ಮಂಗಳವಾರ, ಮೇ 11, 2021
20 °C
ರೂ.40 ಲಕ್ಷ ಮೀಸಲು: ಸ್ಥಳಾಂತರ ಕಾಮಗಾರಿ ನನೆಗುದಿಗೆ

ಚಿತ್ತಾಪುರ: ರಸ್ತೆ ಮಧ್ಯ ವಿದ್ಯುತ್ ಕಂಬಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಪಟ್ಟಣದಲ್ಲಿ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳು ಕಳೆದ 2011ರ ಮೇ ತಿಂಗಳಲ್ಲಿ ನಡೆದ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿದಾಗ, ಅವು ನಡು ರಸ್ತೆಗೆ ಬಂದವು. ಎರಡು ವರ್ಷಗಳು ಕಳೆದರೂ ಅವನ್ನು ರಸ್ತೆಯ ಪಕ್ಕಕ್ಕೆ ಸ್ಥಳಾಂತರಿಸುವ ಕಾಮಗಾರಿ ನೆನೆಗುದಿಗೆ ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.ನಗರದ 29 ರಸ್ತೆಗಳಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಿಕೊಂಡು ಮನೆ, ಕಟ್ಟಡಗಳನ್ನು ತಾಲ್ಲೂಕು ಆಡಳಿತವು ನೆಲಸಮ ಮಾಡಲಾಗಿತ್ತು. ಆ ರಸ್ತೆಗಳ ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳು ತೆರವು ಕಾರ್ಯಾಚರಣೆಯ ನಂತರ ನಡು ರಸ್ತೆಗೆ ಬಂದವು. ಸಂಬಂಧಿಸಿದ ಇಲಾಖೆಗೆ ಅವನ್ನು ರಸ್ತೆಯ ಪಕ್ಕಕ್ಕೆ ಸ್ಥಳಾಂತರ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ.ಜೊತೆಗೆ, ಒತ್ತುವರಿ ತೆರವಿನಿಂದ ಅಗಲವಾದ ರಸ್ತೆಯ ಎರಡೂ ಪಕ್ಕದಲ್ಲಿ ಚರಂಡಿ ನಿರ್ಮಾಣ ಮತ್ತು ಸಿಮೆಂಟ್ ರಸ್ತೆ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಜನತಾ ಚೌಕ್‌ನಲ್ಲಿ ವಿದ್ಯುತ್ ಪರಿವರ್ತಕ ನಡು ರಸ್ತೆಗೆ ಬಂದಿದೆ. ಅದರ ರಕ್ಷಣೆಗೆಂದು ಹಾಕಲಾಗಿದ್ದ ತಂತಿ ಬೇಲಿ ಹಾಳಾಗಿದೆ. ಅದರ ಪಕ್ಕದಲ್ಲೆ ತರಕಾರಿ ಮತ್ತು ಇತರೆ ವ್ಯಾಪಾರಿಗಳು ಕುಳಿತುಕೊಂಡು ವ್ಯಾಪಾರ ಮಾಡುತ್ತಾರೆ.ಜೆಸ್ಕಾಂ ಕಚೇರಿ ಹತ್ತಿರ ನಡು ರಸ್ತೆಯಲ್ಲೆ ಉಳಿದುಕೊಂಡಿದ್ದ ವಿದ್ಯುತ್ ಕಂಬಕ್ಕೆ ಈಚೆಗೆ ವಾಹನವೊಂದು ಹಾಯ್ದು ಕಂಬ ಉರುಳಿ ಬಿದ್ದು ಸಮಸ್ಯೆ ಉಂಟಾಗಿತ್ತು. ಅಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡಲು ಮುಂದಾಗಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.