ಶನಿವಾರ, ಮೇ 15, 2021
24 °C

ಕುಸಿದ ಸೇತುವೆಯ ಅಂಚು, ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಭಾಲ್ಕಿ- ಚಿಂಚೋಳಿ ರಾಜ್ಯ ಹೆದ್ದಾರಿ -75ರಲ್ಲಿ ಬರುವ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಬಳಿಯ ಮೈಶಮ್ಮೋ ದೇವಾಲಯದ ಹತ್ತಿರದ ಚಿಕ್ಕ ಸೇತುವೆ ಒಂದು ಬದಿಗೆ ಕುಸಿದಿದ್ದು, ಸೇತುವೆ ಮೇಲಿನಿಂದ ವಾಹನಗಳು ಚಲಿಸುತ್ತಿದ್ದರೆ ಅಲುಗಾಡುತ್ತಿದೆ ಎಂದು ಸುತ್ತಲಿನ ಗ್ರಾಮಸ್ಥರು ಹೇಳುತ್ತಾರೆ.ಸಲಗರ ಬಸಂತಪೂರ, ಚಿಮ್ಮನಚೋಡ, ಚಂದನಕೇರಾ, ಚೇಂಗಟಾ, ನರನಾಳ್, ಚನ್ನೂರು, ಗಡಿಲಿಂಗದಳ್ಳಿ, ಭೂಂಯಾರ್, ಖಾನಾಪುರ, ಕೊಟಗಾ, ಐನಾಪುರ, ಬೆನಕೆಪಳ್ಳಿ, ಯಲ್ಮಾಮಡಿ, ನಾಗರಾಳ್ ಮತ್ತಿತರ ಗ್ರಾಮಸ್ಥರು ಚಿಂಚೋಳಿ ಬರಲು ರಾಜ್ಯ ಹೆದ್ದಾರಿ -75 ಅನುಕೂಲವಾಗಿದೆ.ಆದರೆ ಈ ರಸ್ತೆ ಬಹುತೇಕ ಹದಗೆಟ್ಟಿದ್ದು, ಚಿಮ್ಮನಚೋಡ ಬಳಿಯ ಚಿಕ್ಕ ಸೇತುವೆಯ ಬದಿ ಕುಸಿದಿದೆ. ಸೇತುವೆ ಉರುಳಿದರೆ ಸಾರಿಗೆ ಸಂಪರ್ಕ ಕಡಿತವಾಗಲಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.ರಾಜ್ಯ ಹೆದ್ದಾರಿಯಲ್ಲಿ ಈ ಸೇತುವೆಯ ಬದಿಯ ರಸ್ತೆಯ ಮಣ್ಣು ಕುಸಿಯುತ್ತಿದೆ. ದಿನಗಳೆದಂತೆ ಮಣ್ಣು ಜರುಗಿ ಸೇತುವೆ ಕೆಳ ಭಾಗದ ಗೋಡೆಯೂ ಕುಸಿಯುತ್ತಿದೆ. ಈ ಗೋಡೆ ಸೇತುವೆಯ ಒಂದು ಮೂಲೆಯಲ್ಲಿ ಭೂಮಿಯ ಸಂಪರ್ಕ ಕಡಿದು ಅತಂತ್ರವಾಗಿ ನಿಂತಿದೆ.  ಭಾರಿ ವಾಹನ ಇದರ ಮೇಲಿನಿಂದ ಸಂಚರಿಸಿದರೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ, ಚಿಮ್ಮೋಈದಲಾಯಿ ಗ್ರಾಮದ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಚಿಂಚೋಳಿಕರ್.ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳು ಸದಾ ಸಂಚರಿಸುತ್ತವೆ. ಭಾರಿ ವಾಹನಗಳಿಗೆ ಸ್ಥಳ ನೀಡಲು ರಸ್ತೆ ಬದಿಗೆ ಇಳಿದರೆ ಅಥವಾ ಕತ್ತಲೆಯಲ್ಲಿ ಮೈಮರೆತು ಸೈಡ್ ಕೊಡಲು ಹೋದರೆ ಇಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ತಕ್ಷಣ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೇತುವೆ ದುರಸ್ತಿಗೆ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.