ಗುರುವಾರ , ಮಾರ್ಚ್ 4, 2021
26 °C

ರೌದ್ರಾವತಿನದಿಗೆ ನಿರ್ವಹಣೆ ಬರ

ಗುಂಡಪ್ಪ ಕರೆಮನೋರ / ಪ್ರಜವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೌದ್ರಾವತಿನದಿಗೆ ನಿರ್ವಹಣೆ ಬರ

ಕಾಳಗಿ:  ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದ್ದರೂ ಹಲವು ಊರುಗಳಲ್ಲಿ ಕುಡಿಯುವ ಹನಿ ನೀರಿಗೂ ಹಾಹಾಕಾರ, ಜನರ ಪರದಾಟ ಮುಂದುವರಿದಿದೆ.  ಆದರೆ `ಬತ್ತದ ನೀರಿನ ನೆಲೆ' ಹೊಂದಿರುವ ಕಾಳಗಿ ಪಟ್ಟಣದಲ್ಲಿ ರೌದ್ರಾವತಿ ನದಿ ತುಂಬಿ ಹರಿಯುತ್ತಿದೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ತ್ಯಾಜ್ಯ ತುಂಬಿ ನದಿಯ ನೀರು ಕಲುಷಿತಗೊಂಡಿದೆ.ಇಲ್ಲಿ 15ಅಡಿ ಆಳ, 50ಅಡಿ ಅಗಲ ಮತ್ತು ಸಾವಿರಾರು ಅಡಿ ಉದ್ದನೆಯ `ರೌದ್ರಾವತಿ' ನದಿಯಿಂದ ಅನೇಕ ಪಂಪಸೆಟ್‌ಗಳ ಮೂಲಕ ಜನರು ಸದಾ ತಮ್ಮ ಕೃಷಿ ಜಮೀನಿಗೆ ನೀರುಣಿಸುತ್ತಿರುತ್ತಾರೆ.ಹೀಗೆ ಸರ್ವಕಾಲಕ್ಕೂ ತಿಳಿ ನೀರಿನಿಂದ ಕೂಡಿರುತ್ತಿದ್ದ ನದಿಯಲ್ಲಿ ಇತ್ತೀಚಿನ ಕೆಲವು ತಿಂಗಳಿಂದ ಥರ್ಮೋಕೋಲ್ ಪ್ಲೇಟ್ಸ್, ಪ್ಲಾಸ್ಟಿಕ್ ಗ್ಲಾಸ್, ಹರಿದ ಬಟ್ಟೆಬರೆಗಳು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು, ನಂದಿನಿ ಹಾಲಿನ ಖಾಲಿ ಪ್ಯಾಕೆಟ್‌ಗಳು ರಾಶಿ ರಾಶಿಯಾಗಿ ತೇಲಿಕೊಂಡು ಬರುತ್ತಿದ್ದು, ನೀರು ಕಲುಷಿತಗೊಂಡಿದೆ.ಊರಿನ ಅನೇಕ ವಾರ್ಡ್‌ಗಳಿಂದ ಹರಿದು ಬರುವ ಚರಂಡಿ ಮಿಶ್ರಿತ ಕೊಳಚೆ ನೀರು ಈ ನದಿಗೆ ಸೇರುತ್ತಿವೆ. ಇದರಿಂದ ನದಿಯ ನೀರಿನ ಬಣ್ಣವೂ ಕಪ್ಪಾಗಿ ರೋಗ ಭೀತಿ ಸೃಷ್ಟಿಸಿದೆ.ಅಷ್ಟೇ ಅಲ್ಲದೆ ನದಿಯ ಬಲ ಭಾಗದುದ್ದಕ್ಕೂ ಬೆಳೆಯುತ್ತಿರುವ ಜೇಕು (ದೊಡ್ಡ ಹುಲ್ಲು) ಮಿತಿಮೀರಿ ನೀರಿನಲ್ಲಿ ಹಸಿರು ಪಾಚಿ ಬೆಳೆದಿದೆ. ಹೀಗೆ ತ್ಯಾಜ್ಯ ವಸ್ತುಗಳ ಹರಿದಾಟದಿಂದ ನಲುಗಿ ನದಿಯು ತನ್ನ ಹಳೆಯ ಸೌಂದರ್ಯವನ್ನು ಕಳೆದು ಕೊಳ್ಳುತಿದೆ.ನದಿ ಮಲಿನವಾಗಿರುವುದರಿಂದ ಮೀನುಗಳೂ ಮಾಯವಾಗುತ್ತಿವೆ. ದೇವಸ್ಥಾನದ ಪಕ್ಕದಲ್ಲೆ ಇಂಥ ದುರ್ವಾಸನೆಯ ಸ್ಥಿತಿ ನಿರ್ಮಾಣವಾಗಿದ್ದರೂ ನದಿಯ ಸ್ವಚ್ಛತೆ  ಕಾಪಾಡುವ ಕೆಲಸಕ್ಕೆ ಯಾರು ಮುಂದಾಗುತ್ತಿಲ್ಲ  ಎಂಬುದು ಸ್ಥಳೀಯರ ಆರೋಪ.ಇದೇ ರೀತಿ ಮುಂದುವರಿದರೆ ಬರುವ ದಿನಗಳಲ್ಲಿ ನೀರೆಲ್ಲ ಕಲುಷಿತವಾಗಿ ನೀರಿನ ಒರತೆಯೂ ನಿಲ್ಲಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟವರು ಕೂಡಲೆ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.