ಶುಕ್ರವಾರ, ಮೇ 7, 2021
24 °C

ಆಳಂದ: ಕಾರಹುಣ್ಣಿಮೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ:  ಮಳೆಗಾಲ ಆರಂಭದ ಮುನ್ನ `ಎತ್ತುಗಳ ಹಬ್ಬ'ವೆಂದು ಆಚರಿಸುವ ಕಾರಹುಣ್ಣಿಮೆ ಹಬ್ಬದ ಎತ್ತುಗಳ ಮೆರವಣಿಗೆಗೆ ಅಗತ್ಯವಾದ ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ರೈತರು ತೊಡಗಿರುವುದು ಶುಕ್ರವಾರ      ಕಂಡುಬಂತು.ಪಟ್ಟಣದ ಗಣೇಶ ಚೌಕ್‌ನ ರಸ್ತೆಯ ಇಬ್ಬದಿಯಲ್ಲಿ ಕಾರಹುಣ್ಣಿಮೆ ಹಬ್ಬದ ಮೆರವಣಿಗೆಗಾಗಿಯೇ ತಂದಿರುವ ವೈವಿಧ್ಯಮಯ  ವರ್ಣರಂಜಿತ ಅಲಂಕಾರ ಸಾಮಾಗ್ರಿಗಳು ನೋಡುಗರ ಗಮನ ಸೇಳೆಯುತ್ತಿವೆ.ಉಮರ್ಗಾ, ಸೊಲ್ಲಾಪುರ ಮತ್ತಿತರ ಕಡೆಯಿಂದ ಬಂದ ವ್ಯಾಪಾರಿಗಳು ಬೀದಿ ಬದಿಯಲ್ಲಿಯೇ ಕುಳಿತು ಮಾರಾಟ ನಡೆಸಿದ್ದಾರೆ. ನಾರು, ನೂಲು ಮತ್ತಿತರ ಎಳೆಯಿಂದ ತಯಾರಿಸಿರುವ ಹಗ್ಗದ ಅಲಂಕಾರಿಕ ವಸ್ತು, ಗೋಡ್ಯೆ, ಮತಾಟಿ, ಮಗಡಾ, ಆಟೆಕ, ಮುಗದಾಣಿ, ಕೊರಳಪಟ್ಟಿ ಹೀಗೆ ಹಗ್ಗದಿಂದ ಮಾಡಿದ ವಸ್ತು, ವಾರನೆಸ್, ಮಿಂಚು ಪಟ್ಟಿಗೆ, ಘಂಟೆ ಮತ್ತು ಬಣ್ಣದ ಪಾಕೆಟ್ ಮಾರುಕಟ್ಟೆಯಲ್ಲಿವೆ.ಭಾನುವಾರ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕಾರಹುಣ್ಣಿಮೆ ಆಚರಿಸುವುದರಿಂದ ಕಳೆದ ಎರಡು ದಿನಗಳಿಂದ ರೈತರು ಅಧಿಕ ಸಂಖ್ಯೆಯಲ್ಲಿ ವಸ್ತುಗಳ ಖರೀದಿ ನಡೆಸಿದ್ದಾರೆ ಎಂದು ಉಮರ್ಗಾದಿಂದ ಮಾರಾಟಕ್ಕೆ ಬಂದ ಖಾಸಿಂ ಅಲಿ ತಿಳಿಸಿದನು.ಕೃಷಿ ಚಟುವಟಿಕೆಗಳು ಆರಂಭಗೊಳ್ಳದ ಪೂರ್ವದಲ್ಲಿ ರಾಸುಗಳಿಗೆ ಪೂಜೆ ಸಲ್ಲಿಸುವ  ರೈತರು ಸಂಭ್ರಮದಿಂದ ಕಾರ ಹುಣ್ಣಿಮೆ ಆಚರಿಸುವುದು ವಾಡಿಕೆ. ಆದರೆ ಈ ಬಾರಿ ಮುಂಗಾರು ಮಳೆಯ ಆರಂಭದ ನಂತರದ ಹಿನ್ನಡೆಯ ಕಾರಣ ರೈತರಲ್ಲಿ ಹೆಚ್ಚಿನ ಉತ್ಸಾಹ ಕಾಣುತ್ತಿಲ್ಲ.ಈಗಾಗಲೇ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಅಲ್ಪ ಸ್ವಲ್ಪ ಮಳೆಯಾದ ಹಿನ್ನಲೆಯಲ್ಲಿ ರೈತರು ಬಿತ್ತನೆ ಕಾರ್ಯವನ್ನು ಆರಂಭಿಸಿದ್ದಾರೆ.

ಇದು ಸಹ ಕಾರಹುಣ್ಣಿಮೆ ಹಬ್ಬದ ಮೇಲೆ ಪ್ರಭಾವ ಬೀರಲಿದೆ.ಹೀಗೆ ಕಾರಹುಣ್ಣಿಮೆಯ ಕರಿ ಕಡಿಯುವ ಮೂಲಕ ರೈತರೂ ತಮ್ಮ ಕೃಷಿ ಕಾರ್ಯಗಳಿಗೆ ಚಾಲನೆ ನೀಡುವ ಸಂಪ್ರಾದಾಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.