ಬುಧವಾರ, ಮೇ 12, 2021
18 °C
11.13ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ಫಲಾನುಭವಿಗಳಿಗೆ `ಪಡಿತರ ಯೋಜನೆ' ಲಾಭ

ಜುಲೈನಿಂದ ಅಕ್ಕಿ ವಿತರಣೆಗೆ ತಯಾರಿ

ಪ್ರಜಾವಾಣಿ ವಾರ್ತೆ/ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್) ಇರುವ ಕುಟುಂಬಗಳಿಗೆ 30 ಕೆ.ಜಿ ಪಡಿತರ ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ ಯೋಜನೆ ಜುಲೈನಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಹೆಚ್ಚುವರಿ ಅಕ್ಕಿ ವಿತರಿಸಲು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಜ್ಜಾಗಿದೆ.ಜಿಲ್ಲೆಯ ಒಟ್ಟು ಚಾಲ್ತಿ ಇರುವ 5,90,587 ಪಡಿತರ ಚೀಟಿಗಳಲ್ಲಿ 4,04,721 ಬಿಪಿಎಲ್ ಚೀಟಿ ಹೊಂದಿದವರಿದ್ದಾರೆ. 63,695 ಅಂತ್ಯೋದಯ ಅನ್ನ ಯೋಜನೆ (ಎಎವೈ) ಹಾಗೂ 1,22,171 ಬಡತನ ರೇಖೆಗಿಂತ ಮೇಲಿನ (ಎಪಿಎಲ್) ಚೀಟಿ ಹೊಂದಿದವರಿದ್ದಾರೆ.ಹೆಚ್ಚುವರಿ ಅಕ್ಕಿಯನ್ನು ಜುಲೈನಿಂದಲೇ ಬಿಪಿಎಲ್ ಚೀಟಿ ಹೊಂದಿದವರಿಗೆ ವಿತರಿಸಲಾಗುತ್ತಿದೆ. ಚೀಟಿಯಲ್ಲಿ ಒಬ್ಬ ಸದಸ್ಯನಿದ್ದರೆ 10 ಕೆ.ಜಿ, ಇಬ್ಬರು ಸದಸ್ಯರಿದ್ದರೆ 20 ಕೆ.ಜಿ. ಹಾಗೂ 3 ಅಥವಾ 3 ಕ್ಕಿಂತ ಹೆಚ್ಚು ಸದಸ್ಯರಿದ್ದರೆ ಗರಿಷ್ಠ 30 ಕೆ.ಜಿ. ಮಾತ್ರ ಅಕ್ಕಿ ವಿತರಿಸಲಾಗುತ್ತದೆ. ಈ ಯೋಜನೆ ಜಾರಿಗೊಳ್ಳುವ ಮೊದಲು ಬಿಪಿಎಲ್ ಚೀಟಿಯಲ್ಲಿ ಒಬ್ಬ ಸದಸ್ಯನಿದ್ದರೆ 4 ಕಿ.ಜಿ, ಇಬ್ಬರು ಸದಸ್ಯರಿದ್ದರೆ 8 ಕೆ.ಜಿ ಹಾಗೂ 3 ಸದಸ್ಯರಿದ್ದರೆ 12 ಕೆ.ಜಿ ಹಾಗೂ 4 ಅಥವಾ  4ಕ್ಕಿಂತ ಹೆಚ್ಚು ಸದಸ್ಯರಿದ್ದರೆ ಗರಿಷ್ಠ 15 ಕೆ.ಜಿ ಮಾತ್ರ ಅಕ್ಕಿ ವಿತರಿಸಲಾಗುತ್ತಿತ್ತು.ಫಲಾನುಭವಿಗಳು: ಜಿಲ್ಲೆಯ ಚಾಲ್ತಿ ಪಡಿತರ ಬಿಪಿಎಲ್ ಚೀಟಿಗಳಲ್ಲಿ 20,801ರಲ್ಲಿ ಒಬ್ಬ ಸದಸ್ಯ, 58,623 ಚೀಟಿಗಳಲ್ಲಿ ಇಬ್ಬರು ಸದಸ್ಯರು ಹಾಗೂ ಮೂರು-ಮೂರಕ್ಕಿಂತ ಹೆಚ್ಚು ಸದಸ್ಯರಿರುವ ಚೀಟಿಗಳು 3,25,297. ಜಿಲ್ಲೆಯಲ್ಲೆ ಗರಿಷ್ಠ ಪಡಿತರ ಚೀಟಿದಾರರು ಗುಲ್ಬರ್ಗ ಹಾಗೂ ಚಿತ್ತಾಪುರ ತಾಲ್ಲೂಕಿನಲ್ಲಿದ್ದಾರೆ. ಗುಲ್ಬರ್ಗ ತಾಲ್ಲೂಕಿನಲ್ಲಿ 1,89,354 ಪಡಿತರ ಚೀಟಿದಾರರ ಪೈಕಿ 1,23,187 ಬಿಪಿಎಲ್ ಮತ್ತು ಚಿತ್ತಾಪುರ ತಾಲ್ಲೂಕಿನಲ್ಲಿ 92,442 ಪಡಿತರ ಚೀಟಿಗಳ ಪೈಕಿ 65,918 ಬಿಪಿಎಲ್ ಚೀಟಿಗಳಿವೆ. ಜಿಲ್ಲೆಯಲ್ಲಿ ಪಡಿತರ ಚೀಟಿಯಲ್ಲಿರುವ ಒಟ್ಟು ಸದಸ್ಯರು 11.13 ಲಕ್ಷಕ್ಕಿಂತ ಹೆಚ್ಚಿದ್ದು, ಜುಲೈನಿಂದ ಹೆಚ್ಚುವರಿ ಅಕ್ಕಿ ಯೋಜನೆ ಲಾಭ ಪಡೆಯಲಿದ್ದಾರೆ.ಅಂತ್ಯೋದಯ ಅನ್ನ ಯೋಜನೆ (ಎಎಎಲ್) ಚೀಟಿ ಹೊಂದಿದವರಿಗೆ ಪ್ರತಿ ಚೀಟಿಗೆ 29 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಪಿಎಲ್ ಚೀಟಿ ಹೊಂದಿದವರಿಗೆ ಅಕ್ಕಿ ವಿತರಿಸಲು ಮಾಡಿದ್ದ ಹಂಚಿಕೆ ಇನ್ನು ಮುಂದೆ ಸ್ಥಗಿತವಾಗಲಿದೆ.