ಒತ್ತುವರಿ ತೆರವು ಕಾರ್ಯಾಚರಣೆ ನಡೆದ ನಗರದ 29 ರಸ್ತೆಗಳಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡುವ ಕುರಿತು ಪುರಸಭೆಯಲ್ಲಿ 2011-12ನೇ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ರೂ 40 ಲಕ್ಷ ಮೀಸಲಿಡಲಾಗಿತ್ತು. ಪುರಸಭೆ ಟೆಂಡರ್ ಕರೆದು ಕಂಬ ಸ್ಥಳಾಂತರಕ್ಕೆ ಚಾಲನೆ ಕೊಟ್ಟಿತ್ತು. ಆದರೆ, ವಿದ್ಯುತ್ ಕಂಬ ಸ್ಥಳಾಂತರ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದ ಸಾಗರ್ ಎಲೆಕ್ಟ್ರೀಕಲ್‌ನವರು ಕೆಲಸ ಮಾಡಲು ಟೆಂಡರ್ ಹಣದ ಪ್ರಕಾರ ನಮಗೆ ನಷ್ಟವಾಗುತ್ತದೆ. ಕಾಮಗಾರಿ ಮಾಡಲು ಆಗಲ್ಲ ಎಂದು ಪುರಸಭೆ ಅಧಿಕಾರಿಗೆ ಬರೆದುಕೊಟ್ಟಿದ್ದರಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ.ಜಿಲ್ಲಾಧಿಕಾರಿಗೆ ಪತ್ರ: `ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲಿಂದ ಬರುವ ನಿರ್ದೇಶನದ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸ್ಥಳೀಯ ಜೆಸ್ಕಾಂ ಅಧಿಕಾರಿಗೂ ವಿಷಯ ತಿಳಿಸಲಾಗಿದೆ' ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ ಬಿಲಗುಂದಿ ಅವರು ಗುರುವಾರ ಪ್ರಜಾವಾಣಿಗೆ ತಿಳಿಸಿದ್ದಾರೆ.`ವಿದ್ಯುತ್ ಕಂಬ ಸ್ಥಳಾಂತರ ಮಾಡುವ ಕಾಮಗಾರಿಯನ್ನು ಗುತ್ತಿಗೆ ಪಡೆಯಲು ಹಳೆ ದರದ ಪ್ರಕಾರ ಯಾರೂ ಮುಂದೆ ಬರುವುದಿಲ್ಲ. ಈಗಾಲೇ ಪುರಸಭೆಯಲ್ಲಿ ಮೀಸಲಿಟ್ಟಿರುವ ಹಣದ ಪ್ರಕಾರ ಹೊಸ ದರಗಳಂತೆ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟು ಕೆಲಸ ಮಾಡಲು ಮತ್ತೊಮ್ಮೆ ಅಂದಾಜು ಪಟ್ಟಿ ಸಿದ್ಧಮಾಡಿ ಪುನಃ ಟೆಂಡರ್ ಕರೆಯಬೇಕಾಗುತ್ತದೆ. ಉಳಿದ ಕಂಬಗಳ ಸ್ಥಳಾಂತರಕ್ಕೆ ಪುರಸಭೆಯ ಯಾವುದಾರೂ ಅನುದಾನದಲ್ಲಿ ಹಣವನ್ನು ಮೀಸಲಿಟ್ಟು ಮತ್ತೊಮ್ಮೆ ಕೆಲಸ ಮಾಡಿಸಲು ಕ್ರಮ ತೆಗೆದುಕೊಳ್ಳಕಾಗುತ್ತದೆ' ಎಂದು ಅವರು ಹೇಳಿದ್ದಾರೆ.ವಾರದಲ್ಲಿ ಅಂದಾಜು ಪಟ್ಟಿ: `ಹಳೆ ದರಗಳ ಪ್ರಕಾರ ಯಾರೂ ಕೆಲಸ ಮಾಡಲು ಮುಂದಾಗುತ್ತಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದು, ಈಗ ಹೊಸ ದರಗಳ ಪ್ರಕಾರ ಒಂದು ವಾರದೊಳಗೆ ಅಂದಾಜು ಪಟ್ಟಿಯನ್ನು ಪರಿಷ್ಕರಣೆ ಮಾಡಿ ಕೊಡುತ್ತೇವೆ' ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಂದ್ರ ಕಟ್ಟಿಮನಿ ಶುಕ್ರವಾರ ಪ್ರಜಾವಾಣಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.