಂದಾಗಿದ್ದೇವೆ. ಮಾರುಕಟ್ಟೆಯಲ್ಲಿ ಬೆಲೆಯೂ ಇದೆ ಜತೆಗೆ ಮಳೆಗೆ ಬೆಳೆ ಬೇಗ ಹಾಳಾಗುವುದಿಲ್ಲ ಹೀಗಾಗಿ ತಾವು ಸೋಯಾ ಬಿತ್ತನೆಗೆ ಮುಂದಾಗಿದ್ದೇನೆ' ಎಂದರು.ಐನೋಳ್ಳಿ, ದೇಗಲಮಡಿ, ಪಟಪಳ್ಳಿ, ಯಂಪಳ್ಳಿ, ಕೊಂಚಾವರಂ, ಪೋಲಕಪಳ್ಳಿ, ಕಲ್ಲೂರು, ಮಿರಿಯಾಣ, ಶಾದಿಪೂರ, ಧರ್ಮಾಸಾಗರ, ಸಂಗಾಪುರ, ವೆಂಕಟಾಪುರ ಗ್ರಾಮಗಳಿಂದ ಆಗಮಿಸಿದ ನೂರಕ್ಕೂ ಅಧಿಕ ರೈತರು ಸೋಯಾ ಬೀಜಕ್ಕಾಗಿ ಕಾಯುತ್ತಿರುವುದು ಇಲ್ಲಿನ ರೈತ ಸಂಪರ್ಕ ಕೇಂದ್ರದ ಎದುರು ಕಂಡು ಬಂದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.