`ಗುಲ್ಬರ್ಗ ಜಿಲ್ಲೆಗೆ ಈ ಬಾರಿ 40 ಮೆಟ್ರಿಕ್ ಟನ್ ಅಕ್ಕಿಯನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದು, ಛತ್ತೀಸ್‌ಗಡ್ ರಾಜ್ಯದಿಂದ ಹೆಚ್ಚುವರಿ ಅಕ್ಕಿ ಬರಲಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.ಬಿಪಿಎಲ್ ಪಡಿತರ ಅಕ್ಕಿಯ ಬೆಲೆ ಇಲ್ಲಿಯವರೆಗೂ ಪ್ರತಿ ಕೆ.ಜಿಗೆ ರೂ 3 ಇತ್ತು, ಜುಲೈನಿಂದ ಅಕ್ಕಿ ದರ ಎಷ್ಟು ಎಂಬುದರ ಬಗ್ಗೆ ಇನ್ನು ಬೆಂಗಳೂರಿನಿಂದ ಮಾಹಿತಿ ಬಂದಿಲ್ಲ' ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಡಿ.ಟಿ.ಜಯಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

`ಬಿಪಿಎಲ್ ಚೀಟಿದಾರರಿಗೆಲ್ಲ ಅಕ್ಕಿ'

2010ಕ್ಕಿಂತ ಮೊದಲು ಒಟ್ಟು 3,14,676 ಪಡಿತರ ಚೀಟಿಗಳು ವಿತರಣೆಯಾಗಿದ್ದು, ಈ ಪಡಿತರದಾರರಿಗೆ ನವೀಕರಣ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಈಗಾಗಲೇ ನವೀಕರಣಕ್ಕೆ ಅರ್ಜಿ ಸಲ್ಲಿಸಿದವರು, ಅರ್ಜಿ ಸಲ್ಲಿಸದೆ ಇದ್ದವರು ಜುಲೈನಲ್ಲಿ ಯಥಾಪ್ರಕಾರ ಪಡಿತರ ಪಡೆದುಕೊಳ್ಳಲು ಅವಕಾಶವಿದೆ. ಬಿಪಿಎಲ್ ಚೀಟಿ ಹೊಂದಿದವರಿಗೆ ಹೆಚ್ಚುವರಿ ಅಕ್ಕಿ ಮಾತ್ರ ವಿತರಣೆಯಾಗಲಿದ್ದು, ಗೋಧಿ ಹಾಗೂ ಸಕ್ಕರೆ ಮೊದಲಿನ ಪ್ರಮಾಣದಲ್ಲಿ ವಿತರಿಸಲಾಗುವುದು ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಡಿ.ಟಿ. ಜಯಪ್ಪ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.