ಗುರುವಾರ , ಮೇ 13, 2021
16 °C
ಬತ್ತಿದ ಬಾವಿ: ವಿದ್ಯುತ್ ಮೇಲೆ ಅವಲಂಬನೆ

ಡೋಣಗಾಂವ: ನೀರಿಗಾಗಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ತಾಲ್ಲೂಕಿನ ಡೋಣಗಾಂವ ಗ್ರಾಮದಲ್ಲಿ ಇರುವ ಕುಡಿಯುವ ನೀರಿನ ತೆರೆದ ಬಾವಿ ಬೇಸಿಗೆಯಲ್ಲಿ  ಬತ್ತಿದೆ. ಈಗ ಮಳೆಗಾಲ ಶುರುವಾದರೂ ಬಾವಿಯಲ್ಲಿ ನೀರು ಬರುತ್ತಿಲ್ಲ. ಅಂತರ್ಜಲಮಟ್ಟ ಪಾತಾಳಕ್ಕಿಳಿದಿದೆ. ಕುಡಿವ ನೀರಿಗಾಗಿ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.ಗ್ರಾಮದ ಪಕ್ಕದ ಹೊಲವೊಂದರಲ್ಲಿ ಕೊರೆದಿರುವ ಕೊಳವೆ ಬಾವಿಯಿಂದ ತೆರೆದ ಬಾವಿವರೆಗೆ ಪೈಪು ಜೋಡಿಸಿ ಬತ್ತಿದ ಬಾವಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ವಿದ್ಯುತ್‌ಅನ್ನು ಅವಲಂಬಿಸಿದೆ. 3 ಫೇಸ್ ವಿದ್ಯುತ್ ಕೊಡುವುದು ಬಹಳ ಕಡಿಮೆ. ವಿದ್ಯುತ್ ಸರಬರಾಜಿಲ್ಲಿ  ವ್ಯತ್ಯಯವಾದರೆ ಕುಡಿವ ನೀರಿಗಾಗಿ ಗ್ರಾಮಸ್ಥರ ಗೋಳು ಹೇಳತೀರದು ಎನ್ನುತ್ತಾರೆ ಗ್ರಾಮದ ಹಿರಿಯ ಮುಖಂಡ ಹುಸೇನಸಾಬ.ಮಳೆ ಬಂದು ಬತ್ತಿರುವ ಬಾವಿಯಲ್ಲಿ ನೀರು ಬರುವವರೆಗೆ ಸಮಸ್ಯೆ ತಪ್ಪಿದ್ದಲ್ಲ. ಗ್ರಾಮದಲ್ಲಿ ಕುಡಿವ ನೀರಿಗೆ ತೀವ್ರ ತೊಂದರೆಯಾಗಿದೆ. 3 ಫೇಸ್ ವಿದ್ಯುತ್ ಕನಿಷ್ಠ 6 ಗಂಟೆಯಾದರೂ ಕೊಡಬೇಕು ಎಂದು ಹೇಳಿದರೂ ವಿದ್ಯುತ್ ಇಲಾಖೆಯವರು ಕೊಡುತ್ತಿಲ್ಲ. ಕೊಡುವ 3 ಗಂಟೆ ಕಾಲ 3 ಫೇಸ್ ವಿದ್ಯುತ್ ಸರಿಯಾಗಿ ಕೊಡುವುದಿಲ್ಲ.ಒಂದೆರಡು ಸಲ ಹೋಗಿ ಬರುತ್ತದೆ. ಒಂದೊಂದು ದಿವಸ ಒಂದೇ ಗಂಟೆ ಕೊಡುತ್ತಾರೆ. ಹೀಗಾಗಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ಗ್ರಾಮದ ನಾಗರಾಜ ಬುಧವಾರ ಪ್ರಜಾವಾಣಿಗೆ ತಮ್ಮ ಅಳಲು ತೋಡಿಕೊಂಡರು.ವಿದ್ಯುತ್ ಇದ್ದಾಗ ಮಾತ್ರ ಬಾವಿಗೆ ನೀರು ಬಿಡುತ್ತಾರೆ. ಬಾವಿಗೆ ನೀರು ಬಿಡದಿದ್ದರೆ ಬಾವಿಯಲ್ಲಿನ ಬಸಿ ನೀರಿಗಾಗಿ ಹಗಲು ರಾತ್ರಿ ಕಾದು ಕುಳಿತುಕೊಂಡು ನೀರು ತೆಗೆದುಕೊಂಡು ಹೋಗುವ ಅನಿವಾರ್ಯತೆ ನಮಗೊದಗಿದೆ.ವಿದ್ಯುತ್ ಇದ್ದಾಗ ಸ್ವಲ್ಪ ಸಮಯದಲ್ಲಿ ಬೋರ್‌ವೆಲ್‌ನಿಂದ ಬಾವಿಗೆ ಬಿಡುವ ನೀರು ಬೇಗನೆ ಖಾಲಿಯಾಗುತ್ತದೆ. ಆಗ ನೀರಿಗಾಗಿ ತೊಂದರೆ ಶುರುವಾಗುತ್ತದೆ ಎನ್ನುತ್ತಾರೆ ಗ್ರಾಮದ ರಾಜಪ್ಪ.ಬಾವಿ ಬತ್ತಿದ್ದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿ ಬಟ್ಟೆ ತೊಳೆಯಲು, ಸ್ನಾನ ಮಾಡಲು ತೀವ್ರ ತೊಂದರೆಯಾಗುತ್ತಿದೆ. ಪ್ರತಿ ವರ್ಷ ಈ ಸಮಸ್ಯೆ ಕಾಡುತ್ತದೆ. ಆದರೆ, ಗ್ರಾಮದಲ್ಲಿ ನೀರಿನ ಸಮಸ್ಯೆ ಕಾಡದಂತೆ ಶಾಶ್ವತ ಪರಿಹಾರ ಮಾಡಲು ಯಾರೂ ಮುಂದಾಗಿಲ್ಲ.ಅಧಿಕಾರಿ ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ಗ್ರಾಮಸ್ಥರು ಅನುಭವಿಸುತ್ತಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.